ಬಾಳಿಗೊಂದು ಚಿಂತನೆ - 80
ಸತ್ಯ ಮತ್ತು ಸುಳ್ಳು ಎಂಬ ಪದಗಳಲ್ಲಿ ಎಷ್ಟೊಂದು ತತ್ವ, ಸಾರ ಅಡಗಿದೆ? ಓರ್ವ ಸುಳ್ಳನ್ನೇ ಸತ್ಯ ಎಂಬಂತೆ ಬಣ್ಣಿಸಿ ಹೇಳಿದರೆ, ನಾವು ಕೇಳುವವರು ಆಲೋಚಿಸಬೇಕು. ಅವನ ಮಾತಿನ ಧಾಟಿಯಲ್ಲಿಯೇ ಅದು ತಿಳಿಯಲು ಸಾಧ್ಯ. ಸ್ವಲ್ಪ ಆಳವಾಗಿ ಯೋಚಿಸಿದರೆ ಸತ್ಯ ಸುಳ್ಳುಗಳ ಸುಳಿವು ಸಿಗಬಹುದು. ಒಳಗಣ್ಣು ತೆರೆದಾಗ ಎಲ್ಲವೂ ಕಾಣಲು ಸಾಧ್ಯ. ಆದರೆ ಅದು ನಾವು ಮಾಡುವುದಿಲ್ಲ. ಹೊರಗಿನಿಂದ ಮಾತ್ರ ನೋಡಿ ಹೇಳ್ತೇವೆ. ಒಂದೆರಡು ಸಲ ನಾವು ಕೇಳಬಹುದು. ನಂತರ ಯಾರೂ ಬೆಲೆ ಕೊಡಲಾರರು.
ಒಂದು ಕಡೆ ಡಿ.ವಿ.ಜಿಯವರು ಸತ್ಯ -ಸುಳ್ಳಿನ ಬಗ್ಗೆ ಹೇಳಿದ್ದು ಹೀಗೆ.
*ಪಂಡಿತರೆ ಶಾಸ್ತ್ರಗಳೆ ಮಿಥ್ಯೆಯಿಂ ತಥ್ಯಕ್ಕೆ|*
*ಖಂಡಿತದಿ ಸೇತುವೆಯಕಟ್ಟುವೊಡೆ* *ನೀವು||*
*ಕಂಡಿಹಿರ ನರಹೃದಯದಾಳ* *ಸುಳಿ ಬಿರುಬುಗಳ?*
*ದಂಡವದನುಳಿದ ನುಡಿ--ಮಂಕುತಿಮ್ಮ||*
ವಿದ್ವಾಂಸರು, ಸಕಲ ಶಾಸ್ತ್ರಗಳನ್ನು ಬಲ್ಲವರೆ, ಸುಳ್ಳಿನಿಂದ ಸತ್ಯಕ್ಕೆ (ನಿಜಕ್ಕೆ) ಸೇತುವೆಯನ್ನು ಕಟ್ಟುವಾಗ, ಮಾನವನ ಹೃದಯದ ಆಳ, ಸುಳಿ, ಕಾಠಿಣ್ಯವನ್ನು ಕಂಡಿರುವಿರಾ? ಅದನ್ನರಿತು ವ್ಯವಹರಿಸದಿದ್ದರೆ, ಬರೆಯದಿದ್ದರೆ ಈ ಕಲಿತ ಜ್ಞಾನ ಪಾಂಡಿತ್ಯವೆಲ್ಲ ವ್ಯರ್ಥವಲ್ಲವೇ?
ವೇದಶಾಸ್ತ್ರಗಳಲ್ಲಿ ಮಾತ್ರ ಸತ್ಯ ಹೇಳಿದರೆ ಸಾಲದು. ಪಾಲಿಸಬೇಕು ನಾವು. ಹೊರಜಗತ್ತಿನ ಆಕರ್ಷಣೆ ಬೇಡ ನಮಗೆ. ಒಳಗೆ ಏನಿದೆ ನೋಡಲು, ಆಯ್ಕೆ ಮಾಡಲು ಕಲಿತರೆ ಎಲ್ಲವೂ ಸರಿಯಾಗುವುದು. ಆ ಕೆಲಸ ನಾವು ಮಾಡುವುದಿಲ್ಲ. ನಮಗೆ ಎಲ್ಲವೂ ಸುಲಭದಲ್ಲಿ ಆಗಬೇಕು. ವಿವೇಚನೆಯನ್ನು ಬಳಸಿದರೆ, ಸ್ವಲ್ಪ ಮಟ್ಟಿಗಾದರೂ ಸತ್ಯ ವಿಜೃಂಭಿಸಬಹುದು. ಭಗವಂತ ನೀಡಿದ ಬುದ್ಧಿಶಕ್ತಿಗೆ ನಮ್ಮದಾದ ಚಾಕಚಕ್ಯತೆ, ಆಲೋಚನೆ, ತಾರ್ಕಿಕ ಮನಸ್ಸು, ಎಲ್ಲವನ್ನೂ ಬಳಸಿದರೆ ಸ್ವಲ್ಪ ಸರಿಯಾದ ನಿರ್ಧಾರ ತೆಗೆದುಕೊಳ್ಳಬಹುದು. ಒಟ್ಟಿನಲ್ಲಿ ಜೀವನ ಸುಗಮವಾಗಬೇಕು ಅಷ್ಟೆ ನಮ್ಮ ಆಶಯ.
ರತ್ನಾ ಭಟ್, ತಲಂಜೇರಿ
ಆಕರ:ಮಂಕುತಿಮ್ಮನ ಕಗ್ಗ
ಚಿತ್ರ ಕೃಪೆ: ಇಂಟರ್ನೆಟ್ ತಾಣ