ಬಾಳಿಗೊಂದು ಚಿಂತನೆ - 82

ಬಾಳಿಗೊಂದು ಚಿಂತನೆ - 82

ನಾವು ಒಮ್ಮೊಮ್ಮೆ ನಮ್ಮನ್ನು ಬೇರೆಯವರಿಗೆ ಹೋಲಿಸಿಕೊಂಡು ಮಾತನಾಡುತ್ತೇವೆ. ಇದು ಸಲ್ಲದು. ನಮ್ಮ ವ್ಯಕ್ತಿತ್ವ ನಮ್ಮದು. ನಮಗೆ ನಾವೇ ಮಾಡಿಕೊಳ್ಳುವ ಅಪಮಾನವಿದು. ನಾವು ನಾವೇ ಆಗಿರಬೇಕು. ಇತರರ ಹತ್ತಿರ ಇರುವ ಒಳ್ಳೆಯ ಹವ್ಯಾಸಗಳು, ಗುಣಗಳು ಇದ್ದರೆ ಸ್ವೀಕರಿಸೋಣ. ಆದರೆ ನಾವಾಗಿಯೇ ಬೆಳೆಯೋಣ, ಬೇರೆಯವರನ್ನು ಬೆಳೆಸೋಣ, ಪ್ರೇರಣೆಯಾಗೋಣ. ಬೇರೆಯವರಿಗಾಗಿ ನಮ್ಮತನವನ್ನೇ ಬದಲಾಯಿಸುವುದು ಸಲ್ಲದು. ಎಲ್ಲರೂ ಹೇಳಿದ್ದನ್ನು ತಾಳ್ಮೆಯಿಂದ ಕೇಳಬೇಕು. ಅದರಲ್ಲಿ ನಮಗೆ ಹಿತವೆನಿಸಿದ್ದು, ನಮ್ಮ ಬದುಕಿಗೆ ಪ್ರಯೋಜನವಾಗುವಂತದ್ದು ಇದ್ದರೆ ‌ಸ್ವೀಕರಿಸಬಹುದು. ನಮಗೆ ನಮ್ಮದೇ ಆದ ಒಂದು ಗುರಿ ಇರಬೇಕು. ಅದು ಜೀವನ ಕ್ರಮಕ್ಕೆ ಪೂರಕವಾಗಿರಬೇಕು. ಯಾರೋ ಏನೋ ಹೇಳುವುದು ನಮಗ್ಯಾಕೆ? ಓರ್ವ ಸಮಾಜದಲ್ಲಿ ಒಳ್ಳೆಯ ಹೆಸರು ಗಳಿಸುವನು ಎಂದಾಗ, ಹಿಂದಿನಿಂದ ಜಗ್ಗುವವರು ಬಹಳ ಮಂದಿ. ಅವನಿಗೆ ಹೆಸರು ಹೇಗೆ ಬಂತು ನೋಡಿಕೊಂಡು ಮುಂದಡಿಯಿಡಬೇಕು. ಸುಮ್ಮನೆ ಯಾರನ್ನೂ ಕೆಣಕಬಾರದು, ನೋಯಿಸಬಾರದು. ಬೇರೆಯವರ ಆದರ್ಶಗಳನ್ನು ನಾವು ಅಳವಡಿಸೋಣ. ಆದರೆ ಅವರಂತೆ ಆಗಬೇಕೆಂದರೆ ಹೇಗೆ ಸಾಧ್ಯ? ಒಬ್ಬನ ಹತ್ತಿರ ಹಣ ಬೇಕಾದಷ್ಟಿದೆ ಹಿರಿಯರ ಆಸ್ತಿ ಬದುಕಿದೆ. ನಮ್ಮ ಹತ್ತಿರ ಏನೂ ಇಲ್ಲ ಎಂದಾಗ ಅವರಂತಾಗಲು ಸಾಧ್ಯವೇ? ‘ನವಿಲು ನಾಟ್ಯ ಮಾಡುವುದು ನೋಡಿ ಕೆಂಭೂತ ನಾಟ್ಯ ಮಾಡಿದಂತೆ’ ಆಗಬಹುದು. ನಮ್ಮ ಪಾಲಿಗೆ ಎಷ್ಟಿದೆಯೋ ಅಷ್ಟೇ ದಕ್ಕುವುದು. ನಾವು ನಾವೇ ಆಗಿ ಬದುಕಿನ ಹಾದಿ ಸವೆಸೋಣ.

-ರತ್ನಾ .ಕೆ.ಭಟ್ ತಲಂಜೇರಿ 

ಚಿತ್ರ ಕೃಪೆ: ಇಂಟರ್ನೆಟ್ ತಾಣ