ಬಾಳಿಗೊಂದು ಚಿಂತನೆ - 68

ಬಾಳಿಗೊಂದು ಚಿಂತನೆ - 68

‘ಯದಾಯದಾ ಯೋಗಃ ತದಾ ತದಾನ ರೋಗಃ ,ಧ್ಯಾನ ಮಾನವ ಬದುಕಿನ ಸಂಜೀವಿನಿ’ ಎಂದರೂ ತಪ್ಪಾಗಲಾರದು. ಹೇಗೆ ವಿದ್ಯುತ್ ದೀಪದಲ್ಲಿ ವಿದ್ಯುತ್ ಸಂಚಾರವಾಗುವಾಗ, ತಂತಿಗಳು ಪ್ರಕಾಶಮಾನವಾಗಿ ಹೊಳೆಯುತ್ತದೆಯೋ ಹಾಗೆಯೇ ಯೋಗ ಮತ್ತು ಧ್ಯಾನ ಪರಸ್ಪರ ಪೂರಕ ಮತ್ತು ನಮ್ಮ ಆರೋಗ್ಯಕ್ಕೆ ಬೇಕಾದ ಮೂಲ ಮಂಂತ್ರ.

ಯಾವುದೇ ರೀತಿಯ ಚಿಂತನೆ,ಒತ್ತಡ, ಯೋಚನೆಗಳಿಲ್ಲದೆ,ವಿಷಯರಹಿತ ಮನಸ್ಥಿತಿಯ ಕ್ರಮವೇ ಧ್ಯಾನ ಎನಿಸಿಕೊಳ್ಳುತ್ತದೆ. ಇದಕ್ಕೆ ಸಾಧನೆ, ತಪಸ್ಸು, ಏಕಾಗ್ರತೆ, ದೇವರ ಮೇಲೆ ಭಯಭಕ್ತಿ, ಮನಸ್ಸು, ತಲ್ಲೀನತೆ ಎಲ್ಲವೂ ಬೇಕು. ಇಲ್ಲಿ ಚಂಚಲ ಚಿತ್ತಕ್ಕೆ ಕಡಿವಾಣ ಹಾಕಿ, ಪಂಚೇಂದ್ರಿಯಗಳ ವಶನಾಗದೆ, ಬಹಿರಂಗವನ್ನು ಮುಚ್ಚಿ, ಅಂತರಂಗವನ್ನು ತೆರೆದು, ಪಾರಮಾರ್ಥಿಕದತ್ತ ದೃಷ್ಟಿ ಹರಿಸಿ, ಆಧ್ಯಾತ್ಮಿಕ ವಿಚಾರಗಳನ್ನು ಮೆಲುಕು ಹಾಕುತ್ತಾ, ಅರಿಷಡ್ವರ್ಗಗಳನ್ನು ತ್ಯಜಿಸಿ, ಶಿರಸ್ಸು, ಶರೀರ, ಬುದ್ಧಿ ಮೂರನ್ನೂ ನೇರವಾಗಿಸಿ, ತನ್ಮಯತೆಯಿಂದ ಕೂಡಿ ಧ್ಯಾನ ಮಾಡುವುದೇ ಪರಮಶ್ರೇಷ್ಠ.

ಮುಂಜಾನೆ ಮನಸ್ಸು ಮತ್ತು ವಾತಾವರಣ ಚೆನ್ನಾಗಿರುವಾಗ ಸೂರ್ಯ ನಮಸ್ಕಾರ, ಮುದ್ರೆಗಳು,ಧ್ಯಾನ ಒಳ್ಳೆಯದು. ಇದರಿಂದ ದೇಹಕ್ಕೆ ಆಹ್ಲಾದವೆನಿಸುತ್ತದೆ. ‘ಓಂ ಶಾಂತಿಃ’ ಎಂಬ ಬೀಜಮಂತ್ರ ವಿಶ್ವಚೈತನ್ಯದಾಯಕ. 'ಸತ್, ಚಿತ್, ಆನಂದ’ ಈ ಮೂರೂ ಈ ಮಂತ್ರದಲ್ಲಿದೆ. ಅಷ್ಟಾಂಗ ಯೋಗಗಳು, ಓಂಕಾರ ನಾಮ ಇವೆರಡೂ ನಮ್ಮ ದೇಹವನ್ನು ಸಂಪೂರ್ಣ ಆರೋಗ್ಯದಲ್ಲಿಡಲು ಸಹಕಾರಿ. 'ಪ್ರಾಣಾಯಾಮ' ಜೀವದಾನವಿದ್ದಂತೆ.

ಶರೀರದ 'ಆಯಾಸ, ದಣಿವು, ನೋವು, ಸವೆತ, ಒತ್ತಡ, ಜನ್ಮಾಂತರದ ಕರ್ಮಗಳ ನಿವಾರಣೆ' ಇವೆಲ್ಲವೂ ಧ್ಯಾನದಿಂದ ಸಿಗುತ್ತದೆ. ಜೊತೆಗೆ ಪೋಷಕಾಂಶಭರಿತ ಆಹಾರ ಸೇವನೆ ಸಾಕಷ್ಟು ನೀರು ಕುಡಿಯುವುದು, ಚೆನ್ನಾಗಿ ನಿದ್ರಿಸುವುದು ಈ ಎಲ್ಲಾ ಅಭ್ಯಾಸಗಳು ಚೆನ್ನಾಗಿ ಜೀವನ ನಡೆಸಲು ಸಹಕಾರಿ. 'ಮನಃಶಾಂತಿ, ಸಂಯಮ, ರೋಗನಿರೋಧಕ ಶಕ್ತಿ  ಹೆಚ್ಚುತ್ತದೆ. ಒಂದಷ್ಟು ಸಮಯ ದಿನದಲ್ಲಿ ಧ್ಯಾನಕ್ಕಾಗಿ ಮೀಸಲಿಟ್ಟು 'ಕಾಯಾ-ವಾಚಾ-ಮನಸಾ ಶುದ್ಧವಾಗಿದ್ದು, ಪ್ರಸಕ್ತ ಜಂಜಾಟದ ಜೀವನ ಶೈಲಿಯಿಂದ ಹೊರಬರಲು ಧ್ಯಾನ ಎಂಬ ಮಹಾ ಅಸ್ತ್ರದ ಮೂಲಕ ಪರಿಹಾರ ಕಂಡುಕೊಂಡು, ಇರುವಷ್ಟು ದಿವಸ ನಿರೋಗಿಗಳಾಗಿ, ನಿರ್ಮಲಚಿತ್ತದವರಾಗಿ, ಉಪಕಾರಿಗಳಾಗಿ ಬದುಕಿ ಬಾಳೋಣ.

ಓಂ  ಶಾಂತಿಃ ಶಾಂತಿಃ  ಶಾಂತಿಃ

-ರತ್ನಾ ಕೆ ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ