ಬಾಳಿಗೊಂದು ಚಿಂತನೆ - 77

ಬಾಳಿಗೊಂದು ಚಿಂತನೆ - 77

ಇಂದಿನ ಸ್ಥಿತಿ ಹೇಗಿದೆ ಎಂಬ ಅರಿವಿನೊಡನೆ ನಾಳೆಯ ಬಗ್ಗೆ ಸ್ವಲ್ಪ ಯೋಚಿಸಿ ನಿರ್ಧಾರಗಳನ್ನು ಕೈಗೊಂಡರೆ, ಸ್ವಲ್ಪ ನಮ್ಮ ದಾರಿಯಲ್ಲಿ ನೆಮ್ಮದಿ ಸಿಗಬಹುದು. ಇದ್ದ ಕೆಲಸ ಹೋಯಿತು. ಬದುಕಿಗೆ ಏನು ಮಾಡುವುದು ಎಂದು ಕೈಕಟ್ಟಿ ಕೂರದೆ, ಬೇರೆ ಅನ್ನ ಸಂಪಾದನೆಯ ವ್ಯವಸ್ಥೆ ಬಗ್ಗೆ ಯೋಚಿಸಬೇಕು. ನಮ್ಮ ಪೈಕಿ ಓರ್ವ ಮಹನೀಯರ ಕೆಲಸ ಹೋಯಿತು. ಮುಂದೆ ಅವಕಾಶ ಇರುವಾಗ ಬರಹೇಳುತ್ತೇವೆ ಹೇಳಿದರು, ಆಶ್ವಾಸನೆ ಮಾತ್ರ. ಇವರಿಗೆ ಏನು ಮಾಡುವುದೆಂದು ತೋಚದೆ ಬಹಳ ಚಿಂತೆಯಲ್ಲಿದ್ದರು. ಒಂದಷ್ಟು ಒಡನಾಡಿಗಳ ಫೋನ್ ಸಂಭಾಷಣೆಯಲ್ಲಿ ಸಾಂತ್ವನದ ನುಡಿಗಳು ಅವರನ್ನು ತಾಳ್ಮೆ ವಹಿಸುವಂತೆ ಮಾಡಿತು. ಎಷ್ಟೋ ಸಲ ನಾನು ಆ ಮಹನೀಯರ ಹತ್ತಿರ ದೂರವಾಣಿ ಮಾತುಕತೆ ಮಾಡಿದ್ದೇನೆ. 'ಭಗವಂತನಿದ್ದಾನೆ, ಕೈಬಿಡಲಾರ, ನಿನ್ನ ಪ್ರಯತ್ನ ಮಾಡು, ನಾನೂ ಪ್ರಯತ್ನಿಸುವೆ, ತಾಳ್ಮೆಯೇ ಮುಖ್ಯ ಈಗ' ಎಂದು ಹೇಳುತ್ತಿದ್ದೆ. ಯಾವ ಕೆಲಸ ಮಾಡಲೂ ಅವರು ತಯಾರಾಗಿರುವುದು ಆರೋಗ್ಯಕರ ವಿಷಯ. ಒಂದಷ್ಟು ದಿವಸ ಹೋಟೆಲ್ ಕೆಲಸ, ಅಡುಗೆ ಸಹಾಯಕರು ಹೀಗೆ ಮಾಡುತ್ತಿದ್ದರು. ನಿನ್ನೆಯ ದಿನ ನನಗೆ ಫೋನಾಯಿಸಿ 'ಎರಡು ವರ್ಷದಿಂದ ಕೆಲಸ ಸರಿಯಾದ್ದಿಲ್ಲದೆ ಏನೋ ದಿನ ದೂಡ್ತಾ ಇದ್ದೆ, ನೀವು ಹೇಳಿದ ಹಾಗೆ ಆಯಿತು, ತಾಳ್ಮೆ ಎಂಬ ಅಸ್ತ್ರದಿಂದ ನಾನು ಬಹಳಷ್ಟು ಕಲಿತೆ. ನಾಳೆಯಿಂದ ಮೊದಲಿನ ಕೆಲಸಕ್ಕೆ ಸೇರಿಕೊಳ್ಳುತ್ತಿದ್ದೇನೆ' ಎಂದು ಹೇಳಿದರು. ಅವರ ಮಾತುಗಳಲ್ಲಿದ್ದ ಆತ್ಮವಿಶ್ವಾಸ, ಮಿಂಚಿನ ಧ್ವನಿ ಅರ್ಥೈಸಿಕೊಂಡು ಶುಭಹಾರೈಸಿದೆ.

ಮೂಲೆಗುಂಪಾದೆವೆಂದು ಚಿಂತಿಸದೆ ಬೇರೆ ಬೇರೆ ನ್ಯಾಯಯುತವಾದ ದಾರಿಗಳನ್ನು ಹುಡುಕಿ, ನಮ್ಮ ಹುಟ್ಟಿಗೊಂದು ಸಾರ್ಥಕತೆ ಪಡೆಯುವುದು ನಮ್ಮ ಕೈಯಲ್ಲಿಯೇ ಇದೆ. ಸ್ವಲ್ಪ ಕಾಯಬೇಕು, ತಾಳ್ಮೆ ಬೇಕು. ‘ತಾಳ್ಮೆ ಒಂದು ತಪಸ್ಸಿದ್ದ ಹಾಗೆ, ದಾಸವರೇಣ್ಯರು ಸುಮ್ಮಗೆ ಹಾಡಿಲ್ಲ, ತಾಳುವಿಕೆಗಿಂತನ್ಯ ತಪವು ಇಲ್ಲ’ ಎಂಬುದಾಗಿ. ಇಂದಿನ ಜೀವನದ ಜೊತೆ ನಾಳಿನ ಬಗ್ಗೆ ಸ್ವಲ್ಪ ದೃಷ್ಟಿ ಹಾಯಿಸುತ್ತಾ ಬದುಕು ಕಟ್ಟಿಕೊಳ್ಳುವ ಬಗ್ಗೆ ನಮ್ಮ ಆಲೋಚನೆಗಳೂ, ಯೋಜನೆಗಳೂ ಇರಲಿ.

-ರತ್ನಾ ಕೆ.ಭಟ್ ತಲಂಜೇರಿ

ಸಾಂದರ್ಭಿಕ ಚಿತ್ರ ಕೃಪೆ: ಇಂಟರ್ನೆಟ್ ತಾಣ