ಬಾಳಿಗೊಂದು ಚಿಂತನೆ - 61
ನಮ್ಮ ಜೀವನ ಎನ್ನುವುದು ಒಂದು ದೊಡ್ಡ ಪ್ರಯಾಣದಂತೆ. ಎಲ್ಲಿಂದ ಎಲ್ಲಿಗೋ ಸಾಗಬಹುದು. ಯಾರ್ಯರೋ ಬಂದು ಹೋಗಬಹುದು. ಏನೆಲ್ಲಾ ಸಾಧಿಸಬಹುದು. ಸಾಧಿಸದೆಯೂ ಇರಬಹುದು. ಎಲ್ಲ ನಮ್ಮ ಇಚ್ಛೆ, ಸಾಮರ್ಥ್ಯ, ಆರ್ಥಿಕ ಸ್ಥಿತಿಗತಿ, ಪ್ರೋತ್ಸಾಹ ,ಆರೋಗ್ಯ, ಪರಿಸರ ಈ ಎಲ್ಲವನ್ನೂ ಹೊಂದಿಕೊಂಡಿರಬಹುದು. ಕಡೆಗೊಮ್ಮೆ ನಮ್ಮ ಪ್ರಯಾಣದ ಅಂತ್ಯ ತಿಳಿದೇ ಇದೆ. ಎದೆಗುಂಡಿಗೆ ಲಬ್ ಡಬ್ ನಿಂತಾಗ ಬಾರದ ಲೋಕಕ್ಕೆ ಪ್ರಯಾಣ.
ಹಾಗಾದರೆ ಬಂದು ಹೋಗುವ ಮಧ್ಯದ ಅಂತರದಲ್ಲಿ ನಾವು ಹೇಗಿದ್ದರೆ ಚಂದ, ನಾವೇ ಆಲೋಚಿಸಬೇಕು. ನಾಲ್ಕು ಜನರಿಗೆ ಹಿತವಾಗುವಂತಿರಬೇಕು. ಒಂದಿಬ್ಬರು ಹಿತವಿಲ್ಲದವರು ಮುಳ್ಳುಗಳಂತೆ ಚುಚ್ಚಲು ನೋಡಿದರೂ ಎದೆಗುಂದದೆ ಹೊತ್ತ ಭೂಮಿತಾಯಿಗೆ, ಎಲ್ಲವನ್ನೂ ವೀಕ್ಷಿಸಿ ತಕ್ಕಡಿಗೆ ಹಾಕಿ ತೂಗಿ ನೋಡುವ ಮಹಾನ್ ಶಕ್ತಿಗೆ ತಲೆಬಾಗಿ ನಡೆಯಬೇಕು, ನಡೆಯತಕ್ಕದ್ದು, ನಮ್ಮ ಕರ್ತವ್ಯ ಸಹ.
ನಮ್ಮಿಂದ ಸಾಧ್ಯವಿದ್ದರೆ ಇತರರಿಗೆ ಸಹಾಯ ಮಾಡೋಣ. ಸಾಧ್ಯವಿಲ್ಲದಿರೆ ಕೆಟ್ಟ ಕೆಲಸಕಾರ್ಯಗಳನ್ನು ಮಾಡದಿರೋಣ. ಅದೇ ದೊಡ್ಡ ಉಪಕಾರ. ಹುಟ್ಟುವಾಗ ಏನೂ ತಂದಿಲ್ಲ. ಆದರೆ ಹೋಗುವಾಗ ಒಂದಷ್ಟು ನೆನಪುಗಳನ್ನು ಬಿಟ್ಟು ಹೋಗ್ತೇವೆ. ಅದು ನಾವುಗಳು ಈ ಬದುಕಿನ ಮಧ್ಯದ ಅಂತರದಲ್ಲಿ ಮಾಡಿದ ನಮ್ಮ ವ್ಯವಹಾರದಿಂದ. ನಮ್ಮ ಜೀವನವನ್ನು ಹಸಿರು ಹುಲ್ಲುಗಾವಲಿಗೆ ಹೋಲಿಸಬಹುದು. ತುಳಿಯುವವರು ಇಲ್ಲದಿರೆ ಸದಾ ಹಸಿರಾಗಿರ್ತೇವೆ. ಯಾರಾದರು ಇವನನ್ನು ಮೇಲೆಬರಲು ಬಿಡಬಾರದೆಂದು ಪಣತೊಟ್ಟರೋ, ಚಿಗುರಲು ಹರಸಾಹಸ ಪಡಬೇಕು. ಅಂಥ ಸಂದರ್ಭದಲ್ಲಿಯೇ ನಾವುಗಳು ಅಂಜದೆ, ತಲೆಬಾಗದೆ ಚಿಗುರಬೇಕು. ಈ ಜೀವನ ಒಂದು ಆಟದ ಅಂಗಳ ಎಂದು ತಿಳಿದು ಮುನ್ನುಗ್ಗೋಣ. ಸೋಲು ಗೆಲುವು ಇದ್ದದ್ದೇ. ಸೋತು ಗೆಲ್ಲೋಣ. ಇದ್ದಷ್ಟು ದಿನ ಚೆನ್ನಾಗಿರಲು ಪ್ರಯತ್ನಿಸಿ, ಅಳಿಲ ಸೇವೆ ಮಾಡೋಣ.
-ರತ್ನಾ ಭಟ್, ತಲಂಜೇರಿ
ಚಿತ್ರ: ಗಣೇಶ್ ರಾವ್, ಲಾಸ್ ಏಂಜಲೀಸ್