ಬಾಳಿಗೊಂದು ಚಿಂತನೆ - 59
ನಮ್ಮ ದೇಹ ಒಂದು ಬೃಹತ್ ಮರವಿದ್ದಂತೆ. ಬಯಸಿದರೆ, ಮನಸ್ಸು ಮಾಡಿದರೆ ಆಲದ ಮರವಾಗಬಹುದು. ಆದರೆ ಮರದ ರೆಂಬೆಕೊಂಬೆಗಳಲ್ಲಿ ಅರಿಷಡ್ವರ್ಗಗಳು ಎಂಬ ಪಕ್ಷಿಗಳು ಮನೆ ಮಾಡಿ ಕುಳಿತಿದೆಯಲ್ಲ? ಅದನ್ನು ಹೋಗಲಾಡಿಸಲು ಯಾಕೆ ನಾವು ಪ್ರಯತ್ನಿಸಬಾರದು? ಪ್ರಯತ್ನ ನಮ್ಮದು, ಫಲ ನೀಡುವುದು ಅವನಿಚ್ಛೆ. ನಾವು ಸಂತೋಷ ಆದಾಗ ಮನಸಾರೆ ನಗುತ್ತೇವೆ. ಹಾಗೆ ಎಲ್ಲವನ್ನೂ ಓಡಿಸಿ ನಗೋಣವೇ? ಹಕ್ಕಿಗಳು ಚಪ್ಪಾಳೆ ತಟ್ಟಿದಾಗ ಹಾರಿಹೋಗಬಹುದು. ಹಾಗೆ ನಾವು ಸ಼ಹ ಸತ್ಸಂಗ, ದೈವೀ ಆರಾಧನೆ, ಮನಸ್ಸಿನಲ್ಲೇ ಪ್ರಾರ್ಥನೆ, ದೀನದಲಿತರ, ಬಡಬಗ್ಗರ ಸೇವೆ, ಕಷ್ಟಕ್ಕೆ ಸ್ಪಂದಿಸುವ ಗುಣ, ಮೈಮುರಿದು ಬೆವರಿಳಿಸಿ ದುಡಿಯುವುದು ಈ ಮುಂತಾದವುಗಳ ಮೂಲಕ ಚಪ್ಪಾಳೆ ತಟ್ಟಿ ಶರೀರದಿಂದ ಓಡಿಸೋಣ. ಬೇರೆಯವರಿಗೆ ನೋವು ನೀಡಿ ವಿಘ್ನ ಸಂತೋಷಿಗಳಾಗುವುದು ಸರಿಯಲ್ಲ. ಒಂದು ವರ್ಗ ಸಮಾಜದಲ್ಲಿ ಅದಕ್ಕೆಂದೇ ಇದೆ. ಅದನ್ನು ತಡೆಯಲು ಸಾಧ್ಯವಿರೆ ನೋಡೋಣ. ಎಷ್ಟು ಮಾತ್ರಕ್ಕೂ ಸಾಧ್ಯವಿಲ್ಲ ಎಂದಾದರೆ ಮೌನದಷ್ಟು ದೊಡ್ಡ ಆಯುಧ ಮತ್ತೊಂದಿಲ್ಲ.
ನಮ್ಮ ತನುಮನದಲ್ಲಿ ಸೇರಿದ ರಾಕ್ಷಸೀ ವರ್ತನೆಯೇ ಅಹಂಕಾರ. ಅಹಂ ಎಲ್ಲಿದೆಯೋ ಅಲ್ಲಿ ಮಾತು, ಹೇಳಿಕೆಗಳು ರುಚಿಸದು.*ಅಹಂನ್ನು ಕೊಬ್ಬಿದ ಗೂಳಿಗೆ ಹೋಲಿಸಬಹುದು* ಮದವೇರಿದ ಗೂಳಿ ಸಿಕ್ಕಿ ಸಿಕ್ಕಿದವರನ್ನು ತಿವಿದು ನೋವು ಪಡಿಸಬಹುದು, ಕೆಡವಬಹುದು. ಅದರ ಎದುರಿಗೆ ನಾವು ಸಿಗದಂತೆ ಜಾಗ್ರತೆ ವಹಿಸಬೇಕು. ಮದ ಬಂದ ಆನೆಗೆ ಅಂಕುಶ ಹಾಕಲು ಮಾವುತನೇ ಸರಿ. ಹಾಗೆ ಅಹಂಕಾರ ಎನ್ನುವ ಮದ ತಲೆಗೇರಿದಾಗ ಅಂಕುಶ ಹಾಕಿ ಸರಿಪಡಿಸುವವನೊಬ್ಬ ಇದ್ದೇ ಇರುತ್ತಾನೆ. ಆದಷ್ಟು ಅಂಥವರಿಂದ ದೂರವಿದ್ದರಾಯಿತು.
ಈಗ ನಾವು ಮಾಡಬೇಕಾದ್ದು ಪ್ರಾರ್ಥನೆ ಮತ್ತು ಕಾಯಕ. ನಮ್ಮ ತನುವ ಕೊಳೆಯ ತೊಳೆಯಲು ಇವೆರಡೂ ಅಮೂಲ್ಯ ಅಸ್ತ್ರಗಳು. ಅವಯವಗಳು ನೀರಿನಿಂದ ಸ್ವಚ್ಛವಾಗುತ್ತದೆ. ಮನಸ್ಸು ಸತ್ಯದಾಚರಣೆಯಿಂದ ಶುದ್ಧವಾಗುತ್ತದೆ. ಜೀವನವು ಕಾಯಕವೆಂಬ ತಪಸ್ಸಿನಿಂದ ಬಲವಾಗುತ್ತದೆ. ಬುದ್ಧಿ ಜ್ಞಾನದಿಂದ ಬೆಳೆಯುತ್ತದೆ. ಹೀಗೆ ಉತ್ತಮ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡು ದೇಹವೆಂಬ ಬೃಹತ್ ಮರವನ್ನು ರಕ್ಷಣೆ ಮಾಡುವುದರೊಂದಿಗೆ ಇತರರಿಗೂ ಸ್ವಲ್ಪ ನೆರಳಾಗಿ ಉಪಕರಿಸೋಣ.ಅಹಂನ್ನು ಮೆಟ್ಟಿ ನಿಲ್ಲೋಣ.
-ರತ್ನಾ ಕೆ.ಭಟ್, ತಲಂಜೇರಿ
(ಜೀವನಾನುಭವ ಸಾರದಿಂದ)
ಚಿತ್ರ: ಇಂಟರ್ನೆಟ್