ಬಾಳಿಗೊಂದು ಚಿಂತನೆ - 48

ಒಬ್ಬ ಸಾಹಿತಿ, ಬರಹಗಾರ ತನಗೆ ಅನಿಸಿದ್ದನ್ನು ಖಂಡಿತವಾಗಿಯೂ ಬರೆಯಬಹುದು. ಅದು ಅವನ ಹಕ್ಕು. ಆತ ಬರೆದ ಸಾಹಿತ್ಯ ಪ್ರಕಾರವನ್ನು ಓದಿದ ಓದುಗ ಅದನ್ನು ತನ್ನದೇ ಧಾಟಿಯಲ್ಲಿ ವಿಮರ್ಶೆ ಮಾಡಬಹುದು. ಅದು ಓದುಗನ ಹಕ್ಕು, ಸ್ವಾತಂತ್ರ್ಯ ಎರಡೂ ಕಡೆಗಿದೆ. ಅವ ಟೀಕಿಸಲಿ, ಹೊಗಳಲಿ, ತೆಗಳಲಿ ಏನು ಬೇಕಾದರೂ ಮಾಡಲಿ.ಹಾಗೆಂದು ಬರೆಯುವವನಿಗೆ ಮತ್ತು ವಿಮರ್ಶೆ ಮಾಡುವವನಿಗೆ *ಒಬ್ಬನ ವೈಯಕ್ತಿಕ ಬದುಕನ್ನು* ಕೆಣಕುವ ಅಧಿಕಾರವಿಲ್ಲ. *ತೇಜೋವಧೆ* ಮಾಡುವುದಂತೂ ಮಹಾಪಾಪದ ಕೆಲಸ. ಕೇವಲ ಬರಹ ಮಾತ್ರ ಮುಟ್ಟುವ ಅಧಿಕಾರವಿರುವುದು.
ಒಂದು ವೇಳೆ ಬರೆದವನ ವೈಯಕ್ತಿಕ ಜೀವನಕ್ಕೆ ಕೈಹಾಕಿದ ಎಂದಾದರೆ ಅದು ಅವನ ಅನಾಗರೀಕ ವರ್ತನೆಯಾದೀತು. ಒಬ್ಬ ಬರಹಗಾರನ ವೈಯಕ್ತಿಕ ವಿಷಯಕ್ಕೆ ಕೈಹಾಕುವ ಧೈರ್ಯ ಅವನ ಜೀವನ ಚರಿತ್ರೆ ಬರೆಯುವವನಿಗೆ ಮಾತ್ರ. ಉಳಿದವರು ಕೃತಿಗಳನ್ನು ನೋಡಲಿ.
ನಾವು ನೋಡಿದ ಹಾಗೆ ಈಗ ನಡೆಯುತ್ತಿರುವುದು ತದ್ವಿರುದ್ಧ. ನಾನೇ ಭಾರೀ ದೊಡ್ಡ ಬರವಣಿಗೆಯವ ಎಂಬುದು ನೆತ್ತಿಗೇರಿ, ಕಣ್ಣು ಕಾಣಿಸದಾಗಿದೆ, ಕಿವಿ ಕೇಳಿಸದಾಗಿದೆ, ಬಾಯಿ ನಾಲಿಗೆಗಳು ಇದ್ದೂ ಇಲ್ಲದಾಗಿದೆ. ಮನಸ್ಸು ಹುಳುಕು, ಮತ್ಸರಗಳ ಕೇಂದ್ರವಾಗಿ ಶತಚ್ಛಿದ್ರವಾಗಿದೆ. ವಾದವಿವಾದಗಳು, ಕುತರ್ಕಗಳು, ಮೊಂಡುವಾದಗಳು ತುಂಬಿ ಹೊಲಸು ಗೊಬ್ಬರವಾಗುತ್ತಾ ಇದೆ. ನಿಜವಾದ ಗೊಬ್ಬರ ಗಿಡಮರಗಳಿಗೆ ಹಾಕಿದರೆ ರುಚಿಯಾದ ಫಲ ಕೊಡಬಹುದು, ಹಾಗಾದರೂ ಋಣ ತೀರಿಸಬಹುದು.ಆದರೆ ಇಲ್ಲಿ ಮನಸ್ಸನ್ನು ರಾಡಿ ಮಾಡುವ ಎಲ್ಲಾ ಹುನ್ನಾರಗಳೂ ನಡೆಯುತ್ತದೆ.
ಈಗ ಪ್ರಜ್ಞಾವಂತ ಅನಿಸಿಕೊಂಡವ ಸ್ಥಿತಪ್ರಜ್ಞನಾಗುವನು, ಆಗಲೇಬೇಕು. ಅಹಂಕಾರಕ್ಕೆ ಉದಾಸೀನವೇ ಔಷಧ.ರೋಗದ ಮೂಲವನ್ನು ಕಂಡು ಹಿಡಿದ ಆತ ನಿರ್ಲಿಪ್ತನಾಗುವ. ಅವನ ಸಾಹಿತ್ಯ ಲೋಕದಲ್ಲಿ ಸಂಖ್ಯೆಗಳು ಏರುತ್ತಾ ಹೋಗಲು ಯಾವುದೂ ಅಡ್ಡಿಯಾಗದು.
ಕೆ.ಎಸ್.ನರಸಿಂಹಸ್ವಾಮಿ ಹಿರಿಯ ಸಾಹಿತಿಗಳು ಬರೆದ ಒಂದು ಸಾಲು ನೆನಪಾಗುತ್ತಿದೆ.
*ದೀಪವು ನಿನ್ನದೆ, ಗಾಳಿಯೂ ನಿನ್ನದೇ*
*ಆರದಿರಲಿ ಬೆಳಕು!*
*ಕಡಲು ನಿನ್ನದೆ, ಹಡಗೂ ನಿನ್ನದೇ*
*ಮುಳುಗದಿರಲಿ ಬದುಕು*
ಎಲ್ಲಾ ಮುಗಿದೇ ಹೋಯಿತೆಂಬ ಭ್ರಮೆ, ಬೇಸರಗಳೇಕೆ? ಎಲ್ಲಾ ಆ ಕಣ್ಣಿಗೆ ಕಾಣದವನಿಗೆ ಬಿಟ್ಟದ್ದಲ್ಲವೇ? ಅವನೇ ನೋಡಿಕೊಳ್ಳುವ .
*ಕಲ್ಲಾಗು ಕಲ್ಲಾಗು! ಬಾಳ ಬಿರುಗಾಳಿಯಲಿ*
*ಅಲ್ಲಾಡದೆಯೆ ನಿಲ್ಲು ನಿಲ್ಲು ಜೀವ!*
ಯಾವ ಬಿರುಗಾಳಿ ಬೀಸಿಬಂದರೂ ಕಲ್ಲಿನಂತೆ ನಿಂತರೆ ,ಬಂದ ದಾರಿಗೆ ಸುಂಕವಿಲ್ಲವೆಂದು ಹಿಂದಿರುಗಿ ಹೋಗಿಬಿಡುತ್ತದೆ,ಹಾಗೆಯೇ ಅಲ್ಲವೇ ನಮ್ಮ ಬದುಕು ಸಹ. ಕವಿಗಳಾದ ಗೋಪಾಲಕೃಷ್ಣ ಅಡಿಗರ ಈ ಮಾತು ದೃಢ ಸಂಕಲ್ಪದ ಧ್ಯೋತಕ.
*ತಲೆ ಗಟ್ಟಿಯಾಗಿದೆ ಎಂದು ಬಂಡೆಕಲ್ಲಿಗೆ ಬಡಿದರೆ ನೋವಾಗುವುದು ಬಂಡೆಕಲ್ಲಿಗಲ್ಲ,ಬಡಿದವನಿಗೆ.*
ಸಾಹಿತ್ಯ ಗಟ್ಟಿಯಾಗಿ ಬೇರೂರಲು ಎರಡೂ ಬೇಕು.ಸಾಹಿತ್ಯ ಎಂಬುದು ಸಜ್ಜನ ದುರ್ಜನರ ಸಮ್ಮಿಲನ. ಅಧ್ಯಯನ ಒಂದು ತಪಸ್ಸು. ಅದನ್ನು ಸಾಧಿಸಲು ನಿರಂತರ ಅಧ್ಯಯನ, ಬರವಣಿಗೆ, ಚರ್ಚೆ, ಗೋಷ್ಠಿ, ಅನುಭವ, ಅನುಕರಣೆ ಎಲ್ಲವೂ ಬೇಕು.ಮುಖ್ಯ ತಾಳ್ಮೆಯಿರಬೇಕು. ಬರಹದಲ್ಲಿ ಸೊಗಸಿರಲಿ, ಸತ್ಯಗಳು ವಿಜೃಂಭಿಸಲಿ. ಜೀವನದ ಔನ್ನತ್ಯದ ಪರಿಚಯವಾಗಲಿ. ನಮ್ಮ ನಮ್ಮ ಅಂತರವಾಣಿಯನ್ನು ಗುರುವಾಗಿ ಸ್ವೀಕರಿಸಿ ಬರೆಯಲು ಹೊರಟಾಗ ಎಲ್ಲವೂ ಸುಖಮಯ, ಧನಾತ್ಮಕ ಚಿಂತನೆ ಹೊಮ್ಮುವುದು. ಋಣಾತ್ಮಕಕ್ಕೆ ಆಸ್ಪದವೇ ಇಲ್ಲ. ಬರಹ, ವಿಮರ್ಶೆ, ಅಂತರವಾಣಿಯನ್ನು ತೆರೆದಿಟ್ಟು, ಜೀವನ ದರ್ಶನಕ್ಕೆ ಹತ್ತಿರವಾದ ಸಾಹಿತ್ಯ ಪ್ರಕಾರಗಳು ಹೊರಹೊಮ್ಮಲೆಂಬ ಆಶಯವಾಗಿದೆ.
-ರತ್ನಾ ಕೆ.ಭಟ್, ತಲಂಜೇರಿ
ಆಧಾರ:ಸಾಹಿತಿಗಳ ಜೀವಾಳ.