ಬಾಳಿಗೊಂದು ಚಿಂತನೆ - 83

ಬಾಳಿಗೊಂದು ಚಿಂತನೆ - 83

‘ಸತ್ಯ’ ಎನ್ನುವ ಪದವೇ ತ್ರಿಕಾಲಬಾಧಿತವಾದುದು.’ಸತ್ಯವು ಅಮೃತವಾದರೆ ಸುಳ್ಳು ವಿಷ ಇದ್ದಂತೆ’. ನಾವು ದಿವ್ಯತ್ವವನ್ನು ಪಡೆಯಲು, ಉತ್ತಮರಾಗಲು, ಸಮಾಜದಲ್ಲಿ ಒಳ್ಳೆಯ ಜೀವನವನ್ನು ಸಾಗಿಸಲು ಸತ್ಯ ಎಂಬ ಅಡಿಪಾಯದ ಮೇಲೆ ನಿಲ್ಲಲೇ ಬೇಕು.

ಹುಟ್ಟಿದ ಪ್ರತಿಯೊಂದು ಜೀವಿಗೂ ಮರಣವಿದೆ ಇದು ಸತ್ಯ. ಆದರೆ ನಾವು ಒಪ್ಪಿಕೊಳ್ಳಲು ತಯಾರಿಲ್ಲ. ‘ಮಂಜುಗಡ್ಡೆ ಕೈಯಲ್ಲಿಟ್ಟರೆ ಕರಗದೆ ಇರಲು ಸಾಧ್ಯವೇ?’ ಅಗ್ನಿ ಸುಡುತ್ತದೆ, ಗೊತ್ತಿದೆ. ಹಿಮ ತಣ್ಣಗಿದೆ, ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಸತ್ಯವನ್ನು, ಸತ್ವವನ್ನು ಅರಿಯದೆ ಇಂದು ‘ಅಹಂ’ ಗೆ ಒಳಗಾಗಿದ್ದಾನೆ. ನಾನು ಎಂಬುದು ಬೇಡ. ಎಲ್ಲವೂ ನಾನೇ, ನನ್ನಿಂದ ಎಂಬುದು ಅಹಂನ ಪರಮಾವಧಿ. ನನ್ನ ತಂದೆಯವರು ಹೇಳುತ್ತಿದ್ದ ಒಂದು ಘಟನೆ ನೆನಪಾಯಿತು. ಓರ್ವ ಶ್ರೀಮಂತನಿದ್ದನಂತೆ. ಆದರೆ ಮಹಾ ಪಿಟ್ಟಾಸು(ಜಿಪುಣ). ತೋಟದ ಕೆಲಸ ಅವನೇ ಮಾಡುತ್ತಿದ್ದನಂತೆ. ಹೊರಗಿಂದ ಕೆಲಸಕ್ಕೆ ತಂದರೆ ಹಣಕೊಡಬೇಕಲ್ಲ? ಒಂದು ಸಲ ಒಬ್ಬ ಬಡಪಾಯಿ ಹಸು ಅವನ ತೋಟಕ್ಕೆ ನುಗ್ಗಿ ನೆಟ್ಟ ಬಾಳೆಗಿಡಗಳನ್ನು ತಿಂದಿತು. ಇವನಿಗೆ ಸಿಟ್ಟು ನೆತ್ತಿಗೇರಿ ಆ ಪಾಪದ ಪಶುವಿನ ಕಾಲನ್ನೇ ತುಂಡರಿಸಿದನಂತೆ. ವಿಷಯ ಊರ ಪಂಚಾಯಿತಿ ಕಟ್ಟೆಗೆ ಹೋಯಿತು. ಅಲ್ಲಿ ಊರ ಗೌಡ ಕೇಳಿದ ಎಲ್ಲಾ ಪ್ರಶ್ನೆಗೂ ‘ನಾನು, ನಾನು’ ಹೇಳಿದನಂತೆ. ತೋಟ ಯಾರು ಮಾಡಿದ್ದು, ಬೇಲಿ ಹಾಕಬೇಕಾದವ ಯಾರು?, ಇತ್ಯಾದಿ. ಕೊನೆಗೆ ಹಸುವಿನ ಕಾಲು ಕತ್ತರಿಸಿದ್ದು ಕೇಳುವಾಗ ‘ನಾನಲ್ಲ’ ಎಂದನಂತೆ. ಹಾಗಾದರೆ ಇಷ್ಟರವರೆಗೆ ಎಲ್ಲಾ ನಾನು ಹೇಳಿದವ ಈಗ ಇದೇನು ಕೇಳಿದಾಗ ಮಾತನಾಡದೆ ತಲೆ ಕೆಳಗೆ ಹಾಕಿದನಂತೆ. ಸತ್ಯ ಒಪ್ಪಿಕೊಳ್ಳದಿದ್ದರೂ ಅವನ ವರ್ತನೆಯಿಂದ ಅವನೇ ತಪ್ಪಿತಸ್ಥ ಎಂದು ಹೇಳಿ, ಆ ಹಸುವಿನ ಸಂಪೂರ್ಣ ಆರೋಗ್ಯ ಅವನೇ ನೋಡಿಕೊಳ್ಳಬೇಕು. ಬಡವನಿಗೆ ಮೌಲ್ಯ ಕೊಡಬೇಕು ತೀರ್ಮಾನವಾಯಿತಂತೆ. ಅಂದಿನಿಂದ ‘ನಾನು’ ಹೇಳುವುದನ್ನು ನಿಲ್ಲಿಸಿದನಂತೆ. ಅವನ ನಾನು ಎನ್ನುವುದರಲ್ಲಿಯೇ ಸತ್ಯ ಅಡಗಿತ್ತು. ಪ್ರತ್ಯಕ್ಷವೇ ಪ್ರಮಾಣ, ಇಲ್ಲದಿರೆ ನಂಬಲಾರೆ ಎನ್ನುವ ಒಂದು ವರ್ಗ ಇದೆ. ತೀರ ಹತ್ತಿರದಿಂದ ಬಲ್ಲವರಾದರೆ ಹೇಳಿದ್ದನ್ನು ನಂಬಬಹುದು. ದೂರದವರು ಹೇಳಿದ್ದನ್ನು ನಂಬುವುದು ಹೇಗೆ? ಹೇಳುವವರನ್ನು ಹೊಂದಿಕೊಂಡಿರುತ್ತದೆ. ಎಲ್ಲಿ ಸತ್ಯ ಸಾಯಿಸಲ್ಪಡುತ್ತದೋ ಅಲ್ಲಿ ‘ಆತ್ಮವಂಚನೆ’ ವಿಜೃಂಭಿಸುತ್ತದೆ. ಸತ್ಯ ಅಸತ್ಯದ ಕಡೆಗೆ ಸಾಗಿದಾಗ ಕ್ಷೇಮ ಹೋಗಿ ಕ್ಷಾಮ ಉಂಟಾಗಬಹುದು. ನೀರ ಮೇಲಿನ ನೀರಿನ ಗುಳ್ಳೆಯ ಹಾಗಿನ ನಮ್ಮ ಬದುಕಿನಲಿ ಸತ್ಯ ಎಂಬ ಹೊಂಬೆಳಕಿನ ಕಿರಣಗಳನ್ನು ಸ್ವಾಗತಿಸೋಣ, ಅದರಿಂದಲೇ ಪುನೀತರಾಗೋಣ.

-ರತ್ನಾ ಭಟ್ ತಲಂಜೇರಿ 

ಚಿತ್ರ ಕೃಪೆ: ಇಂಟರ್ನೆಟ್ ತಾಣ