ಬಾಳಿಗೊಂದು ಚಿಂತನೆ - 44
*ಹೆದರಿಕೆ, ಹೆದರುವುದು, ಭಯಬೀಳುವುದು* ಇದೆಲ್ಲಾ ಒಂದೇ ಪದಗಳು, ಹೇಳುವ ಧಾಟಿಯಲ್ಲಿ ವ್ಯತ್ಯಾಸ ಅಷ್ಟೆ. ಹುಟ್ಟಿದ ಮಗುವಿಗೂ ಭಯ ಇರುತ್ತದೆ. ಮಕ್ಕಳ ವೈದ್ಯರು ಹೇಳುವುದು ಕೇಳಿದ್ದೇನೆ, ಪುಟ್ಟ ಶಿಶುವನ್ನು ಹೆತ್ತಮ್ಮ ಕಂಕುಳ ಎಡೆಯಲ್ಲಿ ಆದಷ್ಟೂ ಮಲಗಿಸಿಕೊಳ್ಳಬೇಕೆಂದು. ಹೌದು ಅದರಲ್ಲಿ ಅರ್ಥವಿದೆ. ತಾಯ ಗರ್ಭದಲ್ಲಿ ಬೆಚ್ಚಗೆ ಮಲಗಿದ್ದ ಮಗು, ಹೊರ ಪ್ರಪಂಚದ ಬೆಳಕನ್ನು ಕಂಡಾಗ ತಲ್ಲಣಿಸುತ್ತದೆ.ಆಗ ಭಯ ಸಹಜ. ಒಂದು ಹಾವನ್ನು ಕಂಡಾಗ ಭಯ ಸಹಜ,ಆಗ ದೂರ ಸರಿಯುತ್ತವೆ.ಇದಕ್ಕೆ *ಗಾಬರಿ* ಎನ್ನಬಹುದು, ಹೃದಯ ಬಡಿತ ಹೆಚ್ಚಾಗುತ್ತದೆ.
ಶಾಲಾ ಮಕ್ಕಳಿಗೆ ಕೆಲಸ, ಬರವಣಿಗೆ ಸರಿ ಕ್ಲಪ್ತ ಸಮಯಕ್ಕೆ ಮಾಡದೆ ಇದ್ದಾಗ, ಎಲ್ಲಿಯಾದರೂ ಶಿಕ್ಷಕರು ಗದರಿಸಬಹುದೆಂಬ ಭಯ. ಮಕ್ಕಳಿಗೆ ಹೆತ್ತವರ ಭಯ (ಈಗೀಗ ಇಲ್ಲ). ನೌಕರನಿಗೆ ಮೇಲಾಧಿಕಾರಿಯ ಭಯ, ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಭಯ ಬೇಕು, ಆದರೆ ಗೌರವದ ಹೆದರಿಕೆ ಜೀವನದಲ್ಲಿ ಇರಲೇ ಬೇಕು.
ಇತ್ತೀಚೆಗೆ ಹೆದರಿಕೆ ಕೋವಿಡ್(ಕೊರೋನಾ)ದ್ದೇ ಆಗಿದೆ. ಇಲ್ಲಿ ಮಾಡಬೇಕಾದ್ದು ಏನು? ಹೆದರಿಕೆಯನ್ನು ಹೋಗಲಾಡಿಸುವ ಕೆಲಸವಾಗಬೇಕು. ವೈದ್ಯರು ಹೇಳುವುದೇನು? ಭಯ ಬೇಡ *ಜಾಗೃತೆ ಮತ್ತು ವಿಶ್ರಾಂತಿ* ಮುಖ್ಯ. ಆದರೆ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳಿದ್ದಾಗ ತುಂಬಾ ಜಾಗೃತೆ ವಹಿಸಬೇಕು ಎಂಬುದಾಗಿ ಮತ್ತು ಇನ್ನಿತರ ಶರೀರದ ಸಮಸ್ಯೆಗಳಿದ್ದಾಗ.
ಮಾಧ್ಯಮಗಳ ಹೇಳಿಕೆಗಳು ಎಷ್ಟು ಉಪಕಾರವೋ ಅಷ್ಟೇ ಉಪದ್ರವೂ ಆಗ್ತಾ ಇದೆ. ಕೇಳಿದಾಗಲೇ ಶರೀರದಲ್ಲಿ ಹೆದರಿಕೆ ಮನೆ ಮಾಡುತ್ತದೆ. ಇಂಥ ಸಂದರ್ಭದಲ್ಲಿ ಸಾಂತ್ವನ, ಸಮಜಾಯಿಷಿಕೆ, ಧೈರ್ಯ, ಒಂದಷ್ಟು ಆರೋಗ್ಯ ಮಾಹಿತಿಗಳು (ಕಷಾಯ, ಉತ್ತಮ ಆಹಾರ) ಇತ್ಯಾದಿ ನೀಡಿ ಸ್ವಲ್ಪ ಭಯವನ್ನು ಹೋಗಲಾಡಿಸುವಲ್ಲಿ ನಾವೆಲ್ಲ ಪ್ರಯತ್ನಿಸೋಣ. ಆದಷ್ಟೂ ಮಾಧ್ಯಮಕ್ಕೆ ಜೋತು ಬೀಳುವುದನ್ನು ಕಡಿಮೆ ಮಾಡಿದಾಗ ಎಲ್ಲವೂ ಸರಿಯಾಗ ಬಹುದು ಅಥವಾ ನಮಗೆ ಬೇಕಾದ್ದನ್ನು ಮಾತ್ರ ಸ್ವೀಕರಿಸುವ. ಇದು ಎದೆಗಟ್ಟಿ ಇದ್ದವರಿಗೆ ಮಾತ್ರ ಆದೀತಷ್ಟೆ. ವಯಸ್ಸಾದವರಿಗೆ ಕಷ್ಟ.
ಮನುಷ್ಯನ ಮನಸ್ಸಿನಲ್ಲಿ ಮನೆ ಮಾಡಿದ ಭಯವನ್ನು ಹೋಗಲಾಡಿಸಲು *ಧ್ಯಾನ, ಯೋಗ, ಪ್ರಾಣಾಯಾಮ, ಒಳ್ಳೆಯ ಪುಸ್ತಕಗಳನ್ನು ಓದುವುದು, ಮನೆಯ ಸದಸ್ಯರೊಂದಿಗೆ ಕಲೆತು ಬೆರೆತು ಇರುವುದು, ಕೆಟ್ಟ ಆಲೋಚನೆಗಳನ್ನು ಮಾಡದಿರುವುದು, ಬಂಧುಗಳೊಂದಿಗೆ, ಹಿತೈಷಿಗಳೊಂದಿಗೆ ದೂರವಾಣಿ ಸಂಭಾಷಣೆ, ತೋಟಗಾರಿಕೆ* ಇತ್ಯಾದಿ ಹವ್ಯಾಸ ಅಭ್ಯಾಸ ಮಾಡೋಣ, ಇತರರನ್ನು ಪ್ರೇರೇಪಿಸೋಣ.ಇದ್ದುದರಲ್ಲಿಯೇ ನೆಮ್ಮದಿಯ ಬದುಕನ್ನು ನಡೆಸೋಣ.
-ರತ್ನಾ ಕೆ.ಭಟ್ ತಲಂಜೇರಿ
ಚಿತ್ರ: ಇಂಟರ್ನೆಟ್ ತಾಣ