ಬಾಳಿಗೊಂದು ಚಿಂತನೆ - 74

ಕೃತಜ್ಞತೆ ಎನ್ನುವುದು ಅತ್ಯಂತ ದೊಡ್ಡ ಗುಣ. ನಮಗೆ ಮಾಡಿದ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸುವುದು ಧರ್ಮ. ಉಪಕಾರ ಮಾಡಿದವರನ್ನು ಯಾವತ್ತೂ ಮರೆಯಬಾರದು. ಎಲ್ಲಿಯಾದರೂ ಮರೆತರೆ ಅದನ್ನೇ ‘ಕೃತಘ್ನತೆ’ ಹೇಳ್ತೇವೆ. ಅದನ್ನು ದ್ರೋಹ ಹೇಳಬಹುದು. ಉಂಡ ಮನೆಗೆ ಯಾರೂ ದ್ರೋಹ ಮಾಡಬಾರದು. ಇದು ಪಾಪದ ಕೆಲಸ ಸಹ. ಕಷ್ಟದಲ್ಲಿದ್ದವರಿಗೆ ಸಹಾಯಹಸ್ತ ನೀಡುವುದು ಮಾನವೀಯತೆ. ಆದರೆ ಸಹಾಯ ಪಡಕೊಂಡವನು ಮಾತ್ರ ತಾನು ಉತ್ತಮ ಸ್ಥಿತಿಗೆ ಬಂದಾಗ ಸಹಾಯ ಮಾಡಿದವನನ್ನು ಪರಿಚಯವೇ ಇಲ್ಲದ ಹಾಗೆ ಮಾಡುವುದನ್ನು ಸಮಾಜದಲ್ಲಿ ಕಾಣ್ತಾ ಇದ್ದೇವೆ.ಇದು ವಿಪರ್ಯಾಸ.
ಯಾವತ್ತೂ ಸಹಕರಿಸಿದವನ ಬಗ್ಗೆ ಕೃತಜ್ಞತೆ ಇರಲಿ. ನಮ್ಮ ಮನೆಯ ಶ್ವಾನಕ್ಕೆ ಮೂರು ಹೊತ್ತು ಹೊಟ್ಟೆಗೆ ನೀಡಿ, ಪ್ರೀತಿ ತೋರಿಸಿದರೆ ,ಬದುಕಿನುದ್ದಕ್ಕೂ ಎಷ್ಟು ನಿಯತ್ತಿರುತ್ತದೆ ಅಲ್ಲವೇ?ಅದರಿಂದಲೂ ಕೆಳಮಟ್ಟಕ್ಕೆ ನಾವು ಹೋಗುವುದು ಸರಿಯಲ್ಲ.
*ಬ್ರಹ್ಮ ಘ್ನೇ ಚ ಸುರಾಪೇ ಚ*
*ಚೋರೇ ಭಗ್ನವ್ರತೇ ಶಠೇ*
*ನಿಷ್ಕ್ರತಿರ್ವಿಹಿತಾ ಸದ್ಭಿಃ*
*ಕೃತಘ್ನೇ ನಾಸ್ತಿ ನಿಷ್ಕ್ರತಿಃ||*
ವಿದ್ಯಾವಂತನಾದ ಸಜ್ಜನ ವ್ಯಕ್ತಿಯನ್ನು ಕೊಲೆಮಾಡಿದವನಿಗೂ, ಹೆಂಡ ಕುಡಿದವನಿಗೂ, ಚಿನ್ನ ಇತ್ಯಾದಿ ಕದ್ದ ಕಳ್ಳನಿಗೂ, ಒರಟನಿಗೆ, ಮರ್ಯಾದೆ ಉಲ್ಲಂಘಿಸಿ ಮೋಸಮಾಡುವವನಿಗೆ ಸಹ ಪ್ರಾಯಶ್ಚಿತ್ತವಿದೆ. ಆದರೆ ಕೃತಘ್ನನಿಗೆ ಕ್ಷಮೆಯೂ ಇಲ್ಲ ಪ್ರಾಯಶ್ಚಿತ್ತವೂ ಇಲ್ಲ.
-ರತ್ನಾ ಭಟ್ ತಲಂಜೇರಿ
-ಸಂಗ್ರಹ- ಪಂಚತಂತ್ರ