ಬಾಳಿಗೊಂದು ಚಿಂತನೆ - 55

ಬಾಳಿಗೊಂದು ಚಿಂತನೆ - 55

ಒಂದು ಮನೆ ಎಂದ ಮೇಲೆ ಹಿರಿಯರು, ಕಿರಿಯರು, ಪುಟ್ಟ ಮಕ್ಕಳು ಇರುತ್ತಾರೆ. ಮನೆಯಲ್ಲಿ ಒಬ್ಬರಿಗೊಬ್ಬರು ಪರಸ್ಪರ ಅರಿತು ವ್ಯವಹರಿಸದಿದ್ದರೆ ಮನೆ ರಣಾಂಗಣವಾಗಬಹುದು. ಒಬ್ಬೊಬ್ಬರ ಮುಖ ಒಂದೊಂದು ದಿಕ್ಕನ್ನು ನೋಡಬಹುದು.

ಮನುಷ್ಯ ಮನುಷ್ಯರ ನಡುವೆ ಸಂಭಾಷಣೆಗಳು ನಡೆಯಬೇಕು. *ಓಪನ್ ಹಾರ್ಟ್* ಎಂದು ಹೇಳ್ತೇವೆ. ಒಳಗೊಂದು ಹೊರಗೊಂದು ಮಾತನಾಡಿದರೆ, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತೆ ಇರಬಹುದು.

ನಾವು ಮೊದಲು ತಿಳಿಯಬೇಕಾದ್ದು 'ನಮಗಿರುವುದು ಒಂದು ನಾಲಗೆ, ಎರಡು ಕಿವಿಗಳು' ಎಂಬುದನ್ನು. ಎಲುಬಿಲ್ಲದ ನಾಲಗೆ ಹೇಗೆ ಬೇಕಾದರೂ ಹೊರಳಬಹುದು. ಆದರೆ ಕೇಳಿಸಿಕೊಳ್ಳುವ ಕಿವಿ ನಮ್ಮದಲ್ಲವೇ? ಅದು' ಹಿತ್ತಾಳೆ' ಆದರೆ ಕಷ್ಟ. ಕಿಲುಬು ಹಿಡಿಯಬಹುದು. ಬೇರೆಯವರು ಹೇಳುವುದನ್ನು ತಾಳ್ಮೆಯಿಂದ ಆಲಿಸಿ, ನಮ್ಮದೇ ಆದ ಒಂದು ನಿರ್ಧಾರಕ್ಕೆ ಬರುವುದು ಅಗತ್ಯ. ಕೇಳುವ ಕಿವಿಗಳಿಗೆ ಕೆಲಸಕೊಡದೆ, ಇರುವ ಒಂದು ನಾಲಗೆಗೆ ಮಾತ್ರ ಕೆಲಸಕೊಟ್ಟಾಗ ಪರಸ್ಪರ ಅರಿವು ಇಲ್ಲದೆ ಘರ್ಷಣೆಗೆ ಕಾರಣವಾಗುತ್ತದೆ. ಇಲ್ಲಿ ನಾನು ಎಂಬ ಅಹಂ ವಿಜೃಂಭಿಸಲು ನೋಡಿದರೆ. ನಮ್ಮ ವ್ಯಕ್ತಿತ್ವದ ಸರ್ವನಾಶ ಖಂಡಿತ. 'ನಾನು ಎಂಬಲ್ಲಿ ನಾವು ಎಂಬ ಅರಿವು'ಇಲ್ಲವಾಗುತ್ತದೆ. ಆದರೆ ನಾವು ಎಂದು ಮೂಡಿಸೋಣವೇ?

ತಾನೇ ಶ್ರೇಷ್ಠ, ತಾನು ಹೇಳಿದ್ದೇ ಆಗಬೇಕು, ತನ್ನ ಅಭಿಪ್ರಾಯಗಳಿಗೆ ಎಲ್ಲರೂ ಗೌರವ ಕೊಡಬೇಕು, ಬೇರೆಯವರ ಅಭಿಪ್ರಾಯಗಳನ್ನು ತುಚ್ಛೀಕರಿಸುವುದು, ನಾಲ್ಕು ಜನರೊಂದಿಗೆ ಹೊಂದಾಣಿಕೆಯಿಲ್ಲದ ಸ್ವಭಾವ ಎಂಬ ದುರಹಂಕಾರಿಗಳನ್ನು ಹತ್ತಿರವೇ ಸೇರಿಸಿಕೊಳ್ಳಬಾರದು. ಅವರು ಅವರದೇ ಆದ ಕಬ್ಬಿಣದ ಕೋಟೆಯೊಳಗೆ ಬಂಧಿಗಳಾಗಲು ಬಯಸುವರು.

ಒಂದು ಆಲೋಚಿಸಿ, ಮನೆಯೊಳಗೆ ಹೀಗೆ ಒಬ್ಬೊಬ್ಬರು ಒಂದೊಂದು ಕೋಟೆಯೊಳಗೆ ಕುಳಿತರೆ, ಮುಕ್ತ ಸಂಭಾಷಣೆ, ಅರಿವು, ಹೊಂದಾಣಿಕೆ, ಸಂತೋಷ, ಪ್ರೀತಿ ಎಲ್ಲಿದೆ? ಹಿಂದೆ ಓದಿದ ಒಂದು ಸಾಲು ನೆನಪಾಯಿತು,

*ಅರಳಿ ಮೊಗವನಿತಿನಿತು,ನಕ್ಕು* *ನಗಿಸಿರೆ ಸಾರ/*

*ಹೊರೆ ಮಿಕ್ಕ* *ಸಂಸಾರ---ಮಂಕುತಿಮ್ಮ//*

ಮಾತುಗಾರಿಕೆ, ಸಂವಹನ ಯಾರ ಹತ್ತಿರ ನಡೆಸುತ್ತಾ ಇದ್ದೇವೆ ಎಂಬುದನ್ನು ಅರಿತು ವ್ಯವಹರಿಸಿದರೆ ಚಂದ. ಪ್ರಯೋಗಿಸುವ ಭಾಷೆ, ಪದಗಳ ಇತಿಮಿತಿ ತಿಳಿದರೆ ಘರ್ಷಣೆಗೆ ಎಡೆ ಇಲ್ಲ. ಶಬ್ದಗಳು ಆಯ್ಕೆಯಲ್ಲಿ ಜಾಣನಾಗುವುದು ಮುಖ್ಯ. ಮಾತು ಸತ್ಯವಾಗಿರಲಿ, ಹಿತವಾಗಿರಲಿ, ಜೇನಿನಂತಿರಲಿ.

-ರತ್ನಾ ಕೆ.ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ