ಬಾಳಿಗೊಂದು ಚಿಂತನೆ - 69

ಬಾಳಿಗೊಂದು ಚಿಂತನೆ - 69

ಭ್ರಾತೃತ್ವದ ಅರ್ಥ ಬಹು ವಿಶಾಲವಾದ್ದು. ಅಣ್ಣ, ಸೋದರ ಎಂದರೆ ಸಹೋದರಿಯ ಪಾಲಿಗೆ ಅಪ್ಪನ ಸ್ಥಾನದಲ್ಲಿರಬೇಕಾದ ಧೀಮಂತ ವ್ಯಕ್ತಿ. ಸೋದರ ಪ್ರೀತಿ ವಾತ್ಸಲ್ಯ ಅನುಪಮ, ಅವರ್ಣನೀಯ. ಊಹೆಗೂ ನಿಲುಕದ್ದು, ಗಾಢವಾದ್ದು. ಪುಟ್ಟ ತಂಗಿಯನ್ನು ಅಣ್ಣ ಕೈಹಿಡಿದು ನಡೆಸುಕೊಂಡು ಹೋಗುವ ಸನ್ನಿವೇಶದ ಕಲ್ಪನೆಯೇ ಸೊಗಸು.

ಬಂಧುತ್ವ ಎಂಬುದರ ಬೆಲೆ ಕಡಿಮೆಯಾಗುತ್ತಿದೆಯೇ, ಆ ಕಾಲಘಟ್ಟದಲ್ಲಿ ನಿಂತಾಗಿದೆಯೇ ಎಂಬ ಸಣ್ಣ ಅನುಮಾನ ಮೂಡತೊಡಗಿದೆ. ಎಲ್ಲಾ ಮೊಬೈಲ್ ನಲ್ಲಿಯೇ ಸಂಬಂಧಗಳು ಅಡಗಿ ಹೋಗಿದೆ. ಕಡಿದು ಹೋದ ಸಂಬಂಧಗಳ ಬೆಸೆಯುವಿಕೆ ಮತ್ತೊಮ್ಮೆ ಮಾಡಿ ಸಂತಸಪಡೋಣ. ಭದ್ರವಾದ ರಾಖಿಯನ್ನು ಸಹೋದರನ ಕೈಗಳಿಗೆ ಕಟ್ಟುವ ಮೂಲಕ ಆಶ್ವಾಸನೆ, ನಂಬಿಕೆ, ವಿಶ್ವಾಸ, ರಕ್ಷಣೆ ಮರಳಿ ತರೋಣ. ಅಣ್ಣ ತಂಗಿಯರ ನೆಲೆ ಸಂಬಂಧ ಗಟ್ಟಿಯಾಗುವ ರಾಖಿಹಬ್ಬ, ರಕ್ಷಾಬಂಧನ ಇಂದು ಆಚರಿಸುತ್ತಾ ಇದ್ದೇವೆ. ಇದು ಒಂದು ಸಣ್ಣ ಔಷಧಿಯಾಗಿ ಕೆಲಸಮಾಡಬಹುದು. ಒಂಟಿತನ, ಖಿನ್ನತೆ , ಬೇಸರ, ಹತಾಶೆ ಕಾಡಿದಾಗ ತನ್ನ ಸಹೋದರ, ಸಹೋದರಿಯಲ್ಲಿ ತನಗಾಗುವ ಮಾನಸ್ಸಿನ ತುಮುಲಗಳನ್ನು ಮನಬಿಚ್ಚಿ ಹೇಳಬಹುದು. ಆಗ ಹೃದಯ ಹಗುರವಾಗಬಹುದಲ್ಲವೇ? ಸಹೋದರಿಯರಲ್ಲಿ ತಾಯಿಯ ವಾತ್ಸಲ್ಯ ಕಾಣಬಹುದು. ತಾಯಿ, ಸೋದರಿ ಇವರಿಗಿರುವ ತಾಳ್ಮೆ ಮತ್ತೊಬ್ಬರಿಗಿರಲು ಸಾಧ್ಯವಿಲ್ಲ. ‘ಏನೇ ಬರಲಿ ಹೆದರದಿರು’ ಎಂದು ಬೆನ್ನು ತಟ್ಟಿ ಪ್ರೋತ್ಸಾಹಿಸುವ ಸೋದರ ಸೋದರಿಯರು ಬೇಕು. ಇದುವೇ ಬಂಧನದ ಗುಟ್ಟು.

ಜೀವನ ಮೌಲ್ಯಗಳನ್ನು ಕಾಣುವುದು ಹಬ್ಬಗಳ ಆಚರಣೆಯಲ್ಲಡಗಿದೆ. ’ರಕ್ಷಾಬಂಧನ’ ಕೇವಲ ಬಂಧಿಸುವ ದಾರವಾಗದೆ, ಭಾವನೆಗಳ ಗುಚ್ಛವಾಗಲೆಂಬ ತತ್ವ ಅಡಗಿದೆ, ಹಾರೈಕೆಯಡಗಿದೆ. ಇತಿಹಾಸದತ್ತ ನೋಡಿದರೆ ವೀರಸಾವರ್ಕರ್  ಸಾಮೂಹಿಕವಾಗಿ ಸಕಲರಿಗೂ ಅರಶಿನ ಕುಂಕುಮ ಸೌಭಾಗ್ಯ ಒದಗಿಸಿ, ಭರವಸೆಯನ್ನು ಮೂಡಿಸಿದ ಮಹಾವೀರ. ಲಕ್ಷ್ಮೀಬಾಯಿಯನ್ನು ರಣ ಸಿಂಹಿಣಿ, ವೀರವನಿತೆಯಾಗಿ ಹುರಿದುಂಬಿಸಿದ ತಾತ್ಯಾಟೋಪಿ ಸಹೋದರನ ಸ್ಥಾನದಲ್ಲಿ ಅಮೋಘ ಕೊಡುಗೆ ನೀಡಿದ ಮಹಾನುಭಾವರು. ವೀರ ಭಗತ್ ಸಿಂಗನಿಗೆ ಆಶ್ರಯ ಕಲ್ಪಿಸಿದ ದುರ್ಗಾದೀದಿ. ತಾನಾಜಿ ಕುಟುಂಬಕ್ಕೆ ಸಹೋದರನಾಗಿ ಸಹಕರಿಸಿ ಆಸರೆಯಾದ ಶಿವಾಜಿ ಹೀಗೆ ಒಂದೊಂದು ಉದಾಹರಣೆಗಳು ಓದುವಾಗ ಮೈರೋಮಾಂಚನಗೊಳುವುದು. ದ್ರೌಪದಿಯ ಅಕ್ಷಯಾಂಬರ ಸನ್ನಿವೇಶ, ಸುಭದ್ರೆಗಾಗಿ, ಆಕೆಯ ಮನೋಇಂಗಿತವನ್ನರಿತ ಶ್ರೀ ಕೃಷ್ಣ ಹೂಡಿದ ತಂತ್ರ ಇವೆಲ್ಲವೂ ಸಹೋದರತ್ವದ ಪ್ರತೀಕವೇ ಆಗಿದೆ.

ರಾಷ್ಟ್ರ ರಕ್ಷಣೆಯ ಧ್ಯೋತಕ, ಸಹೋದರಿಯರ ಮಾನಪ್ರಾಣ ರಕ್ಷಣೆ, ಪರಸ್ಪರ ಪ್ರೀತಿ ವಿಶ್ವಾಸಗಳ ಭರವಸೆಗಳ ಹೂರಣವನ್ನು *ರಕ್ಷಾಬಂಧನ*  ರಾಖಿಹಬ್ಬದಲ್ಲಿ ಕಾಣೋಣ, ಅರಿತು ನಡೆಯೋಣ.

-ರತ್ನಾ ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ