ಬಾಳಿಗೊಂದು ಚಿಂತನೆ - 41
*ಯಾವತ್ಸ್ವ ಸ್ಥಮಿದಂ ಕಲೇಬರಗೃಹಂ ಯಾವಚ್ಚ ದೂರೇ ಜರಾ
ಯಾವಚ್ಚೇಂದ್ರಿಯಶಕ್ತಿರಪ್ರತಿಹತಾ ಯಾವತ್ ಕ್ಷಯೋ ನಾಯುಷಃ/
ಆತ್ಮಶ್ರೇಯಸಿ ತಾವದೇವ ವಿದುಷಾ ಕಾರ್ಯಃ ಪ್ರಯತ್ನೋ ಮಹಾನ್
ಪ್ರೋದ್ದೀಪ್ತೇ ಭವನೇ ತು ಕೂಪಖನನಂ ಪ್ರತ್ಯುದ್ಯಮಃ ಕೀ ದೃಶಃ//
ನಮ್ಮ ಶರೀರದಲ್ಲಿ ಸ್ವಾಸ್ಥ್ಯ, ಆರೋಗ್ಯ ಇರುವಾಗಲೇ ನಾವು ಒಳ್ಳೆಯ ಕೆಲಸಗಳನ್ನು ಮಾಡಬೇಕು. ಇದೇ ಪ್ರಾಯದಲ್ಲಿ ನಮ್ಮ ಎಲ್ಲಾ ವ್ಯವಹಾರಗಳೂ ನಡೆಯುವುದು. ಒಂದಿಷ್ಟು ಕಷ್ಟದಲ್ಲಿದ್ದವಗೆ ಸಹಾಯಹಸ್ತ ನೀಡುವುದು ಧರ್ಮ. ಮುಪ್ಪು ಎನ್ನುವುದು ಓಡೋಡಿ ಬರುವ ಪ್ರಕ್ರಿಯೆ. ಇಂದ್ರಿಯಗಳ ಪಟುತ್ವ ಕುಗ್ಗಿದ ಮೇಲೆ ಅಸಹಾಯಕತೆ ನಮ್ಮನ್ನು ಆವರಿಸುತ್ತದೆ. ಆಯುಷ್ಯ ಇರುವಾಗಲೇ, ಸತ್ಯ, ನ್ಯಾಯ, ಧರ್ಮ, ಸಹಕಾರ, ಆತ್ಮಶ್ರೇಯಸ್ಸಿನ ವರ್ತನೆಗಳು ನಮ್ಮದಾಗಿರಲಿ. ಮುಂದೆ ಉಪಯೋಗಕ್ಕೆ ಬರಬಹುದು. * ಬಿತ್ತಿದ್ದನ್ನೇ ನಾವು ಮತ್ತೆ ಪಡೆದು ಉಣ್ಣುವುದಲ್ಲವೇ? *
*ಕಷ್ಟ ಬಂದಾಗ ವೆಂಕಟರಮಣ* ಅನ್ನದೆ, ಮನೆಗೆ ಬೆಂಕಿ ಬಿದ್ದಾಗ ನೀರಿಗಾಗಿ ಬಾವಿ ತೋಡದೆ* ಇರೋಣ. ನಮ್ಮ ಜಾಗೃತೆ ಯಲ್ಲಿ ನಾವಿರಬೇಕು.
ಒಂದಷ್ಟು ಪುಣ್ಯದ ಕೆಲಸಕಾರ್ಯಗಳನ್ನು ಮಾಡೋಣ.ಹೇಳುವವರು *ಇವನಿಗೆ ಬೇರೆ ಉದ್ಯೋಗವಿಲ್ಲ* ಹೇಳಿಯಾರು. ಅದನ್ನು ಕೇಳಿಯೂ ಕೇಳದಂತಿದ್ದರಾಯ್ತು. ಒಬ್ಬ ಒಳ್ಳೆಯದು ಮಾಡಲು ನೋಡುವುದಾದರೆ, ಹಾಳು ಮಾಡಲು ಹತ್ತಾರು ಕೈಗಳಿರುತ್ತವೆ. ಮೇಲೊಬ್ಬ ಕುಳಿತವನ ಚಕ್ಷುಗಳ ನೋಟ ಎಲ್ಲವನ್ನೂ ವೀಕ್ಷಣೆ ಮಾಡ್ತಾನೆ ಎಂಬ ಪ್ರಜ್ಞೆ ನಮ್ಮಲ್ಲಿದ್ದರೆ ಸಾಕು.
-ರತ್ನಾ ಭಟ್, ತಲಂಜೇರಿ
ಆಧಾರ: ಸಂಸ್ಕೃತಿ ಸಂಚಾರ