ಬಾಳಿಗೊಂದು ಚಿಂತನೆ - 57
“ಬೆಳೆಯುವ ಸಿರಿ ಮೊಳಕೆಯಲ್ಲಿ” ನಾಣ್ನುಡಿಯಂತೆ, ಮಕ್ಕಳಿಗೆ ಚಿಕ್ಕಂದಿನಿಂದಲೇ ಸಂಸ್ಕಾರಗಳನ್ನು ನೀಡಿದಲ್ಲಿ, ನೈತಿಕಮೌಲ್ಯಗಳೊಂದಿಗೆ ಬೆಳೆಯಬಹುದು.ತಪ್ಪು-ಒಪ್ಪುಗಳನ್ನು ನಯವಾಗಿ ತಿದ್ದಿ, ಬುದ್ಧಿವಾದ ಹೇಳಬೇಕು. ಬೇರೆಯವರ ಬಗ್ಗೆ ಹಗುರವಾಗಿ ಮಾತನಾಡಲು ಬಿಡಬಾರದು. ವಿದ್ಯೆ ಕಲಿಸುವ ಗುರುಗಳನ್ನು ತಾತ್ಸಾರ ಮಾಡದಂತೆ ನೋಡುವುದು. ಸ್ವತಃ ಪೋಷಕರು ಮಕ್ಕಳೆದುರು ಹೀಗಳೆಯಬಾರದು. ಹಿರಿಯರೆದುರು ಕಾಲಮೇಲೆ ಕಾಲುಹಾಕಿ ಕುಳಿತುಕೊಳ್ಳುವುದು ಸಲ್ಲದು. ಒಂದೇ ಕೈಯೆತ್ತಿ ನಮಸ್ಕರಿಸಬಾರದು ತಿಳುವಳಿಕೆ ನೀಡಬೇಕು. ತಿನ್ನುವ ಆಹಾರ ಚೆಲ್ಲದಂತೆ, ತನುಮನ ಸ್ವಚ್ಛವಾಗಿಡುವಂತೆ, ಭಗವಂತನ ಸ್ಮರಣೆ, ಜೀವನ ಪಾಠ, ಶಿಸ್ತಿನ ಅಭ್ಯಾಸಗಳನ್ನು ಕಲಿಸಬೇಕು. ಸಂಸ್ಕಾರವಂತ ಮಗುವನ್ನು ಪೋಷಿಸಿ ಸಮಾಜಕ್ಕೆ ನೀಡುವುದು ಪೋಷಕರ ಕರ್ತವ್ಯ.
ಮಕ್ಕಳನ್ನು ಸಣ್ಣ ವಯಸ್ಸಿನಲ್ಲಿಯೇ ಅವರು ತಪ್ಪು ಮಾಡಿದಾಗ ಹೆತ್ತವರು ಅಥವಾ ಪೋಷಕರು ಕೂಡಲೇ ತಿದ್ದಬೇಕು. ತುಂಬಾ ಸಣ್ಣ ಮಕ್ಕಳಾದರೆ ಅವರನ್ನು ಸ್ವಲ್ಪ ಗದರಿಯೂ ತಿಳಿಹೇಳಬಹುದು. ಆದರೆ ದೊಡ್ಡ ಮಕ್ಕಳನ್ನು ಗೆಳೆಯರಂತೆ ಕಂಡು ಅವರನ್ನು ಕೂರಿಸಿ, ಅವರಿಗೆ ಸಮಾಧಾನದಿಂದ ತಿಳಿ ಹೇಳಬೇಕು. ಅವರ ತಪ್ಪುಗಳನ್ನು ಮನವರಿಕೆ ಮಾಡಬೇಕು. ಸುಖಾ ಸುಮ್ಮನೆ ಅವರ ಮೇಲೆ ರೇಗಾಡಿದರೆ ಅವರು ನಿಮ್ಮನ್ನು ವಿರೋಧಿಸಲು ತಮ್ಮದೇ ಆದ ಕೆಲವು ಅನಾಹುತಕಾರಿ ದಾರಿಗಳನ್ನು ಕಂಡುಕೊಳ್ಳುವ ಸಾಧ್ಯತೆ ಇರುತ್ತದೆ. ಆದುದರಿಂದ ಸಾವಧಾನದಿಂದ ಅವರ ಸಮಸ್ಯೆಯನ್ನು ಕೇಳಿ, ಅದನ್ನು ಪರಿಹರಿಸುವುದು ಉತ್ತಮ. ಸುಮ್ಮನೇ ಬಿಟ್ಟು ಬಿಟ್ಟರೆ ಮುಂದಾಗುವ ಅನಾಹುತ ದೊಡ್ಡದು.
-ರತ್ನಾ ಕೆ.ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ