ಬಾಳಿಗೊಂದು ಚಿಂತನೆ - 90

ಬಾಳಿಗೊಂದು ಚಿಂತನೆ - 90

ಸ್ನೇಹ ಎನ್ನುವುದು ಸಂತೆಯಲ್ಲಿ ಸಿಗುವ ವಸ್ತುವಲ್ಲ, ಅದು ಹೃದಯದಿಂದ ಮೂಡಬೇಕು.. ‘ಸ್ನೇಹಿತರೇ’ ಎಂದು ಹೇಳುವುದರಲ್ಲಿ ಎಷ್ಟು ಆನಂದವಿದೆ. ಕೃಷ್ಣ ಕುಚೇಲರ ಪವಿತ್ರ ಸ್ನೇಹ, ಅವಲಕ್ಕಿ ಗಂಟಿನ ಕಥೆ, ಅವರೀರ್ವರ ಹೃದಯ ಶ್ರೀಮಂತಿಕೆ ಅಳೆತಗೂ ನಿಲುಕದ್ದು.

ಬದುಕಿನ ನೋವು ನಲಿವು, ಸುಖ ದುಃಖ ಹಂಚಿಕೊಳ್ಳಲು ಸ್ನೇಹಿತರಷ್ಟು ಬೇರೆ ಯಾರೂ ಸಿಗರು. ಹೃದಯದೊಳಗೆ ಬಂಧಿಸಲ್ಪಟ್ಟ, ಹುದುಗಿದ ಎಷ್ಟೋ ವಿಷಯಗಳನ್ನು ಸ್ನೇಹಿತರಲ್ಲಿ ಹೇಳಿಕೊಳ್ಳುತ್ತೇವೆ. ಬಹಳ ಸಂಕಷ್ಟದಲ್ಲಿ ಸಿಕ್ಕಿಬಿದ್ದಾಗ ಎಲ್ಲರೂ ದೂರ ಹೋಗುವರು, ಆದರೆ ನಿಜವಾದ ಸ್ನೇಹಿತರು ಹತ್ತಿರವೇ ನಿಂತು ಸಹಕಾರ, ಸಾಂತ್ವನ ಎರಡೂ ಹೇಳುವರು. ಜೀವಕ್ಕೆ ಜೀವ ಕೊಡುವ ಸ್ನೇಹಿತರು ತುಂಬಾ ಜನ ಇದ್ದಾರೆ.

ನನ್ನ ಪರಿಚಯದವರೊಬ್ಬರು ಹೇಳಿದ ವಿಷಯ 'ಹೊಟ್ಟೆಯಲ್ಲಿ ಹುಟ್ಟಿದ ಮಗ ಹೆತ್ತವರನ್ನು ಆಶ್ರಮಕ್ಕೆ ಸೇರಿಸಿದ ವಿಷಯ ಗೊತ್ತಾಗಿ, ಅವನ ಸ್ನೇಹಿತ ಹೋಗಿ ಕರೆತಂದು ಆ ವೃದ್ಧರನ್ನು ತನ್ನ ಮನೆಯಲ್ಲಿ ನೋಡಿಕೊಳ್ಳುತ್ತಾ ಇದ್ದಾನಂತೆ. ನಿನ್ನಲ್ಲಿ ಹಣ ಹೆಚ್ಚಾದರೆ ಅದರಲ್ಲಿ ಅನಾಥ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಕರಿಸು, ಹಿರಿಯರನ್ನು ನೋಡಿಕೊಳ್ಳುವುದು ಪುಣ್ಯದ ಕೆಲಸ ಎಂದಿನಂತೆ. ಅಪ್ಪ ಅಮ್ಮ ಇಲ್ಲದವರು ಈ ಲೋಕದಲ್ಲಿ ಎಷ್ಟು ಜನರಿದ್ದಾರೆ ಗೊತ್ತಾ ನಿನಗೆ? ನಾಚಿಕೆಯಾಗುವುದಿಲ್ಲವೇ ನಿನಗೆ? ಮಾನವತೆ ಸತ್ತು ಹೋಗಿದೆಯಾ? ಎಂದು ಹೇಳಿದ್ದಕ್ಕೆ, ವಯಸ್ಸಾದವರು ಮನೆಯಲ್ಲಿ ಕಾಲಿಗೆ ಹಗ್ಗ ಸಿಕ್ಕಿದೆ ಹಾಗೆ ಹೇಳಿದನಂತೆ. ಅಯ್ಯೋ ಎಲ್ಲಿಗೆ ತಲುಪಿತು ನಮ್ಮ ಅವಸ್ಥೆ ನೋಡಿ. ಆ ವೃದ್ಧರಲ್ಲಿ ಈಗ ತಂದೆ ಇಲ್ಲ.ತಾಯಿ ಇದ್ದಾರೆ. ಸ್ನೇಹಿತ ಅತ್ಯಂತ ಕಾಳಜಿಯಿಂದ ತನ್ನ ಹೆತ್ತಮ್ಮನಂತೆ ಸಲಹುತ್ತಿದ್ದಾನೆ. ಸ್ನೇಹ ಅಂದರೆ ಹಾಗೆ ಬೆಲೆ ಕಟ್ಟಲಾಗದ್ದು. ರಾಗ,ದ್ವೇಷ, ಸಿಟ್ಟು, ಸೆಡವು ಎಲ್ಲಾ ಬಿಟ್ಟು ಅಂತರಾಳದಿಂದ ಸ್ನೇಹತ್ವವನ್ನು ಉಳಿಸಿಕೊಳ್ಳೋಣ.

ಸ್ನೇಹದಲ್ಲಿ ಜಾತಿ, ಮತ, ಧರ್ಮ, ಸಿರಿತನ, ಬಡತನ ಅಹಂಕಾರ, ಸಲ್ಲದು. ಸ್ನೇಹದ ಉಸಿರು ಎಲ್ಲೆಡೆ ಪಸರಿಸಲಿ, ಪ್ರೀತಿಯ ಬೆಸುಗೆ ನಳನಳಿಸಲಿ .

-ರತ್ನಾ ಕೆ.ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ