ಬಾಳಿಗೊಂದು ಚಿಂತನೆ (89) - ಮಾನವ ಧರ್ಮ

ಬಾಳಿಗೊಂದು ಚಿಂತನೆ (89) - ಮಾನವ ಧರ್ಮ

ಮಾನವ ಧರ್ಮ ಅಥವಾ ಮನುಷ್ಯತ್ವ ಎಂಬುದು ಪ್ರತಿಯೊಬ್ಬರಲ್ಲೂ ಅಡಕವಾಗಿರುವಂತದ್ದು ಅಥವಾ ಸ್ವಲ್ಪಾಂಶ ರಕ್ತಗತವಾಗಿಯೂ ಬರುವಂತದ್ದು. ಈ ಪ್ರಪಂಚದಲ್ಲಿ ಬೆಳಕು ಕಂಡ ಮೇಲೆ, ಉಸಿರಾಟ ಆರಂಭಿಸಿ ಉಸಿರಾಟ ನಿಲ್ಲಿಸುವವರೆಗೂ ಮಾನವ ಧರ್ಮದ ಬೇರುಗಳು ನಮ್ಮ ಸುತ್ತಲೂ ರಿಂಗಣ ಹೊಡೆಯುತ್ತಾ ಇರುತ್ತದೆ.ಮನಸ್ಸು ಇರುವವನೇ ಮನುಷ್ಯನಾಗಲು ಸಾಧ್ಯ. ‘ಯದ್ಭಾವಂ ತದ್ಭವತಿ’  ಅಲ್ಲವೇ?

ಓರ್ವ ಮಹಿಳೆ ಬಸುರಿ ಎಂದು ಗೊತ್ತಾದ ಕ್ಷಣದಿಂದ. ಮನುಷ್ಯತ್ಯ  ಕೆಲಸ ಮಾಡಲು ಆರಂಭಿಸುತ್ತದೆ. ಮನೆಯ ‌ಸದಸ್ಯರು ವಹಿಸುವ ಕಾಳಜಿಯಲ್ಲಿ ಊಟ, ಉಪಚಾರ, ವ್ಯವಹಾರ ಎಲ್ಲದರಲ್ಲೂ ಬದಲಾವಣೆ ಕಾಣಬಹುದು. ಈ ರೀತಿ ಆರಂಭವಾದ ಮಾನವತೆಯು ಮುಂದೆ ಆ ಮಗುವಿನ ಆಗು ಹೋಗುಗಳ ಮೇಲೆಯೂ ಪ್ರಭಾವ ಬೀರಿ ಉತ್ತಮ ಪ್ರಜೆಯಾಗಿ ಗಟ್ಟಿಗೊಳಿಸುತ್ತದೆ

ಪ್ರೀತಿ, ವಿಶ್ವಾಸ, ಕರುಣೆ, ದಯೆತ್ಯಾಗ, ಸತ್ಯ, ಆರ್ದ್ರತೆ. ದಾನ, ನಡೆನುಡಿ, ಆತ್ಮಶುದ್ಧತೆ, ಸತ್ವಯುತವಾದ ನಿರ್ಧಾರಗಳು, ಶಾಂತಿ, ಸಹನೆ, ಅಹಿಂಸೆ ಇವೆಲ್ಲವೂ ಮಾನವ ಧರ್ಮದಲ್ಲಿ ಅಡಕವಾದ ಬೇರುಗಳು. ದಾನಿಯಲ್ಲಿ ದೇವರ ಅಂಶವನ್ನು ಕಾಣಬೇಕು ಹಿರಿಯರ ನುಡಿ. ‘ಹಸಿದವಗೆ ಹೊನ್ನಿನ ಗಂಟು ನೀಡದಿರು, ಒಂದು ತುತ್ತು ಅನ್ನ ನೀಡಿ ಸಹಕರಿಸು’ ಇದು ಮಾನವ ಧರ್ಮ. ನಮ್ಮ ಮೂಲಭೂತ ಅವಶ್ಯಕತೆಗಳು, ಆಹಾರ, ವಸತಿ, ಬಟ್ಟೆ, ಮೂಲಭೂತ ಸೌಕರ್ಯಗಳು. ಇದನ್ನು ಪ್ರತಿಯೊಬ್ಬರಿಗೂ ಪಡೆಯಲು ಅಧಿಕಾರವಿದೆ.

ಎಲ್ಲರೂ ಶ್ರೀಮಂತರಾಗಲು ಸಾಧ್ಯವಿಲ್ಲ. ಉಳ್ಳವರಿಂದ ಇಲ್ಲದವರಿಗೆ ಸ್ವಲ್ಪವಾದರೂ ನೀಡಿ ಸಹಕರಿಸುವುದೇ ಮನುಷ್ಯ ಧರ್ಮ. ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವುದು, ಕೆಳಕ್ಕೆ ಬಿದ್ದವರನ್ನು ಮೇಲೆತ್ತಿ ಬದುಕು ಕಟ್ಟಿಕೊಳ್ಳಲು ಸಹಕರಿಸುವುದು ಮನುಷ್ಯ ಧರ್ಮವೇ ಆಗಿದೆ. ರಾಮಾಯಣ, ಮಹಾಭಾರತ, ವೇದ, ಉಪನಿಷತ್ತುಗಳಲ್ಲೂ ಮಾನವತೆಯ ಬಗ್ಗೆ ಅನೇಕ ಕಥೆಗಳು, ಉದಾಹರಣೆಗಳು, ಉಪಕಥೆಗಳನ್ನು ನಾವು ಓದಿ, ಕೇಳಿ ತಿಳಿದವರು. ಓರ್ವ ವ್ಯಕ್ತಿಯ ಅಸ್ಥಿತ್ವಕ್ಕೆ ಬೇಕಾದ ಎಲ್ಲಾ ಸತ್ ಗುಣ, ಸಚ್ಚಾರಿತ್ರ್ಯಗಳ ವೇದಿಕೆಯನ್ನೇ ಒದಗಿಸಲು, ಬದುಕಿನ ಚಿತ್ರಣವನ್ನು ಉಣಬಡಿಸುವುದೇ ಈ ಪುರಾಣ ಪುಣ್ಯ ಕಾವ್ಯಗಳು.

ದಯೆಯುಳ್ಳ ಹೃದಯವೇ ದೇವ ಮಂದಿರ, ಮನುಷ್ಯತ್ವ ಎನ್ನುವುದು ಹೃದಯ ಮನಸ್ಸಿನಾಳದಿಂದ ಬರಬೇಕು. ಮಾತಿನಲ್ಲಿ, ಕೃತಿಯಲ್ಲಿ ಒಂದೇ ಇರಲಿ. ಗುರು ಹಿರಿಯರಿಗೆ, ಹೆತ್ತವರಿಗೆ ತಲೆಬಾಗಿ ವಂದಿಸಿ, ಕಿರಿಯರಲ್ಲಿ ಪ್ರೀತಿ, ವಿಶ್ವಾಸ, ನಂಬಿಕೆ ಇಡುವುದು ಸಹ ಮಾನವ ಧರ್ಮದ ತಿರುಳು. ಬೇರೆಯವರ ದುಃಖಕ್ಕೆ ಕಾರಣರಾಗದೆ, ನೋಯಿಸದೆ, ಚಿಂತೆಗೊಡ್ಡದಂತೆ ನೋಡಿಕೊಳ್ಳುವುದೂ ಇದರಲ್ಲಿ ಅಡಕವಾಗಿದೆ. ಯಾರನ್ನೂ ಇಂಚು ಇಂಚು ನೋಯಿಸಿ, ಚಿಂತೆಯಿಂದ ದಹಿಸುವಂತೆ ಮಾಡುವ ಹಕ್ಕು ಮನುಷ್ಯ ಧರ್ಮದಲ್ಲಿ ಇಲ್ಲ.

ನಾನು, ನನ್ನಿಂದ, ನನಗಾಗಿ ತ್ಯಜಿಸಿ ನಾವು, ನಮ್ಮಿಂದ, ನಮ್ಮೆಲ್ಲರಿಗಾಗಿ ಯಾವಾಗ ಮಾತಿನಲ್ಲಿ, ಕೃತಿಯಲ್ಲಿ, ಮನಸ್ಸಿನಲ್ಲಿ, ಹೃದಯದಲ್ಲಿ ಮೂಡುತ್ತದೋ ಅದೇ ಮಾನವ ಧರ್ಮದ ಮೂಲಮಂತ್ರ. ಎಲ್ಲರೊಂದಾಗಿ ಇದ್ದುದನ್ನು ಹಂಚಿಕೊಳ್ಳುವುದು, ವಿಚಾರ ವಿನಿಮಯ ಮಾಡಿಕೊಳ್ಳುವುದು, ಪರಸ್ಪರ ಕಷ್ಟ ಸುಖಗಳಲ್ಲಿ ಒಂದಾಗಿ ಸಹಾಯಹಸ್ತ ಚಾಚುವುದು, ಆರೋಗ್ಯಕರ ಜೀವನ ನಡೆಸುವುದು, ಈ ಎಲ್ಲದರಿಂದ ಮೊದಲು ಮಾನವರಾಗಿ, ಮಾನವತ್ವವನ್ನು ಹೊಂದಿ, ನೈತಿಕತೆಯ ವಿಶಾಲ ಬೇರುಗಳನ್ನು ಎಲ್ಲೆಡೆ ಹಬ್ಬಿಸುವುದೇ ‘ಮಾನವ ಧರ್ಮ’.

-ರತ್ನಾ ಕೆ ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ