ಬಾಳಿಗೊಂದು ಚಿಂತನೆ - 43
ನಾವು ಕತ್ತಲೆಯಲ್ಲಿ ನಡೆಯಲು ಕಷ್ಟ ಪಡುತ್ತೇವೆ. ಪರಿಚಿತ ದಾರಿ ಆದರೂ, ಸ್ವಲ್ಪ ಭಯವಾಗುವುದು ಸಹಜ. ಹುಳ ಹುಪ್ಪಡಿಗಳೋ, ಹಾವುಗಳೋ ಇದ್ದರೆ ಗೊತ್ತಾಗದು. ಒಬ್ಬರೇ ನಡೆಯುತ್ತಿರುವಾಗ, ಕಾರ್ಗತ್ತಲಾದರೆ ಕೇಳುವುದೇ ಬೇಡ. ಒಮ್ಮೆ ಒಣಗಿದ ತರೆಗೆಲೆ ಪರಪರ ಹೇಳಿದರೂ ಹೆದರಿಕೆ ಆಗುವ ಸಾಧ್ಯತೆ ಇದೆ. ಹಾಗಾದರೆ ಪರಿಹಾರವೇನು? ಜೊತೆಯಲ್ಲಿ ಬೆಳಕಿನ ಆಸರೆಯನ್ನು ಪಡೆಯುವುದು ಅಥವಾ ತರುವುದು. ಹಾಗೆಯೇ ಅಲ್ಲವೇ ನಮ್ಮ ಜೀವನ ಸಹ. ಕತ್ತಲಾಯಿತು, ಕಷ್ಟ ಆಯಿತು ಅಂಥ ಭಯಭೀತರಾಗುವುದು, ಹೆದರುವುದು ಎಷ್ಟು ಸರಿ? ಬೆಳಕಿಗಾಗಿ ಹೋರಾಡೋಣ, ಬೆಳಕನ್ನು ಅರಸುತ್ತಾ ಹೋಗೋಣ. ಆಗ ಪರಿಹಾರ ಸಿಕ್ಕೇ ಸಿಗುತ್ತದೆ, ಆದರೆ ನಂಬಿಕೆ ಬೇಕು. ಹತಾಶೆ ಸಲ್ಲದು.
ಬಿಸಿಲಲ್ಲಿ ನಡೆಯುವಾಗ ನೆರಳಿನ ಅವಶ್ಯಕತೆ ಇದೆ. ನೆರಳಿಗಾಗಿ ಕೊಡೆ (ಛತ್ರಿ) ಯನ್ನೋ, ಮರದ ಕೆಳಗೆ ನಿಂತು ಕೊಳ್ಳುವುದೂ ಇದೆ. ಇದೇ ರೀತಿ ನಮಗೆ ಸ್ನೇಹಿತರೇ ಸಹಕಾರ ಮಾಡಬಹುದಲ್ಲವೇ? ಉತ್ತಮ ಗೆಳೆಯರು ಆಲದ ಮರದಂತೆ. ಬದುಕಿನ ಹಾದಿಯಲಿ ಸಾಗುವಾಗ, ಒಳ್ಳೆಯ ಸ್ನೇಹಿತರೇ ನಮ್ಮ ಕಷ್ಟ ಸುಖಕ್ಕೆ ಹೆಗಲು ಕೊಡುವವರು, ನೊಂದಾಗ ಧೈರ್ಯ ತುಂಬುವವರು, ಸಾಂತ್ವನ ಹೇಳುವವರು.ಉತ್ತಮ ಸ್ನೇಹಿತರನ್ನು ಎಂದೂ ಕಳೆದುಕೊಳ್ಳಬಾರದು.
-ರತ್ನಾ ಭಟ್, ತಲಂಜೇರಿ