ಬಾಳಿಗೊಂದು ಚಿಂತನೆ - 64
ಗುಣಾನಾಂ ವಾ ವಿಶಾಲಾನಾಂ
ಸತ್ಕಾರಾಣಾಂ ಚ ನಿತ್ಯಶಃ/
ಕರ್ತಾರಃ ಸುಲಭಾ ಲೋಕೇ
ವಿಜ್ಞಾತಾರಸ್ತು ದುರ್ಲಭಾಃ//
ಈ ಜಗತ್ತಿನಲ್ಲಿ ನಮ್ಮ ಸುತ್ತಮುತ್ತ ಒಳ್ಳೆಯ ಗುಣಗಳನ್ನು, ವಿಶಾಲವಾದ ಮನೋಭಾವವಿರುವವರನ್ನು, ಅತಿಥಿ ಸತ್ಕಾರ ಮಾಡುವವರನ್ನು ನಿತ್ಯವೂ ನಾವು ನೋಡುತ್ತಾ ಇರುತ್ತೇವೆ. ಆದರೆ ಹಾಗಿದ್ದವರನ್ನು ನೋಡಿ ಸಮಾಜದಲ್ಲಿ ಗುರುತಿಸುವವರು ಕಡಿಮೆ.
ಒಳ್ಳೆಯ ಜ್ಞಾನ ಇರುವವರು, ವಿವಿಧ ಕಲೆಗಳಲ್ಲಿ ಪರಿಣತಿ ಹೊಂದಿದವರು, ಧರ್ಮಕ್ಕಾಗಿ ಸುಖ ಸಂತೋಷಗಳನ್ನು ತ್ಯಾಗ ಮಾಡಿದವರು, ತಮ್ಮವರನ್ನು ದೂರಕ್ಕೆ ಸರಿಸಿದವರು, ನ್ಯಾಯಕ್ಕಾಗಿ ಸರ್ವಸ್ವವನ್ನೂ ಕಳಕೊಂಡವರು, ಪರೋಪಕಾರವನ್ನೇ ಒಂದು ವ್ರತದ ಹಾಗೆ ಆಚರಿಸಿದವರು,ಬೇರೆಯವರ ಕಷ್ಟಕ್ಕೆ ಒದಗುವವರು, ಹೀಗಿರುವ ತುಂಬಾ ಜನ ಸಹೃದಯರು ಇದ್ದಾರೆ. ಇಂತಹ ಗುಣಗಳನ್ನು ಹೊಂದಿದ ಮಹನೀಯರು, ಮಹಿಳೆಯರು ನಮ್ಮ ಸಮಾಜದ ಆಸ್ತಿಗಳು. ಆದರೆ ಸಮಾಜದಲ್ಲಿ ಅವರನ್ನು ನೋಡಿ ಗುರುತಿಸುವ ಕೆಲಸ ಆಗುವುದಿಲ್ಲ. ಅವರು ಎಲೆಯಮರೆಯ ಕಾಯಿಗಳಾಗಿಯೇ ಇರುತ್ತಾರೆ. ಕಾರಣ ಎಲ್ಲಾ ತನಗೇ ಸಿಗಬೇಕೆಂಬ ಹೇಳುವ ಮನೋಭಾವ, ಬೇರೆಯವರಿಗೆ ಸಿಗಲೇಬಾರದೆಂಬ ಮಾತ್ಸರ್ಯ, ಗೊತ್ತಿದ್ದು ಗೊತ್ತಿಲ್ಲದ ಹಾಗೆ ಸುಮ್ಮನೆ ಕೂರುವ ಸ್ವಭಾವ, ವಸೂಲಿ ಸ್ವಭಾವದವರಿಂದಾಗಿ ಪ್ರತಿಭಾವಂತರು ಜೀವಮಾನವಿಡೀ ಮೂಲೆಗುಂಪಾಗಿದ್ದಾರೆ. ಅವರ ಹತ್ತಿರ ತಾವಾಗಿ ಕೇಳಿಕೊಂಡು ಹೋಗುವ, ಪ್ರಚಾರ ಮಾಡುವ,ಇನ್ನೊಬ್ಬರ ಎದುರು ಹೋಗಿ ತಲೆ ಬಾಗುವ, ಕೈಕಟ್ಟಿ ನಿಲ್ಲುವ, ಸ್ವಭಾವ, ಗುರುತಿಸಿ ಎಂದು ಹೇಳುವ ಆತ್ಮವಂಚನೆ ಮಾಡುವ ಗುಣ ಇರುವುದಿಲ್ಲ. ಹಾಗೆ ಹೋಗುವುದೂ ಇಷ್ಟವಿಲ್ಲ. ಅವರು ಅದನ್ನು ಬಯಸುವುದಿಲ್ಲ. ಒಳ್ಳೆಯ ಗುಣಗಳನ್ನು ಗುರುತಿಸಿ ಪ್ರಶಂಸಿಸುವ ಕಾರ್ಯ ನಿಜವಾಗಿಯೂ ಆಗಬೇಕು.
*ಸ್ವಸಾಮರ್ಥ್ಯ,ಸ್ವಪ್ರತಿಭೆಗೆ ಯಾವತ್ತೂ ಮರಣವಿಲ್ಲ.*
ಆಧಾರ:ಸ್ವಪ್ನ ವಾಸವದತ್ತ
ಸಂಗ್ರಹ:ರತ್ನಾ ಭಟ್ ತಲಂಜೇರಿ