ಬಾಳಿಗೊಂದು ಚಿಂತನೆ - 53
ನಮ್ಮ ಮನಸ್ಸು ಟೇಪ್ ರೆಕಾರ್ಡ್ ಇದ್ದ ಹಾಗೆ. ಮನಸ್ಸಿಗೆ ವಿಷಯ ವಾಸನೆಗಳು ಬಂದ ಹಾಗೆ ಧನಾತ್ಮಕ ಇರಲಿ, ಋಣಾತ್ಮಕ ಬಿಟ್ಟು ಬಿಡೋಣ. ಇಲ್ಲದಿದ್ದರೆ ಮನಸ್ಸು ದೊಡ್ಡ ತ್ಯಾಜ್ಯ ಗುಂಡಿಯಾಗಬಹುದು. ಪ್ರವಾಹಕ್ಕೆ ಸಿಲುಕಿದ ಸುಳಿಯ ಹಾಗೆ ಆಗಬಹುದು. ನಮ್ಮ ನೆರಳು ನಮ್ಮ ಹಿಂದೆ, ಎದುರು ಸುತ್ತುವ ಹಾಗೆ ಮನಸ್ಸು ಸಹ ಗಿರಗಿಟಿ ತಿರುಗುವ ಹಾಗೆ ಇರುತ್ತದೆ. ನಮ್ಮ ಕಣ್ಣುಗಳು ನಮ್ಮ ಮನಸ್ಸನ್ನು ಬೇರೆಯವರಿಗೆ ಸ್ಪಷ್ಟವಾಗಿ ಹೇಳಬಹುದು. ‘ಮುಖ ಮನಸ್ಸಿನ ಕನ್ನಡಿ’ ನಮಗೆಲ್ಲ ತಿಳಿದ ವಿಚಾರವೇ ಆಗಿದೆ. ಸುಪ್ತಮನಸ್ಸಿನ ಉಳಿವಿಗಾಗಿ ಧ್ಯಾನ, ಯೋಗ, ಪ್ರಾರ್ಥನೆ, ಭಜನೆ, ಸತ್ಸಂಗ, ಒಳ್ಳೆಯ ಪುಸ್ತಕಗಳನ್ನು ಓದುವುದು, ಒಳ್ಳೆಯ ವಿಷಯಗಳನ್ನು ಚಿಂತಿಸುವುದು, ಬಂಧುಗಳೊಂದಿಗೆ ಒಮ್ಮೊಮ್ಮೆ ಮಾತನಾಡುವುದು, ಯಾವಾಗಲೂ ಸಂತಸದಿಂದಿರಲು ಪ್ರಯತ್ನಿಸುವುದು, ನಡಿಗೆ ಒಳ್ಳೆಯ ಹವ್ಯಾಸಗಳನ್ನು ಅಳವಡಿಸಿಕೊಳ್ಳುವುದು ಇತ್ಯಾದಿಗಳನ್ನು ಮಾಡೋಣ.
ನಾವು ಜೀವನದಲ್ಲಿ ಉತ್ತಮ ನಡೆ ನುಡಿ ನಡತೆಗಳನ್ನು ಅಳವಡಿಸಿಕೊಂಡರೆ ನಮಗೆ ಭವಿಷ್ಯದಲ್ಲಿ ನಿಜಕ್ಕೂ ಅವುಗಳು ಮಹದುಪಕಾರವನ್ನೇ ಮಾಡುತ್ತವೆ. ಉದಾಹರಣೆಗೆ ನಾವು ಬೆಳಿಗ್ಗೆ ಐದು ಗಂಟೆಗೆ ಏಳುವ ಅಭ್ಯಾಸವನ್ನು ಮಾಡಿಕೊಂಡರೆ ಅದರಿಂದ ನಮಗೆ ಭವಿಷ್ಯದಲ್ಲಿ ಅಪಾರವಾದ ಪ್ರಯೋಜನವಾಗುತ್ತದೆ. ಎಂಟು ಗಂಟೆಗೆ ಎದ್ದಾಗ ದೈನಂದಿನ ಯಾವ ಚಟುವಟಿಕೆಗಳಿಗೂ ನಮಗೆ ಸಮಯ ಸಾಲುವುದಿಲ್ಲ. ಎದ್ದು ಕಚೇರಿಗೆ ಸಮಯಕ್ಕೆ ಸರಿಯಾಗಿ ಹೇಗೆ ತಲುಪುವುದು ಎಂಬ ಧಾವಂತದಲ್ಲೇ ಇರುತ್ತೇವೆ. ನಾವು ತಿನ್ನುವ ತಿಂಡಿ, ನಾವು ತೊಡುವ ಬಟ್ಟೆಗಳು ಅದರ ಬಗ್ಗೆ ನಮಗೆ ಗಮನವೇ ಇರುವುದಿಲ್ಲ. ಅದೇ ನಾವು ಐದು ಗಂಟೆಗೆ ಎದ್ದು ಒಂದು ಸಣ್ಣ ವಾಕಿಂಗ್ ಮಾಡಿದರೆ ನಮ್ಮ ಮನಸ್ಸು ದಿನವಿಡೀ ಪ್ರಫುಲ್ಲವಾಗಿರುತ್ತದೆ. ನಿಮ್ಮ ಎಲ್ಲಾ ಕೆಲಸಗಳಿಗೂ ಸಮಯವೇ ಸಮಯವಿರುತ್ತದೆ. ಕುಟುಂಬದ ಜೊತೆ ಬೆರೆಯಲೂ ಸಾಕಷ್ಟು ಸಮಯಾವಕಾಶವಿರುತ್ತದೆ. ಆದುದರಿಂದ ನಾವು ನಮ್ಮ ಬದುಕಿನಲ್ಲಿ ಮಾಡುವ ಸಣ್ಣ ಸಣ್ಣ ಬದಲಾವಣೆಗಳು ಭವಿಷ್ಯದಲ್ಲಿ ಅತ್ಯಂತ ಪ್ರಯೋಜನಕಾರಿಯಾಗಿರುತ್ತವೆ.
-ರತ್ನಾ ಕೆ.ಭಟ್, ತಲಂಜೇರಿ
ಚಿತ್ರ ಕೃಪೆ: ಅಂತರ್ಜಾಲ ತಾಣ