ಬಾಳಿಗೊಂದು ಚಿಂತನೆ - 81

ಬಾಳಿಗೊಂದು ಚಿಂತನೆ - 81

ಸಿಟ್ಟು ಯಾವತ್ತೂ ಒಳ್ಳೆಯದಲ್ಲ ಸರಿ ಒಪ್ಪಿಕೊಳ್ಳೋಣ. ಆದರೆ ಎದುರಿದ್ದವನ ಮಾತಿನ ಓಘ ಬೇರೆಯೇ ರೀತಿಯಲಿ ಹರಿಯತೊಡಗಿದಾಗ ಹೇಗಿದ್ದವನಿಗೂ ಸಿಟ್ಟು ಬರಬಹುದು. ಕೇಳಿಯೂ ಕೇಳದ ಹಾಗಿದ್ದವನಿಗೆ, ದಪ್ಪ ಚರ್ಮ ಇದ್ದವನಿಗೆ ಸ್ವಯಂ ನಿಗ್ರಹಿಸಬಹುದೇನೋ.

ಈ ಸಿಟ್ಟು, ಕೋಪಗಳೆಲ್ಲ ಅಸುರೀ ಗುಣಗಳಂತೆ. ಸಿಟ್ಟಿನ ಕೈಗೆ ಬುದ್ಧಿ ಕೊಟ್ಟರೆ ಸರ್ವನಾಶವಲ್ಲವೇ? ಆಗ ಕೆಲಸಕ್ಕೆ ಬರುವುದೇ ‘ವಿವೇಚನೆ’ ಎಂಬ ಅಸ್ತ್ರ. ನಾವು ನಾವಾಗಿಯೇ ಯೋಚಿಸಿ ಹೆಜ್ಜೆ ಮುಂದೆ ಇಟ್ಟರೆ ಎಲ್ಲವೂ ಸುಗಮ. ಸಿಟ್ಟು, ರಾಗ -ದ್ವೇಷಗಳು ಬೂದಿಮುಚ್ಚಿದ ಕೆಂಡಗಳಂತೆ. ಮಾತೇ ಇದೆಯಲ್ಲ? ಸೆರಗಿನಲ್ಲಿ ಕೆಂಡ ಕಟ್ಟಿದಂತೆ ಎಂದು. ಎಷ್ಟು ಹೊತ್ತಿಗೆ ಬೆಂಕಿ ಉರಿ ಏಳಬಹುದು ಹೇಳಲು ಸಾಧ್ಯವಿಲ್ಲ. ನಮಗೆ ನಾವೇ ನಾಶವಾಗಲೂ ಬಹುದು.

‌ಸಿಟ್ಟು ಪ್ರೀತಿ, ವಿಶ್ವಾಸ,ನಂಬಿಕೆ ಎಲ್ಲವನ್ನೂ ನಾಶಮಾಡಬಹುದು. ಜೊತೆಗೆ ಅಹಂ ಸೇರಿಕೊಂಡರೆ ಒಳ್ಳೆಯ ಗುಣವೂ ನಾಶವೇ ಸರಿ. ಇರುವಷ್ಟು ದಿನ ಆದಷ್ಟೂ ಎಲ್ಲವನ್ನೂ ಸಮತೂಕದಲ್ಲಿ ಎಷ್ಟು ಬೇಕೋ ಅಷ್ಟೇ ಬತ್ತಳಿಕೆಯಿಂದ ತೆಗೆದು ಬದುಕನ್ನು ಅನುಭವಿಸೋಣ.

-ರತ್ನಾ ಕೆ.ಭಟ್ ತಲಂಜೇರಿ 

ಚಿತ್ರ ಕೃಪೆ: ಇಂಟರ್ನೆಟ್ ತಾಣ