ಬಾಳಿಗೊಂದು ಚಿಂತನೆ - 73

ಪುಣ್ಯ ಸಂಪಾದನೆ ಮಾಡಲು ತೀರ್ಥಯಾತ್ರೆ, ಪೂಜೆ, ವ್ರತ, ಜಪ, ಯಾಗ ಎಂದು ಆಯುಷ್ಯ ಕಳೆಯುವುದರ ಬದಲು ಕಷ್ಟದಲ್ಲಿದ್ದವರಿಗೆ ಸ್ವಲ್ಪವಾದರೂ ಸಹಕರಿಸೋಣ. ಅದುವೇ ಪುಣ್ಯ ಸಂಪಾದನೆಗೆ ರಹದಾರಿ. ನೋಡಿಯೂ ನೋಡದಂತೆ, ಕೇಳಿಯೂ ಕೇಳದಂತೆ ವ್ಯವಹರಿಸುವುದೇ ಪಾಪದ ಕೆಲಸ. ಪರಪೀಡನೆಯಷ್ಟು ದೊಡ್ಡ ಪಾಪ ಮತ್ತೊಂದಿಲ್ಲ. ಪರ ಪೀಡನೆ ಎನ್ನುವುದೇ ಮಹಾಪಾಪದ ಕೆಲಸ. ಇನ್ನೊಬ್ಬರ ನೋವನ್ನು ನೋಡಿ ನಗುವವ ವಿಘ್ನಸಂತೋಷಿ. ಈ ಜನ್ಮದಲ್ಲಿಯೇ ಪಾಪಗಳನ್ನು ಕಳಕೊಂಡು ಪುಣ್ಯವಂತರಾಗೋಣ.’ಅಗೋಚರ ಶಕ್ತಿ ಒಂದಿದೆ, ಸೂತ್ರಧಾರನಾಗಿಹ’ ಎಂಬುದು ಮನದ ಗುಡಿಯಲಿರಲಿ. ಮೌನವಾಗಿ ಧ್ಯಾನ, ಪ್ರಾರ್ಥನೆ ಮಾಡಬಹುದು. ಇರುವುದು, ಇಲ್ಲದ್ದು ಎಲ್ಲೆಲ್ಲಿಂದಲೋ ಸಾಲ ಸೋಲ ಮಾಡಿ ತಂದು ದೊಡ್ಡ ದೊಡ್ಡ ವಸ್ತುಗಳನ್ನು ನೀಡಿ ಕಷ್ಟ ಬರುವುದರಿಂದ ಶ್ರದ್ಧಾಭಕ್ತಿಯಲಿ ಒಂದು ತುಳಸಿ ಎಲೆಯ ಅರ್ಪಣೆಯಲ್ಲಿ ಬೃಹತ್ ಶಕ್ತಿ ಅಡಗಿದೆ ಎಂದು ಅರಿಯುವವರ ಸಂಖ್ಯೆ ಶೂನ್ಯ. ತಾನು ಎಸಗಿದ ಪಾಪಗಳು, ಬಡವರ ಹೊಟ್ಟೆಗೆ ಹೊಡೆದು ಸಂಪಾದಿಸಿದ ಐಶ್ವರ್ಯದಿಂದ, ವಾಮಮಾರ್ಗದ ಗಳಿಕೆಯಿಂದ ಭಗವಂತನಿಗೆ ಹೊನ್ನಿನ ಕಿರೀಟ ನೀಡಿ ಕೈತೊಳೆದುಕೊಂಡರೆ ಹೋಗುವುದೇ? ಇದು ಕೇವಲ ಭ್ರಮೆಯಷ್ಟೆ.
ಇರುವಷ್ಟು ದಿನ ನಾಲ್ಕು ಜನರಿಗೆ ಆದರೆ ಸಹಾಯ ಮಾಡೋಣ, ಇಲ್ಲದಿದ್ದರೆ ಮೌನವಾಗಿರೋಣ. ನಮ್ಮ ಮನದ ಕದವ ತೆರೆದು ಪ್ರಾರ್ಥನೆ ಸಲ್ಲಿಸೋಣ. ಪುಣ್ಯ ಪಾಪ ಎರಡನ್ನೂ ನಾವು ಎಸಗುವ ಕೆಲಸಕಾರ್ಯಗಳಲ್ಲಿಯೇ ಅಡಗಿದೆಯೆಂಬುದನ್ನು ಅರಿತು ಬಾಳೋಣ.
-ರತ್ನಾ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ