ಬಾಳಿಗೊಂದು ಚಿಂತನೆ - 62

ಬಾಳಿಗೊಂದು ಚಿಂತನೆ - 62

ಅಮೂಲ್ಯವಾದ ಯಾವುದೇ ವಸ್ತುವಿನ ಬೆಲೆಯಾಗಲಿ, ಮಹತ್ವವಾಗಲಿ ಅರಿಯಲು ಸಾಧ್ಯವಿಲ್ಲ. ಒಂದು ವೇಳೆ ತಿಳಿಯಬೇಕೆಂದರೆ ಕಷ್ಟಪಡಬೇಕು. ವ್ಯಕ್ತಿ ಸಹ ಹಾಗೆಯೇ. ಅಲ್ಪರು ಮಾಡುವ ತೀರ್ಮಾನಗಳು ಅಲ್ಪತನದಿಂದಲೇ ಕೂಡಿರುತ್ತದೆ. ಅದರಲ್ಲೂ *ಅಯೋಗ್ಯರು* ಅನಿಸಿಕೊಂಡವರಿಗೆ ಅಮೂಲ್ಯದ ಬೆಲೆಯೇ ಗೊತ್ತಿಲ್ಲ. ಒಂದು ಗಾದೆ ಮಾತೇ ಇದೆಯಲ್ಲ *ಕತ್ತೆಗೇನು ಗೊತ್ತು ಕಸ್ತೂರಿ ವಾಸನೆ* ಎಂಬುದಾಗಿ. ಕಸ್ತೂರಿ ಅಮೂಲ್ಯವಾದದ್ದು. ಅತ್ಯಂತ ಪರಿಮಳ ಮತ್ತು ಬೆಲೆಯುಳ್ಳದ್ದು. ಕತ್ತೆಗೆ ಕಸ್ತೂರಿಯ ಬೆಲೆಯಾಗಲಿ, ಯೋಗ್ಯತೆಯಾಗಲಿ ತಿಳಿಯುವ ಬುದ್ಧಿಯೂ ಇಲ್ಲ. ಹಾಗೆಂದು ಕಸ್ತೂರಿಯ ಬೆಲೆ ಕಡಿಮೆಯಾಗದು. ಇದೇ ರೀತಿ ಕೆಲವು ಶತಮೂರ್ಖರು ನಾವು ನಡೆದದ್ದೇ ದಾರಿ, ನಮ್ಮ ಕುದುರೆಗೆ ಮೂರೇ ಕಾಲು ಎಂದು ವಾದಿಸುವವರು ಇದ್ದಾರೆ. ಅವರು ಹೇಳಿಕೊಂಡು ಇರ್ತಾರೆ. ಹೇಳಿ ಹೇಳಿ ಆಯಾಸ ಆಗುವಾಗ ನಿಲ್ಲಿಸಿಯಾರು. ನಾವು ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳಬಾರದು.

ಅಮೂಲ್ಯತೆ, ಯೋಗ್ಯತೆ ವಸ್ತು ಅಥವಾ ಮನುಷ್ಯರಲ್ಲಿ ಅಳತೆ ಮಾಡಲೂ, ಮಾಡುವವನಿಗೆ ಒಂದು ಅರ್ಹತೆ, ಯೋಗ್ಯತೆ ಇರಬೇಕು. ಅಯೋಗ್ಯರಿಗೆ ಅರಿವು, ತಿಳುವಳಿಕೆ ಎರಡೂ ಇಲ್ಲ.

'ಶ್ವಾನ ಬೊಗಳಿದರೆ ದೇವಲೋಕ ಹಾಳಾಗದಲ್ಲವೇ? 'ಬೊಗಳಿ ಬೊಗಳಿ ಆಯಾಸವಾದಾಗ, ಯಾರೂ ತನ್ನತ್ತ ಗಮನಹರಿಸುವುದಿಲ್ಲವೆಂದಾಗ ನಿಲ್ಲಿಸುತ್ತದೆ. ಹಾಗೆಯೇ ಉತ್ತಮ ಮನುಷ್ಯ ಜನ್ಮವೆತ್ತಿ ಬಂದರೂ, ಯಾವುದೋ ಪಾಪಕರ್ಮಗಳು ಬೆಂಬಿಡದೆ ಇದ್ದರೂ ಮತ್ತು ಮತ್ತು ಪಾಪಕೂಪದಲ್ಲಿಯೇ ಹೊರಳಾಡಲು ಮನಸ್ಸು ಪ್ರೇರೇಪಣೆ ನೀಡುವುದು ಕಾಣಬಹುದು. ಇದು ಆ ಭಗವಂತ ಸಹ ಮೆಚ್ಚುವ ಕೆಲಸವಲ್ಲ. ನಮ್ಮಿಂದ ಸಾಧ್ಯವಾದರೆ ಆ ಕೆಸರಿನಿಂದ ಮೇಲೆತ್ತಲು ಕೈ ಹಿಡಿದು ಸಹಕರಿಸೋಣ. ಇಲ್ಲದಿದ್ದರೆ ಮೌನವಾಗಿರೋಣ ಅದು ಬಿಟ್ಟು ಮತ್ತಷ್ಟೂ ಉರಿಸುವುದು ಹೇಡಿಗಳ ಲಕ್ಷಣ.

 ಸುಭಾಷಿತದ ನೀತಿಶತಕದಲ್ಲಿ ಒಂದೆಡೆ ಓದಿದ ನೆನಪು

*ಲಭೇತ ಸಿಕತಾಸು ತೈಲಮಪಿ ಯತ್ನತಃ ಪೀಡೆಯನ್*

*ಪಿಬೇಚ್ಚ ಮೃಗತೃಷ್ಣಿ ಕಾಸು ಸಲಿಲಂ* *ಪಿಪಾಸಾರ್ದಿತಃ|*

*ಕದಾಚಿದಪಿ ಪರ್ಯಟನ್* *ಶಶಿವಿಷಾಣಮಾಸಾದಯೇತ್*

*ನ ತು ಪ್ರತಿ ನಿವೃತ್ತ ಮೂರ್ಖಜನ* *

*ಚಿತ್ತಮಾರಾಧಯೇತ್||*

ಮನಸ್ಸು ಮಾಡಿದರೆ ಮರಳು(ಉಸುಕು), ಹೊಯಿಗೆಯಿಂದಲೂ ಎಣ್ಣೆ ತೆಗೆಯಬಹುದಂತೆ. ನೀರಡಿಕೆಯಾದವನು ಮೃಗಜಲ ಅನಿವಾರ್ಯವಾದರೆ ಕುಡಿದಾನು. ಎಲ್ಲೆಲ್ಲ ಬಹಳಷ್ಟು ತಿರುಗಾಡಿ ಕೊನೆಗೆ ಮೊಲದ ಕೋಡನ್ನು (ಕೊಂಬನ್ನು) ಸಂಪಾದಿಸಬಹುದು.ಆದರೆ ಶತಮೂರ್ಖರು, ತಲೆತಿರುಕರನ್ನು ಸಂತೈಸಲಾಗಲಿ, ಓಲೈಸಲಾಗಲಿ, ಸರಿದಾರಿಗೆ ತರಲಾಗಲಿ ಸಾಧ್ಯವಿಲ್ಲದ ಮಾತು.

ಆದಕಾರಣ ಸ್ನೇಹಿತರೇ ಕಸ್ತೂರಿಯ ಯೋಗ್ಯತೆಯನರಿತು ವ್ಯವಹರಿಸುವುದನು ರೂಢಿ ಮಾಡಿಕೊಂಡು, ಇರುವ ದಿನಗಳಲ್ಲಿ ಚೆನ್ನಾಗಿ ಇದ್ದುದರಲ್ಲಿಯೇ ಬಾಳಿ ಬದುಕೋಣ.

ಆಕರ:ಸುಭಾಷಿತ ರತ್ನಾವಳಿ

ಸಂಗ್ರಹ:ರತ್ನಾ ಕೆ.ಭಟ್ ತಲಂಜೇರಿ

ಚಿತ್ರ: ಇಂಟರ್ನೆಟ್ ತಾಣ