ಬಾಳಿಗೊಂದು ಚಿಂತನೆ - 72

ನಮ್ಮ ಮನೆಗಳ ನಂದಾದೀಪ ಆರಿಹೋಗದಂತೆ ಜಾಗ್ರತೆ ಮಾಡಿ ಜಾಗೃತಿ ಮೂಡಿಸಬೇಕಾದವರು ನಾವೇ. ಬೇರೆಯವರು ಬರಲಾರರು. ನಾವು ಸಡಿಲ ಬಿಟ್ಟಾಗ ಹೇಗೆ ದೀಪದಲ್ಲಿ ಎಣ್ಣೆ ಆರಿದಾಗ ಉರಿಯುವುದು ನಿಲ್ಲುವುದೋ ಅದೇ ಸ್ಥಿತಿ ಆಗಬಹುದು. ಹಾಗಾದರೆ ಯಾರು ಹೊಣೆ ಇದಕ್ಕೆ. ನಾವೇ ಅಲ್ಲವೇ? ಹೆಜ್ಜೆ ಹೆಜ್ಜೆಗೂ ಎಚ್ಚರಿಕೆಯಲ್ಲಿರಬೇಕಾದ ನಾವುಗಳು ಎಚ್ಚರಿಕೆ ತಪ್ಪುವುದೇ ಕಾರಣವಲ್ಲವೇ? ನಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರಗಳನ್ನು ಬಾಲ್ಯದಿಂದಲೇ ಕಲಿಸುತ್ತಾ ಬಂದಾಗ, ಅವರ ಮನಸ್ಸಿನಾಳದಲ್ಲಿ 'ನಾನು ಸರಿಯಾಗಿರಬೇಕು, ಏನಾದರೂ ಹೆಚ್ಚುಕಡಿಮೆಯಾದರೆ ಹೆತ್ತವರಿಗೆ ಕೆಟ್ಟ ಹೆಸರು ಬರಬಹುದು' ಎಂಬ ಸಾಮಾಜಿಕ ಪ್ರಜ್ಞೆ ಸದಾ ಎಚ್ಚರಿಸುತ್ತಾ ಇರುತ್ತದೆ.
ಹೆಣ್ಣಾಗಲಿ ಗಂಡಾಗಲಿ ಇಲ್ಲಿ ಲಿಂಗ ತಾರತಮ್ಯವಿಲ್ಲದೆ ಬೆಳೆಸಬೇಕು. ಹೆಣ್ಣು ಮಗುವಿಗೆ ಆಯಾಯ ವಯಸ್ಸಿನ ಬದಲಾವಣೆ, ಹೀಗಾದರೆ ಏನಾಗಬಹುದೆಂಬ ಅರಿವನ್ನು ಮೂಡಿಸುವುದು ಹೆತ್ತವರ ಕರ್ತವ್ಯ. ಗಂಡೆಂದು ತಲೆಮೇಲೆ ಕೂರಿಸದೆ ಸಹಜವಾಗಿ ಬೆಳವಣಿಗೆಗೆ ಪೂರಕ ವಾತಾವರಣ ಕಲ್ಪಿಸುವುದು. ‘ನೀನು ಹುಡುಗಿ ಹಾಗೆ ಮಾಡಬೇಡ, ಹೀಗೆ ಹೋಗಬೇಡ’ ಹೇಳುವುದರಿಂದ ಹಾಗೆ ಮಾಡಿದರೆ, ಹೀಗೆ ಹೋದರೆ ಏನಾಗಬಹುದು ಅದನ್ನು ತಿಳಿಸುವ ಕೆಲಸಗಳು ಮನೆಮನೆಯಲ್ಲಿ ಮಾಡಿದರೆ ಒಳ್ಳೆಯದು.
ಮುಂದೆ ಕಲಿತು ಪ್ರಾಯಕ್ಕೆ ಬಂದ ಮೇಲೆ ಸಾಮಾಜಿಕ ಪ್ರಜ್ಞೆ ಇರುವ ಯಾವೊಬ್ಬ ಹೆಣ್ಣು ಮಗಳು ಸಹ ಸಮಯ ಸಂದರ್ಭ ನೋಡಿಕೊಂಡು ವ್ಯವಹರಿಸಬಹುದು ಖಂಡಿತ. ಲಂಗುಲಗಾಮು ಇಲ್ಲದೆ, ಏನು ಮಾಡಿದರೂ ಯಾರು ಕೇಳುವವರಿಲ್ಲ ಎಂಬವರಿಗೆ ಸಮಯ ಹೊತ್ತುಗಳ ಅರಿವಿಲ್ಲದೆ ವ್ಯವಹರಿಸುವರು. ತಾವು ತೊಡುವ ವೇಷಭೂಷಣಗಳ ಬಗ್ಗೆ ತಾವೇ ಒಮ್ಮೆ ಕನ್ನಡಿಯ ಎದುರು ನಿಂತು ಯೋಚಿಸುವುದನ್ನು ರೂಢಿ ಮಾಡಿಕೊಂಡರೆ ಉತ್ತಮ. ನಾಲ್ಕು ಜನ ಒಪ್ಪುವಂತಿದ್ದರೆ ಎಲ್ಲವೂ ಸುಗಮವೆ. ಮೈಮನ ಶುದ್ಧವಾಗಿಡುವುದರ ಜೊತೆಗೆ, ಧರಿಸುವ ಆಭರಣ, ಬಟ್ಟೆ ,ಮಾತನಾಡುವ ರೀತಿ-ನೀತಿಗಳು, ಇಡುವ ಹೆಜ್ಜೆ ಎಲ್ಲವೂ ಸರಿಯಾಗಿದ್ದರೆ ಯಾವುದೇ ಅನಾಹುತಗಳಿಗೆ ತುತ್ತಾಗುವುದನ್ನು ತಪ್ಪಿಸಬಹುದು. ‘ಎರಡು ಕೈಗಳೂ ಸೇರಿದರೆ ಮಾತ್ರ ಚಪ್ಪಾಳೆ’ ಅಲ್ಲವೇ?
ನಮ್ಮ ಸಂಸ್ಕೃತಿ, ಸಂಪ್ರದಾಯಗಳು, ಆಚಾರ-ವಿಚಾರಗಳನ್ನು ಗಾಳಿಗೆ ತೂರುವವರನ್ನು, ಸಾಮಾಜಿಕ ಪ್ರಜ್ಞೆ ಇಲ್ಲದವರನ್ನು, ನನ್ನ ಕುದುರೆಗೆ ಮೂರೇ ಕಾಲು ಎಂದು ವಾದ ಮಾಡುವವರನ್ನು,ನಾನು ಮಾಡಿದ್ದೇ ಸರಿ ಎನ್ನುವವರನ್ನು ಏನೂ ಮಾಡಲಾಗದು. ಸೋತಮೇಲೆ ಪ್ರಜ್ಞೆ ಬರುವುದು ಅಂಥವರಿಗೆ. ನಮ್ಮ ಮನೆಯ ನಂದಾದೀಪಗಳು ಸದಾ ಬೆಳಗುವಂತೆ ಪ್ರತಿಯೋರ್ವ ಹೆತ್ತವರು ನೋಡಿಕೊಳ್ಳೋಣ, ಸಮಸ್ಯೆ ಬರುವುದನ್ನು ಆದಷ್ಟೂ ಬಾರದ ಹಾಗೆ ಪ್ರಯತ್ನಿಸೋಣ, ಇದುವೇ ಸಮಾಜಕ್ಕೆ ಸಲ್ಲಿಸುವ ಬಹುದೊಡ್ಡ ಕೊಡುಗೆ.
-ರತ್ನಾ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ