ಬಾಳಿಗೊಂದು ಚಿಂತನೆ - 63
ನಾವುಗಳು ಈ ಪ್ರಪಂಚಕ್ಕೆ ಯಾತ್ರಿಕರಾಗಿ ಬಂದವರಿದ್ದೇವೆ ಎಂಬುದು ಯಾವಾಗಲೂ ನಮ್ಮ ಮಸ್ತಕದಲ್ಲಿರಬೇಕು. ನಮ್ಮ ಜಾಗಕ್ಕೆ ಮತ್ತೊಬ್ಬರು ಬರುತ್ತಾರೆ ಎಂದಾಗುವಾಗ ನಾವಿಲ್ಲಿಂದ ಹೊರಡಲೇಬೇಕು. ಇಲ್ಲದಿದ್ದರೆ ನಮ್ಮನ್ನು ಹೊರದಬ್ಬಬಹುದು. ಋಣ ಎಂದು ಇರುತ್ತದೆಯಲ್ಲವೇ? ಋಣ ಮುಗಿದಾಗ ನಮ್ಮ ಕೆಲಸ ಮುಗಿಯಿತು. ನಮ್ಮ ಪಾಲಿಗೆ ಎಷ್ಟು ಬಂದಿದೆಯೋ ಅಷ್ಟೇ ಸ್ವೀಕರಿಸುವ, ಅನುಭವಿಸುವ ಯೋಗ ನಮ್ಮದು. ಅನ್ನದ ಋಣ, ಭೂಮಿ ಋಣ, ಹೆತ್ತವರ ಋಣ ಹೀಗೆಲ್ಲ ಇದೆಯಲ್ಲವೇ?
ಹುಟ್ಟು-ಸಾವು ಭಗವಂತನಾಟ. ವಿಧಿನಿಯಮದಂತೆ ಎಲ್ಲವೂ ಆಗಲೇಬೇಕು. ಮನೆಯಲ್ಲಿ ಹೊಸಜೀವ, ಮಕ್ಕಳು ಜನಿಸಿದಾಗ ಸಂತೋಷಿಸುತ್ತೇವೆ. ಸಂಭ್ರಮ ಪಡುತ್ತೇವೆ. ಜನ್ಮದಿನವನ್ನು ಎಲ್ಲರೂ ಕೂಡಿ ಆಚರಿಸುತ್ತೇವೆ. ಆದರೆ ಸತ್ಯ ವಿಚಾರ *ನಮ್ಮ ಆಯುಷ್ಯದಲ್ಲಿ ಒಂದು ವರ್ಷ ಭೂಮಿ ಮೇಲಿನ ಋಣ ಕಡಿಮೆಯಾಗುವುದು* ನಮಗೆ ಅರಿವಿಗೆ ಬರುವುದೇ ಇಲ್ಲ.
ಅನ್ನದ ಋಣ ಮುಗಿದ ಮೇಲೆ ಒಂದು ಕ್ಷಣ ಸಹ ನಾವು ಇರುವುದಿಲ್ಲ. ಲೆಕ್ಕ ಅಂದರೆ ಪಕ್ಕಾ ಲೆಕ್ಕ ಕಣ್ಣಿಗೆ ಕಾಣದ ಶಕ್ತಿ ಯದು. ಇರುವ ಮೂರು ದಿನದ ಬಾಳುವೆಯಲಿ ಆಟ ಯಾಕೆ? ಚೆನ್ನಾಗಿರೋಣ ಆಗದೇ? ಈ ಸಂದರ್ಭದಲ್ಲಿ ಮಾನ್ಯ ಡಿ.ವಿ.ಜಿ.ಯವರ ಕಗ್ಗವೊಂದು ಓದಿದ ನೆನಪಾಯಿತು.
*ಯಾತ್ರಿಕರು ನಾವು,ದಿವ್ಯ ಕ್ಷೇತ್ರವೀ ಲೋಕ|
ಸತ್ರದಲಿ ನೇಮದಿಂದಿರಲಿಕೆಡೆಯುಂಟು||
ರಾತ್ರಿ ಮೂರಾಯ್ತು ತೆರಳಿದೊಡೆ, ಪಾರು-----|
ಪತ್ಯದವ ಮೆಚ್ಚುವನು--ಮಂಕುತಿಮ್ಮ ||
ಈ ಛತ್ರದಲ್ಲಿ ತಂಗಿರಲು, ಕೆಲವೊಂದು ನಿಯಮಗಳಿಗೆ ಬದ್ಧರಾಗಿರಬೇಕು. ಛತ್ರದ ಮೇಲುಸ್ತುವಾರಿ ನೋಡಿಕೊಳ್ಳುವ ಪಾರುಪತ್ಯದವನು (ಭಗವಂತ) ಬೇರೆ ಯಾತ್ರಿಕರಿಗೆ ಸ್ಥಳ ಕಾದಿರಿಸಿದ್ದೇನೆ ಎಂದು ಹೇಳಿದಾಗ, ನಾವು ಹೊರಡಲೇ ಬೇಕು. ಹೇಳಿದ ತಕ್ಷಣ ಹೊರಟರೆ ಅವನಿಗೆ ಸಂತೋಷ. ಭಗವಂತನಿಂದ ಕರೆ ಬಂದಾಗ ಹಿಂದೆ ಮುಂದೆ ನೋಡದೆ ಹೊರಡಲೇ ಬೇಕೆಂಬ ನಿಯಮ ಮತ್ತು ನಮ್ಮನ್ನು ಆತ ಮೆಚ್ಚುವನು. ಹಾಗಾಗಿ ಯಾತ್ರಿಕರಾಗಿ ಬಂದ ನಾವು ಯಾತ್ರಿಕರ ಹಾಗೆಯೇ ಇದ್ದು, ಇರುವ ಮೂರು ದಿನದಲಿ ಅನ್ಯೋನ್ಯವಾಗಿರೋಣ.
-ರತ್ನಾ ಭಟ್ ತಲಂಜೇರಿ
ಆಧಾರ :ಮಂಕುತಿಮ್ಮನ ಕಗ್ಗ