ಬಾಳಿಗೊಂದು ಚಿಂತನೆ - 50

ಬಾಳಿಗೊಂದು ಚಿಂತನೆ - 50

ಮನಸ್ಸಿಗೆ ನೋವಾದಾಗ, ಬೇಸರವಾದಾಗ ಏನೂ ಬೇಡ ಎಂದು ಅನಿಸುವುದು ಸಹಜ. ಕಾರಣ ಏನೆಂದು ಸ್ವಲ್ಪ ವಿವೇಚನೆಯಿಂದ, ತಾಳ್ಮೆಯಿಂದ ಕುಳಿತು ಯೋಚಿಸಿದರೆ ಪರಿಹಾರ ನಮ್ಮಲ್ಲಿಯೇ ಇದೆ. ಆದರೆ ಅಷ್ಟು ತಾಳ್ಮೆ ವಹಿಸುವ ಗುಣ ಇರುವುದಿಲ್ಲ. ಆಗ ನಮಗೆ ಹಿತೈಷಿಗಳೋ, ಸ್ನೇಹಿತರೋ, ಹಿರಿಯರೋ, ಬಂಧುಗಳೋ ಯಾರಾದರೂ ಸಿಕ್ಕಿದರೆ ಬಹಳ ಸಮಾಧಾನವಾಗುತ್ತದೆ.

ನಮಗೆ ಕಷ್ಟವಾದಾಗ, ನಾವು ಅದನ್ನು ಮನಸ್ಸಿನಲ್ಲಿಯೇ ಇಟ್ಟು ಕೊರಗುವುದು ಸರಿಯಲ್ಲ. ಮನಸ್ಸಿನಲ್ಲಿಯೇ ಇಟ್ಟರೆ ಅದುವೇ ಒಂದು ರೋಗವಾಗಬಹುದು. ಸದಾ ಚಿಂತಿಸ್ತಾ ಇದ್ದರೆ ಏನಾಗಬಹುದು ಯೋಚಿಸಿ.

ಇಂದಲ್ಲ ನಾಳೆ ಒಳ್ಳೆಯದಾಗುತ್ತದೆ ಎಂಬ ಆಶಾಭಾವನೆ ಇರಲಿ. ಇಂದಿನ ಕಷ್ಟ ನಾಳೆ ಇರಲಾರದು. ನಾಳೆ ಸುಖ ಬಂದೀತೆಂಬ ನಿರೀಕ್ಷೆ ಇರಲಿ. ಕತ್ತಲು ಕಳೆದು ಬೆಳಕು ಬರಲೇ ಬೇಕಲ್ಲ? ಬೆಳಕಿಗಾಗಿ ಕಾಯುವ ಕೆಲಸ ನಮ್ಮದಾಗಬೇಕು.ಪ್ರಾಮಾಣಿಕ ಪ್ರಯತ್ನ ನಮ್ಮದಾಗಬೇಕು. ಕಷ್ಟದಿಂದ ದುಡಿಯೋಣ, ಕುಳಿತು ಉಣ್ಣೋಣ, ಚೆನ್ನಾಗಿ ನಿದ್ರಿಸೋಣ.

ಸದಾ ಸತ್ ಚಿಂತನೆ, ಒಳ್ಳೆಯ ಪುಸ್ತಕಗಳ ಓದು, ಧ್ಯಾನ, ನಡಿಗೆ ಇದೆಲ್ಲ ಚಿಂತೆಗಳಿಂದ, ಬೇಸರಗಳಿಂದ ಹೊರಬರಲು ನಮಗೆ ಮಾರ್ಗಗಳು. ಒಂದು ವೇಳೆ ಸೋತರೂ ಎದ್ದು ನಡೆದೇನು ಎಂಬ ಧೈರ್ಯವಿರಲಿ. ನಂಬಿಕೆ, ವಿಶ್ವಾಸವಿರಲಿ. ಅದು ಒಂದು ರೀತಿಯ ಚೇತನ ನಮ್ಮ ಬಾಳಿಗೆ.

*ಜೀವನದಲಿ ಗುರಿಯಿದ್ದಾಗ, ಛಲವಿದ್ದಾಗ, ಸಾಧಿಸಿಯೇನು ಎಂಬ ನಂಬಿಕೆ, ಆತ್ಮವಿಶ್ವಾಸವಿದ್ದಾಗ* ಸೋಲು ಹತ್ತಿರ ಸಹ ಬಾರದು. ಎಲ್ಲವನ್ನೂ ಧನಾತ್ಮಕವಾಗಿ ಸ್ವೀಕರಿಸುವ ಮನೋಭಾವ ನಮ್ಮದಾಗಲಿ.

-ರತ್ನಾ ಕೆ.ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ