ಬಾಳಿಗೊಂದು ಚಿಂತನೆ - 71

ಬಾಳಿಗೊಂದು ಚಿಂತನೆ - 71

ಧೈರ್ಯದ ಒಂದೇ ಒಂದು ನುಡಿ ಎಂಥ ಕಷ್ಟದಲ್ಲಿದ್ದರೂ ಮೇಲೆತ್ತಬಲ್ಲುದು. ಆತ್ಮೀಯತೆ, ಸ್ನೇಹ ಎನ್ನುವುದು ಸೇವಿಸುವ ಆಹಾರದಲ್ಲಿರುವ ಪೋಷಕಾಂಶಗಳಂತೆ. ಆತ್ಮಬಲವನ್ನು ಹೆಚ್ಚಿಸಬಹುದು. ನಾವು ಯಾವತ್ತೂ ಉತ್ತಮರ ಸ್ನೇಹ, ಒಡನಾಟ ಮಾಡಿದರೆ ಇದೆಲ್ಲ ಅದಾಗಿಯೇ ಬರುವುದು. ಆತ್ಮವಿಕಸನಕ್ಕೆ ಬೇಕಾದ ಮಾತುಗಳನ್ನು ಎಂದೂ ತಿರಸ್ಕರಿಸದಿರೋಣ. ನಮಗೇನು ನಷ್ಟವಿಲ್ಲ, ನೊಂದವರಿಗೆ ಸಹಕಾರ ಮಾಡಲು ಆಗದಿದ್ಧರೆ ಬೇಡ, ಸಾಂತ್ವನದ ಮಾತುಗಳನ್ನು ಹೇಳಬಹುದು. ನಿಸ್ವಾರ್ಥ, ನಿರಹಂಕಾರಿಯಾದ ಗುಣ ಸದಾ ಇರಲಿ. ಒಳ್ಳೆಯ ಮನಸ್ಸು ಮನುಜಗೆ ಹೊಳೆಯುವ ಆಭರಣವಿದ್ದಂತೆ.

ಈಗ ಎರಡು ವರ್ಷದ ಘಟನೆಗಳನ್ನು ಅವಲೋಕಿಸಿದರೆ ಇಂಥ ದಿನಗಳು ನಮ್ಮ ಬದುಕಿನ ಹಾದಿಯಲ್ಲಿ ಬರಬಹುದೆಂಬ ಕಲ್ಪನೆ ಸಹ ಇರಲಿಲ್ಲ. ಬಂದುದನ್ನು ಎದುರಿಸಿ ಮುಂದೆ ಹೋಗುವ ಚಾಕಚಕ್ಯತೆ ಎಲ್ಲರಿಗೂ ಅವಶ್ಯಕ ಇಂದಿನ ಈ ಕಾಲಘಟ್ಟದಲ್ಲಿ ಅತಿ ಅಗತ್ಯ. ಪುಟ್ಟ ಕಂದಮ್ಮಗಳು, ಪುಟ್ಟ ಪುಟ್ಟ ಮಕ್ಕಳು, ಶಾಲಾ ವಾತಾವರಣದಲ್ಲಿ ನಲಿದಾಡಬೇಕಾದ ಬಾಲರನ್ನು ಗ್ರಹಿಸಿದರೆ  ದೊಡ್ಡವರಾದ ನಮಗೆ ಖೇದವಾಗುತ್ತದೆ. ಮುಂದೆ ಹೇಗೆ ಅನ್ನಿಸುತ್ತದೆ. ಆದರೆ ಧೈರ್ಯ ತುಂಬುವ ಮಹತ್ತರ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ನಾಳಿನ ಬದುಕಿಗೆ ತೆರೆದುಕೊಳ್ಳುವಂತೆ ಮಾಡಲೇಬೇಕು. ‘ಹಾಸಿಗೆ ಇದ್ದಷ್ಟೇ ಕಾಲುಚಾಚುವುದನ್ನು’ ನಾವು ಕಲಿಸಬೇಕು. ಆರೋಗ್ಯ ಅರಿವು, ಜಾಗ್ರತೆ, ಕಷ್ಟಗಳನ್ನು ಎದುರಿಸಿ ಹೋಗುವ ಕಲೆ ಎಲ್ಲವನ್ನೂ ಕಲಿಸಬೇಕು, ಹಿರಿಯರಾದ ನಮ್ಮೆಲ್ಲರ ಜವಾಬ್ದಾರಿ ಸಹ.

ದುಃಖದಲ್ಲಿದ್ದವನಿಗೆ, ಇನ್ನು ಯಾವ ದಾರಿಯೂ ಕಾಣುವುದಿಲ್ಲ ಎನ್ನುವವನಿಗೆ ಒಂದು ಸಣ್ಣ ಬೆಳಕಿನ ಕಿಡಿಯನ್ನು ಕಿಂಡಿಯ ಮೂಲಕ ತೋರಿಸುವ ಕಾರ್ಯ ವನ್ನು ಮಾಡೋಣ. ಜೀವನವೆಂಬ ಈ ಮಹಾಸಾಗರದಲ್ಲಿ ಈಜಿ ದಡ ಸೇರಲು ನಾವೆಲ್ಲ ಆಶಾಕಿರಣಗಳಾಗೋಣ. ಮೊದಲು ನಾವು, ಜೊತೆಗೆ ನಮ್ಮ ಪರಿಸರದವರನ್ನು ಸಹ ಕರೆದುಕೊಳ್ಳೋಣ. ಸ್ನೇಹಿತರೇ ಒಬ್ಬರಿಗೊಬ್ಬರು ನೆರವಾಗೋಣ.

-ರತ್ನಾ ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ