ಬಾಳಿಗೊಂದು ಚಿಂತನೆ (5) - ನೋವು

ಬಾಳಿಗೊಂದು ಚಿಂತನೆ (5) - ನೋವು

ಇಲ್ಲಿ ನೋವು ಅಂದಾಕ್ಷಣ ನಮಗೆ ಕಣ್ಣೆದುರು ಬರುವುದು ಯಾತನೆ ಅಥವಾ ಗಾಯ, ಅನಾರೋಗ್ಯದ ಬೇನೆಗಳು. ಇದು ಆ ನೋವಲ್ಲ. ಶಾಶ್ವತವಾಗಿ ಮನಸ್ಸಿನಲ್ಲಿ ಮನೆ ಮಾಡುವ, ಎಷ್ಟು ಮರೆಯಬೇಕೆಂದರೂ ಮರೆಯಲು ಸಾಧ್ಯವಾಗದ ನೋವು. ಮಾತಿನ ನೋವು ಅಷ್ಟೂ ಆಳಕ್ಕೆ ದೇಹದಲ್ಲಿ ಬಲವಾಗಿ ಸ್ಥಾನಪಡೆದುಕೊಂಡು, ಜಪ್ಪಯ್ಯ ಅಂದರೂ ಹೊರಹೋಗದು.

ಯಾರೋ ಓರ್ವ ವ್ಯಕ್ತಿ ನೋಡಲು ಸುಂದರ, ಸುಸಂಸ್ಕೃತನಿರಬಹುದು. ಆದರೆ ಅವನಾಡುವ ಮಾತು ಒಮ್ಮೊಮ್ಮೆ ಅಪ್ಪಿತಪ್ಪಿ ಮನಸ್ಸನ್ನು ಹಿಂಡುವಂತಿದ್ದರೆ ಆ ವೇದನೆಯನ್ನು ಸಹಿಸಲು ಕಷ್ಟವಲ್ಲವೇ? ಮಾತಿನಲ್ಲಿಯೇ ಚಾಟಿ ಏಟನ್ನು ಬೀಸಿ ಸಂತಸ ಪಡುವ ವಿಘ್ನಸಂತೋಷಿಗಳಿದ್ದಾರೆ. ಅವರಿಗೆ ತಾವಾಡುವ ನುಡಿಗಳ ಮೇಲೆ ನಿಗಾ ಇಲ್ಲ. ಏನು ಹೇಳ್ತಾರೆ ಅನ್ನುವ ಪ್ರಜ್ಞೆಯೇ ಇಲ್ಲ. ಆದರೆ ಎದುರು ಕುಳಿತು ಕೇಳಿಸಿ ಕೊಂಡವನಿಗೆ 'ಸತ್ತಿದೆ ಸುಟ್ಟಿಲ್ಲ' ಎಂಬ ಪರಿಸ್ಥಿತಿ ಆಗುವುದು. ಮೈಮೇಲೆ ಪ್ರಜ್ಞೆ ಇಟ್ಟು, ನಾಲ್ಕು ಒಳ್ಳೆಯ ಮಾತುಗಳನ್ನಾಡಿದರೆ ನಮ್ಮ ಗಂಟೇನು ಖಾಲಿಯಾಗದು.

ನಮ್ಮಲ್ಲಿ ಕಷ್ಟದಲ್ಲಿದ್ದವನಿಗೆ ಸಹಾಯ ಮಾಡಲು ಏನೂ ಇಲ್ಲ ಎಂದಾದರೆ, ನಾಲ್ಕು ಒಳ್ಳೆಯ ಮಾತುಗಳನ್ನು ಆಡುವುದರ ಮೂಲಕ ಪ್ರೋತ್ಸಾಹಿಸಬಹುದಲ್ಲವೇ? ಯಾರೋ ಒಬ್ಬ ರೋಗದಿಂದ ನರಳುತ್ತಾ ಇದ್ದಾಗ ನೋಡಲು ಹೋದ ನಾವು, 'ಇದು ಭಯಂಕರ ಗಂಭೀರ ಕಾಯಿಲೆ ಮಹರಾಯ, ಇದಕ್ಕೆ ಔಷಧಿಯೇ ಇಲ್ಲ 'ಹೇಳಿದಾಗ ಆ ರೋಗಿಯ ಅರ್ಧ ಜೀವ ಹೋಗಬಹುದು. ಅದರಿಂದ ಪ್ರೀತಿಯಲ್ಲಿ ನಿಧಾನವಾಗಿ ಬೇರೆ ಬೇರೆ ರೀತಿಯ ಕೆಲವು ಮದ್ದುಗಳ ಬಗ್ಗೆ ತಿಳಿಸಬಹುದು, ವೈದ್ಯರ ಮಾತು ಕೇಳಿ, ಅವರು ನೀಡಿದ ಔಷಧಿ ಸೇವಿಸು, ಒಳ್ಳೆಯ ಪೌಷ್ಟಿಕಾಂಶದ ಆಹಾರ ತಿಂದಾಗ ಎಲ್ಲಾ ಸರಿ ಆಗಬಹುದು, ಎಂಬ ಸಮಾಧಾನದ ಮಾತುಗಳನ್ನು ಹೇಳಬಹುದು. ಈಗ ನಮ್ಮ ಕೊರೊನಾ ವೈರಸಿನ ಕಥೆಯೂ ಅಷ್ಟೆ. ತಾತ್ಸಾರ ಮಾಡುವ ಹಾಗಿಲ್ಲ. ತುಂಬಾ ಜಾಗೃತೆ ಬೇಕು.

ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು, ನಾವಾಡುವ ಮಾತು ಮುತ್ತು ಪೋಣಿಸಿ ಮಾಡಿದ ಹಾರದಂತಿರಬೇಕು, ಆಗ ನೋವು ಹತ್ತಿರ ಸುಳಿಯದು. ಮಾತಿನಲ್ಲಿ ಮನಸ್ಸಿಗೆ ಗಾಯವಾಗುವಂತಹ ನುಡಿಗಳ ಆಡದಿರೋಣ.

ಮಾತಾಡಿ ಬಿಡ್ತೇವೆ, ಕೇಳಿಸಿಕೊಂಡವ ಮನಸ್ಸಲ್ಲೇ ಕತ್ತಿ ಮಸೆಯುತ್ತಾ ಆರೋಗ್ಯ, ಆಯುಷ್ಯ, ಸಮಯ ಎಲ್ಲವನ್ನೂ ಹಾಳುಮಾಡಿಕೊಂಡು ತನ್ನ ತಲೆ ಮೇಲೆ ತಾನೇ ಕಲ್ಲು ಚಪ್ಪಡಿ ಎಳೆದು ಹಾಕಿಕೊಳ್ತಾನೆ. ಎಲ್ಲವನ್ನೂ ನೋಡುವವ ಒಬ್ಬ ಇದ್ದಾನೆ, ಒಳ್ಳೆಯದು, ಕೆಟ್ಟದು ಅವನು ನೋಡಿಕೊಳ್ಳುವನು ಬಿಟ್ಟು ಬಿಡೋಣ. ಎರಡೂ ಕೈ ಸೇರಿದರೆ ಮಾತ್ರ ಚಪ್ಪಾಳೆ ಅಲ್ಲವೇ? ಇಲ್ಲದಿದ್ದರೆ ಗಾಳಿಯಲ್ಲಿ ಗುದ್ದಾಡಿದ ಹಾಗೆ ಆಗಬಹುದು. ಯಾರಾದರೂ ಒಬ್ಬರು ಮೌನಿಯಾದರೆ ಮಾತಿನ ನೋವುಗಳನ್ನು ಬಹಳಷ್ಟು ಕಡಿಮೆ ಮಾಡಬಹುದು. ಒಬ್ಬನಿಗೆ ನೋವು ನೀಡಿ ನಾವು ಸಾಧಿಸುವುದಾದರೂ ಏನನ್ನು?

ಸ್ನೇಹಿತರೇ ಎಲ್ಲರೂ ನಮ್ಮಂತೆ, ಎಲ್ಲರಿಗೂ ಸ್ವಾಭಿಮಾನ ಎಂಬುದು ದೊಡ್ಡ ಆಸ್ತಿ, ಅದಕ್ಕೆ ಪೆಟ್ಟಾಗುವಂತೆ ನಾವು ವ್ಯವಹರಿಸಬಾರದು, ಅವನ ಸಂತೋಷವನ್ನು ಕಿತ್ತುಕೊಳ್ಳುವ ಯಾವ ಅಧಿಕಾರವೂ ನಮಗಿಲ್ಲ. ಇಷ್ಟು ನಾವು ತಿಳಿದುಕೊಂಡರೆ, ಮಾತು ಚೆನ್ನಾಗಿರಬಹುದು, ನಡೆಯೂ ಚೆನ್ನಾಗಿರಬಹುದು. ತನ್ನಂತೆ ಪರರ ಬಗೆದೊಡೆ ಕೈಲಾಸ ಬಿನ್ನಾಣವಕ್ಕು ಸರ್ವಜ್ಞ. ಬೇರೆಯವರ ಬಗ್ಗೆ ಹಲ್ಲು ಮಸೆಯುವುದನ್ನು ಬಿಟ್ಟು,ನಮ್ಮನ್ನೇ ನಾವು ತಿದ್ದಿಕೊಂಡು ಮುಂದೆ ಸಾಗೋಣ.

-ರತ್ನಾ ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್