ಬಾಳಿಗೊಂದು ಚಿಂತನೆ - 46
ಎಲ್ಲಿ *ಹೇಡಿತನ, ಅಂಜಿಕೆ ಮತ್ತು ದ್ವೇಷ* ಇದೆಯೋ ಅಲ್ಲಿ ಭಗವಂತ ಸಹ ನಿಲ್ಲಲಾರನಂತೆ, ಹೀಗೆ ಹೇಳಿದವರು ಶ್ರೀ ರಾಮಕೃಷ್ಣ ಪರಮಹಂಸರು. ಹೌದಲ್ವಾ ಸ್ನೇಹಿತರೇ. ಹೇಡಿತನ ಇದ್ದವನಿಗೆ ನಾವೆಷ್ಟು ಹೇಳಿದರೂ ಪ್ರಯೋಜನವಿಲ್ಲ. ಅಂಜಿಕೆ ಸಹ ಅಷ್ಟೆ. ಇವೆರಡೂ ಒಂದೇ. ಅವರನ್ನು ಮೂಗುದಾರ ಹಾಕಿ ಎಳೆದರೂ ಮುಂದೆ ಬರಲಾರರು.ತಿಳುವಳಿಕೆ ಹೇಳಿದರೆ ಒಮ್ಮೆ ಮಾತ್ರ, ಮತ್ತೆ ಮೊದಲಿನಂತೆಯೇ.
ಗಾದೆ ಮಾತಿದೆಯಲ್ಲ"ನಾಯಿಬಾಲ ನಳಿಕೆಯಲ್ಲಿ ಹಾಕಿದರೆ ಒಮ್ಮೆ ಮಾತ್ರ, ಮತ್ತೆ ಯಥಾಸ್ಥಿತಿ" ಹಾಗೆ. ಇವರು ಒಂದು ಹಗ್ಗವನ್ನು ಕಂಡರೂ ಹಾವೆಂದು ಭ್ರಮಿಸುವರು.ಭ್ರಮೆ ಹೆಚ್ಚು ಇವರಲ್ಲಿ. *ದ್ವೇಷ* ಎನ್ನುವುದು ಏನೂ ಬೇಕಾದರೂ ಮಾಡಿಸಬಹುದು. ಉಳಿಸಲೂ ಬಹುದು, ಸರ್ವನಾಶ ಮಾಡಬಹುದು. ಅದು ಒಂದು ರೀತಿಯ ಬೆಂಕಿ ಇದ್ದಂತೆ. ಬೆಂಕಿ ಸುಟ್ಟು ನಾಶ ಮಾಡಬಹುದು. ಸಣ್ಣ ಕಿಡಿಯೊಂದು ಸಾಕು. ದ್ವೇಷ ಸಿಟ್ಟು, ಕ್ರೋಧ, ಕೋಪ ಎಲ್ಲಾ ಒಂದೇ ತಕ್ಕಡಿಯಲ್ಲಿ ಕುಳಿತುಕೊಳ್ಳುವವು. 'ಕ್ರೋಧ ಜ್ಞಾನ ನಾಶನಂ'ಭಗವಂತ ತಮೋಗುಣಕ್ಕೆ ಯಾವತ್ತೂ ಒಲಿಯಲಾರ. ಅದನ್ನು ಮೀರಿದವನು ಆತ. ಹಾಗಾದರೆ ಏನು ಪರಿಹಾರ? ತಮವನ್ನು ತ್ಯಜಿಸಿ, ಒಳ್ಳೆಯತನ ರೂಢಿಸಿಕೊಳ್ಳುವುದು. ಭಗವಂತ ಆಲಿಸುವುದು ಕೇವಲ ಹೃದಯದ ಕೂಗನ್ನು ಮಾತ್ರ. ಬಂಗಾರ, ವಸ್ತ್ರ, ವೈಢೂರ್ಯ, ಆಡಂಬರ ಅವನಿಗೆ ಬೇಡ. ಮಾನವನ ಹೃದಯವನ್ನು ಕ್ಷೀರಸಾಗರಕ್ಕೆ ಹೋಲಿಸುವರು.ಅಲ್ಲಿ ವಾಸಿಸುವವ ನಮಗೆ ತಿಳಿದೇ ಇದೆ. ಕ್ಷೀರವೆಂದರೆ ಶುಭ್ರ, ಶ್ವೇತ, ಬಿಳಿ. ಸಾತ್ವಿಕ ಭಾವ. ಇದರಲ್ಲಿ ಪ್ರೇಮ, ಸತ್ಯ, ಶಾಂತಿ, ಸಹನೆ, ಸಹಾನುಭೂತಿ ಅಡಕವಾಗಿದೆ. ಹಾಗಾದರೆ ಅಂಥ ಹೃದಯದಲ್ಲಿ ತಮೋಗುಣ ಬೇಡವಲ್ಲವೇ? ತಮ ಎಂದರೆ ಇಲ್ಲಿ *ಕ್ಷಾರ* ಕ್ಕೆ ಹೋಲಿಸಬಹುದು. ಅದು ತೊಂದರೆ, ಅವನಿಗೂ ಉಳಿದವರಿಗೂ. ಕ್ಷೀರಸಾಗರವಾಗಬೇಕಾದ ಮನುಷ್ಯನ ಹೃದಯ ಕ್ಷಾರಸಾಗರವೆನಿಸಿ, ಹಾಲಾಹಲವನ್ನೇ ಸೃಷ್ಟಿ ಮಾಡುತ್ತಿದೆ. ಅದನ್ನೆಲ್ಲ ನಾವು ಉಣ್ಣುತ್ತಿದ್ದೇವೆ. ದ್ವೇಷವನ್ನು ಬಿಟ್ಟು, ತಗ್ಗಿ ಬಗ್ಗಿ ನಡೆಯೋಣ. ಅಹಮಿಕೆ ಬೇಡ. ಎಲ್ಲಿ ನಾವು ಬಾಗುವುದಿಲ್ಲವೋ ಅಲ್ಲಿ ಅಹಂ ತಲೆಯೆತ್ತಿ ನೋಡುತ್ತದೆ. ಅದಕ್ಕೆ ಅವಕಾಶ ಬೇಡ.
ಹಿಂದೆ ಕೋಪದಿಂದ ಋಷಿ ಮುನಿಗಳು ಬಹಳ ಕಾಲಗೈದ ತಪಸ್ಸಿನ ಫಲಗಳನ್ನು ಕ್ಷಣದಲ್ಲಿ ನಾಶಮಾಡಿಕೊಂಡ ಹಲವಾರು ಉದಾಹರಣೆಗಳನ್ನು ಓದುತ್ತೇವೆ. ಕೋಪ ಬಂದಾಗ ಮೌನ ತಾಳೋಣ. ಶಾಂತಿಃ ಮಂತ್ರ ಸೂಕ್ತ. ಇವುಗಳನ್ನೆಲ್ಲ ಬಿಟ್ಟು, ಇರುವಷ್ಟು ದಿನ ಚೆನ್ನಾಗಿರಲು ಪ್ರಯತ್ನಿಸೋಣ, ಆಯುಷ್ಯ ಆರೋಗ್ಯ ಎರಡೂ ಇರಬಹುದು. ಸರ್ವವ್ಯಾಪಿಯಾದ ಚೈತನ್ಯವು ನಮ್ಮ ಮನಸ್ಸಿನಲ್ಲಿರುವ ಭಯ, ಆತಂಕ, ಹೆದರಿಕೆ, ಅಂಜಿಕೆ ಎಲ್ಲವನ್ನೂ ಹೋಗಲಾಡಿಸಿ ನೆಮ್ಮದಿ ಯನ್ನು ನೀಡುತ್ತದೆ. ತ್ರಿಕರಣಪೂರ್ವಕವಾಗಿ ಬದುಕನ್ನು ಸಾಧ್ಯವಿದ್ದಷ್ಟೂ ಹಸನು ಮಾಡಿಕೊಳ್ಳಲು ಪ್ರಯತ್ನಿಸೋಣ.
ಓಂ ಶಾಂತಿಃ ಶಾಂತಿಃ ಶಾಂತಿಃ
-ರತ್ನಾ ಭಟ್, ತಲಂಜೇರಿ
ಚಿತ್ರ: ಇಂಟರ್ನೆಟ್ ತಾಣ