ಬಾಳಿಗೊಂದು ಚಿಂತನೆ - 54
ಯಾರು ತಮ್ಮ ಜವಾಬ್ದಾರಿ ಮತ್ತು ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡುತ್ತಾರೋ ಅವರಿಗೆ ದೈವಾನುಗ್ರಹ ಖಂಡಿತಾ ಇದೆ. ದೇವರ ಅನುಗ್ರಹ ಬೇಕು ಎಂದಾದರೆ ಕರ್ತವ್ಯವನ್ನು ಪೂಜೆಯಷ್ಟೇ ಶ್ರದ್ಧಾಭಕ್ತಿಗಳಿಂದ ಮಾಡಬೇಕು.
'ಪುರುಷಾಕಾರಮನುವರ್ತತೇ ದೈವಂ' ಹೇಳಿದವರು ಕೌಟಿಲ್ಯ. ದೈವವು ಪುರುಷ ಪ್ರಯತ್ನವನ್ನು ಬೆಂಬಲಿಸುತ್ತದೆ. ವಿಧಿಯನ್ನು ಕಂಡವರಾರು ಇಲ್ಲ. ಆದ ಕಾರಣವೇ ಅದನ್ನು ಅದೃಷ್ಟ ಎಂದು ಹೇಳುತ್ತೇವೆ.
ಒಂದು ಮೃಗರಾಜ ಸಿಂಹದ ಪ್ರತಿಮೆ ಮೇಲೆ ಕಾಗೆ ಬಂದು ಆರಾಮ ಕುಳಿತು ಕೊಳ್ಳಬಹುದು. ಒಂದು ಸಣ್ಣ ಮಗು ಆ ಪ್ರತಿಮೆಯನ್ನು ಹಿಡಿದುಕೊಂಡು ಆಡಬಹುದು. ಇದೇರೀತಿ ಪ್ರಯತ್ನ ಮಾಡದ ಮನುಷ್ಯ ಆ ಸಿಂಹದ ಪ್ರತಿಮೆಗೆ ಸಮಾನ. ಪೌರುಷ ಬಿಟ್ಟ ಗಂಡಸಿಗೆ ಬೆಲೆ ಇಲ್ಲ. ಬದುಕಿಗೆ ಬೆನ್ನು ಹಾಕಿ ಹೋಗುವವರು ಹೇಡಿಗಳು. ಯುದ್ಧಭೂಮಿಯಿಂದ ಓಡಿ ಹೋಗುವವರನ್ನು ರಣಹೇಡಿಗಳೆನ್ನುವರು.
ಬದುಕೊಂದು ಕದನವೆಂದಂಜಿ ಬಿಟ್ಟೋಡುವನು
ಬಿದಿಯ ಬಾಯಿಗೆ ಕವಳವಾಗದುಳಿಯುವನೆ?
ಎದೆಯನುಕ್ಕಾಗಿಸುತ,ಮತಿಗದೆಯ ಪಿಡಿದು,ನೀ
ನೆದುರು ನಿಲೆ ಬಿದಿವೊಲಿದ-ಮಂಕುತಿಮ್ಮ//
-ರತ್ನಾ ಭಟ್, ತಲಂಜೇರಿ
ಸಂಗ್ರಹ:ಚಿಂತನೆ ಸಂಗ್ರಹ