ಬಾಳಿಗೊಂದು ಚಿಂತನೆ (7) - ಆರೋಗ್ಯ

ಬಾಳಿಗೊಂದು ಚಿಂತನೆ (7) - ಆರೋಗ್ಯ

ಮಾನವನು ಪ್ರಕೃತಿಯ ಅವಿಭಾಜ್ಯ ಅಂಗ. ನಮ್ಮ ಶರೀರ ಆರೋಗ್ಯವಾಗಿದ್ದಷ್ಟೂ ನಾವು ಚೇತೋಹಾರಿಗಳಾಗಿರಲು ಸಾಧ್ಯ. ಕವಿ ಕಾಳಿದಾಸ ಒಂದೆಡೆ *ಶರೀರ ಮಾಧ್ಯಂ ಖಲುಧರ್ಮ ಸಾಧನಂ* ಎಂದು ಬರೆದದ್ದು ಸತ್ಯ. ನಾವು ಮಾನಸಿಕವಾಗಿ, ದೈಹಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿಯೂ ಆರೋಗ್ಯವಂತರಾಗಿರಬೇಕು. ದೇಹದ ಸಮತೋಲನ ತಪ್ಪಿದಾಗ, ನಿತ್ಯ ನಡೆಯುವ ಕ್ರಿಯೆಗಳಿಗೆ ಅಡಚಣೆಯಾದಾಗ *ಆರೋಗ್ಯ ಕೆಟ್ಟಿದೆ* ತೀರ್ಮಾನಕ್ಕೆ ಬರುತ್ತೇವೆ. ನಮ್ಮಲ್ಲಿ ಒಂದು ಅಂಧ ವಿಶ್ವಾಸವಿದೆ. ಹಣವಿದ್ದರೆ ಎಲ್ಲವನ್ನೂ ಕೊಂಡುಕೊಳ್ಳಬಹುದೆಂದು. ಆದರೆ ಆಯುಷ್ಯ ಮುಗಿದರೆ, ಏನೂ ಮಾಡಲಾಗದು. ಹಣ, ಶ್ರೀಮಂತಿಕೆ, ದರ್ಪ, ಅಹಂ ನಮ್ಮನ್ನು ಖಂಡಿತಾ ಉಳಿಸಲಾರದು.

ದೇಹದ ಸಮತೋಲನವನ್ನು ಉತ್ತಮ ಪೋಷಾಕಾಂಶಗಳಿಂದ ಕೂಡಿದ ಆಹಾರವಸ್ತುಗಳನ್ನು ತಯಾರಿಸಿ ಸೇವಿಸಿ ಕಾಪಾಡಿಕೊಳ್ಳೋಣ. ರೋಗ ಬಂದ ಮೇಲೆ ಕಷ್ಟ ಪಡುವುದಕ್ಕಿಂತ, ರೋಗ ಬಾರದ ಹಾಗೆ ನೋಡಿಕೊಳ್ಳೋಣ.

*A sound mind in a sound body*ಅಲ್ಲವೇ? ನಿರೋಗಿಯಾಗಿರುವುದು ಎಂದರೆ ಮಹಾ ಭಾಗ್ಯವೇ ಸರಿ. ತೃಪ್ತಿಯ ಜೀವನ, ಆರೋಗ್ಯ ಅಭ್ಯಾಸಗಳು, ಶಾಂತಚಿತ್ತತೆ, ದೈಹಿಕ, ಮಾನಸಿಕ, ಸಮಾಧಾನಿಯಾಗಿರುವವನೇ ಆರೋಗ್ಯವಂತ ಎನ್ನ ಬಹುದು. ಆರೋಗ್ಯ ಎನ್ನುವುದು ಮಾರುಕಟ್ಟೆಯಿಂದ ಹಣಕೊಟ್ಟು ಖರೀದಿಸಲು ಸಾಧ್ಯವಿಲ್ಲದ್ದು.

ಒತ್ತಡ, ಆರ್ಥಿಕತೆ, ಐಷಾರಾಮಿ ಬದುಕು, ದುಶ್ಚಟಗಳ ದಾಸ, ವಿವಿಧ ಆಕರ್ಷಣೆಗಳು, ಜೀವನಶೈಲಿ, ತಲ್ಲಣ, ಅನುಕರಣೆಗಳೇ ನಮ್ಮನ್ನು ಹಂತ ಹಂತವಾಗಿ ಕ್ಷೀಣಿಸುವ ರಾಕ್ಷಸರು. ಆಗಾಗ ಸ್ವಲ್ಪ ವಿಶ್ರಾಂತಿ ಪಡೆಯೋಣ.*Be relax,Be healthy*.

ನಿಯಮಿತ ಆಹಾರ ಸೇವನೆ, ಇದ್ದುದರಲ್ಲೇ ತೃಪ್ತಿ, ಯೋಗ, ಸಮಚಿತ್ತ, ಸಹನೆ, ಶೀಲತ್ವ, ನಂಬಿಕೆ, ದೃಢತೆ, ನಿದ್ದೆ ಇವುಗಳೆಲ್ಲಾ ಆರೋಗ್ಯಕ್ಕೆ ಸಹಕಾರ ನೀಡುವಂತ ಮೌಲ್ಯಗಳು. ಸಮಾಜದಲ್ಲಿ,ನಮ್ಮ ಮನೆಗಳಲ್ಲಿ ಉತ್ತಮ ಆರೋಗ್ಯವನ್ನು ಹೊಂದುತ್ತಾ, ಸದಾ ಲವಲವಿಕೆಯಿಂದ ನಾವೆಲ್ಲ ಇರಲು ಪ್ರಯತ್ನಿಸೋಣ. ಪ್ರಕೃತ ಕಾಲಘಟ್ಟದಲ್ಲಿ ಕೊರೊನಾದಂತ ರೋಗ ಪ್ರಪಂಚಕ್ಕೆ ಸವಾಲಾಗಿದೆ. ನಾವೆಲ್ಲರೂ ಬಂದ ಎಲ್ಲವನ್ನೂ ಧೈರ್ಯದಿಂದ ಎದುರಿಸೋಣ. ಆರೋಗ್ಯವೇ ಭಾಗ್ಯ.

-ರತ್ನಾ ಭಟ್ ತಲಂಜೇರಿ

ಚಿತ್ರ: ಇಂಟರ್ನೆಟ್ ನಿಂದ ಸಂಗ್ರಹಿತ