ಬಾಳಿಗೊಂದು ಚಿಂತನೆ (8) - ಅತೃಪ್ತಿ
ಉಪರ್ಯುಪರಿ ಪಶ್ಯಂತಃ ಸರ್ವ ಏವ ದರಿದ್ರತಿ
ಅಧೋಧಃ ಪಶ್ಯತಃ ಕಸ್ಮ ಮಹಿಮಾ ನೋಪಚೀಯತೇ
ತನಗಿಂತ ಎತ್ತರ ಮಟ್ಟದಲ್ಲಿರುವವನನ್ನು ನೋಡಿ ನಾವು ಹಲುಬುತ್ತೇವೆ. ಛೇ, ಅವನಷ್ಟು ಐಶ್ವರ್ಯ, ಹಣ, ಆಸ್ತಿ, ಸ್ಥಾನಮಾನಗಳು, ನನಗಿಲ್ಲವಲ್ಲ ಎಂಬ ಅತೃಪ್ತಿ ಹೊಗೆಯಾಡುತ್ತಾ ಇರುತ್ತದೆ. ಹೀಗೆ ಯೋಚಿಸಿಯೇ ನಾವು ಮತ್ತಷ್ಟು ಬಡವರಾಗುತ್ತೇವೆ. ತನಗಿಂತ ಕೆಳಸ್ತರದವರನ್ನು ನಾವು ಯಾವಾಗಲೂ ತುಲನೆ ಮಾಡಿದರೆ, ಈ ಅತೃಪ್ತಿ ಎಂಬ ಪದವೇ ಇರಲಾರದು. ತೃಪ್ತಿಯೇ ಸಿರಿತನದ ಲಕ್ಷಣ. ಅತೃಪ್ತಿ ದಾರಿದ್ರ್ಯದ ದಿಕ್ಸೂಚಿ ಇದ್ದ ಹಾಗೆ.
ನಾವು ಪುರಾಣದತ್ತ ನೋಟ ಹರಿಸಿದರೆ, ರಾಜ ಯಯಾತಿ ಅಷ್ಟು ಸುಖ ಭೋಗಗಳನ್ನು ಅನುಭವಿಸಿದರೂ, ಮತ್ತೆ ಮಗನ ಯೌವನವನ್ನು ಪಡೆದು, ಭೋಗದಿಂದಲೇ ಭೋಗವನ್ನು ಜಯಿಸಲು ಹೋಗಿ ಸೋತುಹೋದನು. ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಯಿತು ಅರಸನ ವ್ಯವಹಾರ. ಕಾರಣ ಅತೃಪ್ತಿ.
ಇದ್ದುದರಲ್ಲೇ ತೃಪ್ತಿ ಹೊಂದಿ, ಬದುಕುವುದೇ ಜೀವನದ ಗುಟ್ಟು. ಅದನ್ನು ರಟ್ಟು ಮಾಡಲು ಹೋಗಿ ಸಿಕ್ಕಿ ಬಿದ್ದು ಹಾಳಾಗುವುದು ಬೇಡ.*ಪಾಲಿಗೆ ಬಂದದ್ದು ಪಂಚಾಮೃತ*ಇದ್ದುದನ್ನು ಇದ್ದಂತೆ ಸ್ವೀಕರಿಸೋಣ.
ಎಷ್ಟೋ ಕಡೆಗಳಲ್ಲಿ ಹೇಳುವುದಿದೆ 'ಅವನ ಮನೆ ತುಂಬಾ ಚಿಕ್ಕದು, ನಾಲ್ಕು ಜನ ಒಳಗೆ ಹೋದರೆ, ಒಳಗಿದ್ದವರು ಹೊರಗೆ ಬರಬೇಕಷ್ಟೆ ' ಎಂಬುದಾಗಿ. ಮನೆ ಸಣ್ಣದಾದರೇನು, ಮನೆಯೊಳಗಿನ ಜನರ ಮನಸ್ಸು ಸಣ್ಣಗಾಗದಿದ್ದರಾಯಿತು. ಮನೆ ವಾಸಿಸಲು ಬೇಕಾದ್ದು, ಮನೆಗೆ ಲಕ್ಷಗಟ್ಟಲೆ ಹಣ ವ್ಯಯಿಸಿದರೆ, ಆ ಹಣಕ್ಕೆ ಮರು ಉತ್ಪತ್ತಿ ಇದೆಯೇ? ಇಲ್ಲ. ಸಣ್ಣ, ದೊಡ್ಡ ಎಂಬುದು ಬೇಡ, ತೃಪ್ತಿಯಿಂದ ಜೀವನ ನಡೆಸೋಣ. ಈ ಎಲ್ಲದಕ್ಕೂ ನಮ್ಮ ಮನಸ್ಸು ಕಾರಣ. ಮನಸ್ಸನ್ನು ಸ್ಥಿರತೆಯಲ್ಲಿಟ್ಟುಕೊಂಡರೆ, ನಮ್ಮನ್ನು ಯಾರಿಗೂ ಏನು ಮಾಡಲಾಗದು.
ಗಗನದೊಳನಂತದರ್ಶನದೆ ಮುಕ್ತಿಯನೊಂದು/
ನಗು ನಗಿಸಿ ಲೋಕವನು--ಮಂಕುತಿಮ್ಮ//
-ರತ್ನಾ ಭಟ್ ತಲಂಜೇರಿ
(ಸಂಗ್ರಹ) ಚಿತ್ರ : ಅಂತರ್ಜಾಲ ತಾಣದಿಂದ