ಬಾಳಿಗೊಂದು ಚಿಂತನೆ (4) - ಸಾಧನೆ

ಬಾಳಿಗೊಂದು ಚಿಂತನೆ (4) - ಸಾಧನೆ

ಸಾಧನೆ ಎಂದರೆ ಸಾಧಿಸುವುದು, ತಕ್ಷಣ ನಾವು ಅಂದುಕೊಳ್ಳುತ್ತೇವೆ. ಇಲ್ಲಿ ಸಾಧನೆ ಅಂದರೆ ತಪಸ್ಸು, ಯಾವುದರ ಬಗ್ಗೆ ಚಿಂತನೆಯೋ ಅದರ ಉದ್ದಗಲದ ಪರಿಜ್ಞಾನ ನಮಗಿರಬೇಕು. ಹಿಂದಿನ ಋಷಿಮುನಿಗಳು ಕಠಿಣವಾದ, ಘೋರ ತಪವನ್ನಾಚರಿಸಿ ಸಾಧನೆ ಮಾಡಿದ್ದರು ನಾವು ಓದಿದ ವಿಷಯ. ಆದರೆ ಈಗಿನ ಕಾಲಘಟ್ಟದಲ್ಲಿ ಸಾಧನೆ- ಬರೇ ಶೂನ್ಯ ಅಂಥ ಒಮ್ಮೊಮ್ಮೆ ಅನಿಸುವುದುಂಟು.

ದೊಡ್ಡ ದೊಡ್ಡ ಬ್ಯಾನರ್ ಗಳನ್ನು ನೋಡಿದಾಗ, ಅದರಲ್ಲಿ ರಾರಾಜಿಸುತ್ತಿರುವ ವ್ಯಕ್ತಿಗಳ ಬಗ್ಗೆ ಓದಿದಾಗ ಅಸಹ್ಯ ಅನಿಸುವುದೂ ಇದೆ. ಇವರು ಏನು ಸಾಧನೆ ಮಾಡಿದ್ದಾರಪ್ಪ ಅಂತ ನಮಗೆ ನಾವೇ ಪ್ರಶ್ನೆ ಹಾಕಿಕೊಳ್ಳುವ ಹಾಗೆ ಆಗುತ್ತದೆ. ಯಾವುದೋ ಮಾರ್ಗ ದುರಸ್ತಿಗೆ, ಕಟ್ಟಡಕ್ಕೆ, ಇನ್ನಾವುದೋ ಸಂಕ ಕಟ್ಟಲು, ಕಿರು ಸೇತುವೆ, ಆರಾಧನಾ ಕ್ಷೇತ್ರಗಳಿಗೆ ಅನುದಾನ ನೀಡಿ, ಅದರ ಪ್ರಚಾರ ನೋಡಿದಾಗ, ಅಯ್ಯೋ ಅನಿಸುವುದುಂಟು. ಯಾರದ್ದೋ ಹಣ, ಎಲ್ಲಮ್ಮನ ಜಾತ್ರೆ ಎಂಬ ಹಾಗೆ. ನಮ್ಮ ತೆರಿಗೆ ಹಣವನ್ನು ನಾವೇ ನೀಡಿ, ಇನ್ನು ಯಾವನದ್ದೋ ಹೆಸರು ಹಾಕಿ ಸಂಭ್ರಮಿಸುವುದು. ಇಲ್ಲಿ ಸಾಧನೆ ಶೂನ್ಯ. ಆದರೆ ಅವರದು ನಾವು ಬಿಡುಗಡೆ ಮಾಡಿದ್ದೇವೆ, ಅದೇ ದೊಡ್ಡ ಸಾಧನೆ ಎಂಬ ಮನೋಭಾವ ಇರುತ್ತದೆ.

ಪಾತ್ರೆಯಲ್ಲಿರುವ ಅಕ್ಕಿ ಮೃದುವಾಗಿ ಬೆಂದು ಅನ್ನ ಆಗಲು ತುಂಬಾ ಹೊತ್ತು ಒಲೆಯ ಮೇಲಿರಬೇಕು. ಅಂತೆಯೇ ನಮ್ಮ ಶರೀರವೆಂಬ ಗಡಿಗೆಯಲ್ಲಿರುವ ಜೀವಾತ್ಮನು ಪರಮಾತ್ಮನಾಗುವವರೆಗೂ ನಾವು ಸಾಧನೆ ಮಾಡಬೇಕು. ಇಲ್ಲಿ ಸಾಧನೆ ಎಂದರೆ ಬೆಂಕಿ. ಪಕ್ವವಾಗಬೇಕು.

ಇಂದಿನ ಸಾಧನೆಯ ಬಗ್ಗೆ ಹೇಳಹೊರಟರೆ ಕೊನೆ ಮೊದಲಿಲ್ಲ. ಎಲ್ಲವೂ ತನಗೇ ಬೇಕೆಂಬ ಹಂಬಲ. ಸಂಗೀತ, ನೃತ್ಯ, ಇನ್ನಷ್ಟು ಲಲಿತಕಲೆಗಳು ಸೇರಿ ಆರು ತಿಂಗಳಾಗಲು ಪುರುಸೊತ್ತಿಲ್ಲ ,ವೇದಿಕೆಯಲ್ಲಿ ಪ್ರದರ್ಶನ ಮಾಡಬೇಕು, ಅದು ಪತ್ರಿಕೆಗಳಲ್ಲಿ, ಫೇಸ್ಬುಕ್ನಲ್ಲಿ, ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಬರಬೇಕು. ಇದು ಸಾಧನೆ ಎಂಬ ಅಲ್ಪಮತಿ.

ಉದ್ಯೋಗ, ಕೀರ್ತಿ, ಸಂಪಾದನೆಯಲ್ಲಿ ಒಳ್ಳೆಯ ದಾರಿಯನ್ನು ಆಯ್ಕೆ ಮಾಡಿ ಸಾಧಿಸೋಣ ಆಗದೇ? ಏರಬೇಕೆಂಬ ಆಸೆ ಮನುಷ್ಯ ಸಹಜ.ಆದರೆ ಹಂತ ಹಂತವಾಗಿ ಏರೋಣ, ಒಮ್ಮೆಯೇ ಏರಿದರೆ, ಕೆಳಗೆ ಬೀಳುವುದು ನಿಶ್ಚಿತ. ಪರಿಶುಭ್ರತೆ ಇಲ್ಲದವ ಸಾಧಕನಾಗಲು ಸಾಧ್ಯವಿಲ್ಲ. ಬಾಹ್ಯ, ಆಂತರಿಕ ಎರಡೂ ಸ್ವಚ್ಛ,ಶುಭ್ರವಾಗಿದ್ದಾಗ ಸಾಧನೆ ತನ್ನಿಂದತಾನೆ ಬರುತ್ತದೆ.

ಒಂದು ಪಾತ್ರೆಯಲ್ಲಿ ಒಂದು ರಂಧ್ರವಿದ್ದರೆ ಸಾಕು, ಹತ್ತು ರಂಧ್ರಗಳು ಬೇಡ, ಹಾಗೆಯೇ ಸಾಧನೆಯ ಸಿದ್ಧಿಗಾಗಿ ನಿಗ್ರಹ ಬೇಕೇ ಬೇಕು. ಕಾಗದವನ್ನು ಸುರುಳಿ ಸುತ್ತಿ ಬಿಡಿಸಿದಾಗ, ಅದು ಮಡಚಿಕೊಳ್ಳುವುದು. ಪುನಃವಿರುದ್ಧ ದಿಕ್ಕಿನಲ್ಲಿ ಮಡಚಿ ಬಿಡಿಸಿದಾಗ ಸರಿಯಾಗುವುದು. ಹೀಗೆ ತಿಳಿದೋ ತಿಳಿಯದೆಯೋ ವಿಷಯ ವಾಸನೆಯಿಂದ ನಾವುಗಳು ತಪ್ಪು ಮಾಡುತ್ತೇವೆ. ಅಡ್ಡದಾರಿಯಿಂದ ಸಾಧನೆಗೆ ಇಳಿದು ಸಮಾಜದ ಕಣ್ಣಲ್ಲಿ ನಗೆಪಾಟಲಿಗೆ ಈಡಾಗುತ್ತೇವೆ. ಈ ಪ್ರಪಂಚದಲ್ಲಿ ಬೆಳಕು ಕಂಡ ನಾವುಗಳು ಉತ್ತಮ ಸಂಸ್ಕಾರವಂತರಾಗಿ, ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡುವ ಮೂಲಕ ಸಾಧನೆಯ ಶಿಖರವನ್ನು ಏರೋಣ.

-ರತ್ನಾ ಭಟ್ ತಲಂಜೇರಿ

ಚಿತ್ರ: ಶ್ರೇಯಸ್ ಕಾಮತ್, ಬೆಂಗಳೂರು