ಬಾಳಿಗೊಂದು ಚಿಂತನೆ - 76

ಬಾಳಿಗೊಂದು ಚಿಂತನೆ - 76

ಯಾರಾದರೂ ನಾನು ಬಹಳ ಜ್ಞಾನವಂಥ ಎಂದರೆ ಅವನಷ್ಟು ದಡ್ಡರು ಯಾರೂ ಇರಲಾರರು. ಜೀವನದಲ್ಲಿ ಎಲ್ಲವೂ ಕಲಿತಾಯಿತು ಎಂದು ಹೇಳಲಾಗದು. ಕಲಿಯುವಿಕೆ, ಜ್ಞಾನ ಎಂಬುದು ನಿಂತ ನೀರಲ್ಲ. ಅದು ಸದಾ ಹರಿಯುವ ನೀರು. ಪ್ರತಿನಿತ್ಯ, ಪ್ರತಿಕ್ಷಣ ಹೊಸತು ಕಲಿಯುತ್ತಿರುತ್ತೇವೆ. ಕಲಿತ ಜ್ಞಾನವನ್ನು ಸಮಯ ಸಂದರ್ಭಕ್ಕೆ ಸರಿಯಾಗಿ ಅಳವಡಿಸಿಕೊಳ್ಳುವ ಚಾಕಚಕ್ಯತೆ ನಮ್ಮಲ್ಲಿರಬೇಕು. ಅನುಷ್ಠಾನ ಗೊಳಿಸಲು ವಿವೇಚನೆ ಇರಬೇಕು. ಜ್ಞಾನ ಮತ್ತು ಬುದ್ಧಿವಂತಿಕೆ ಸೇರಿದಾಗ ಎಲ್ಲವನ್ನೂ ಸಾಧಿಸಬಹುದು. ಕಳೆದು ಹೋದ ದಿನಗಳು ಮತ್ತೆಂದೂ ಬಾರದು. ಪಡೆದ ತಿಳುವಳಿಕೆಯನ್ನು ಉತ್ತಮ ಕೆಲಸಗಳಿಗಾಗಿ ಬಳಸಿಕೊಳ್ಳೋಣ. ದಾರಿತಪ್ಪುತ್ತಿರುವ ನಾಲ್ಕು ಜನರಿಗೆ ಉಪಕಾರವಾದರೆ ಅದಕ್ಕಿಂತ ದೊಡ್ಡ ಪ್ರಶಸ್ತಿ ಬೇರೆ ಬೇಡ. ಆದಷ್ಟೂ ಉಪಕಾರಿಗಳಾಗೋಣ. ಶೀಲವಂತರಾಗಿ, ಯಾವುದು ಒಳ್ಳೆಯದು? ಯಾವುದು ಕೆಟ್ಟದು? ಯಾವುದನ್ನು ಮಾಡಬಹುದು? ಯಾವುದು ಮಾಡಬಾರದ್ದು? ಎಂಬ ವಿವೇಚನೆ ಪಡೆದ ಜ್ಞಾನದಲ್ಲಿ ಬಳಸಿದರೆ ಸಾಕು. ಸುಖಾಸುಮ್ಮನೆ ನಾನು ಜ್ಞಾನಿ ಹೇಳುವುದರಲ್ಲಿ ಅರ್ಥವಿಲ್ಲ. ಹಾಗಾಗಿ ಇರುವ ಕ್ಷಣವನ್ನು ಬಳಸಿಕೊಳ್ಳೋಣ. ನಮ್ಮ ಕುಟುಂಬ ಕ್ಷೇಮದೊಂದಿಗೆ ಸಮಾಜಮುಖಿ ಕೆಲಸಕಾರ್ಯಗಳಲ್ಲಿ ತೊಡಗಿಸೋಣ.

-ರತ್ನಾ ಕೆ.ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ