ಬಾಳಿಗೊಂದು ಚಿಂತನೆ - 91

ಬಾಳಿಗೊಂದು ಚಿಂತನೆ - 91

*ಗುಣವದ್ವಸ್ತುಸಂಸರ್ಗಾದ್ಯಾತಿ* *ಸ್ವಲೋಪಿ ಗೌರವಮ್/*

*ಪುಷ್ಪ ಮಾಲಾನುಷಂಗೇಣ ಸೂತ್ರಂ ಶಿರಸಿ ಧಾರ್ಯತೇ//*

ಅಲ್ಪಮತಿಯು ಸಹ ಗುಣವಂತರ ಸಹವಾಸದಿಂದ ಒಳ್ಳೆಯ ವ್ಯಕ್ತಿ ಆಗುವನು. ಅವನನ್ನು ಎಲ್ಲರೂ ಆದರ ಪ್ರೀತಿಯಿಂದ ನೋಡುವರು. ಉತ್ತಮರ ಸಂಸರ್ಗ ಹೊಂದಿದವನಿಗೆ ಯಾವತ್ತೂ ಒಳ್ಳೆಯದೇ ಆಗುವುದು. ಹೇಗೆ ಹೂವಿನೊಂದಿಗೆ ದಾರ(ನಾರು) ಸಹ ದೇವರ ಮುಡಿಗೇರುವುದೋ ಹಾಗೆ.

ನಾವು ಯಾವಾಗಲೂ ಉತ್ತಮರ ಸಂಗವನ್ನೇ ಮಾಡಬೇಕು.‌ ಸಹವಾಸ ದೋಷ, ಸಂಗ ದೋಷ ಎನ್ನುವುದು ಮನುಷ್ಯನನ್ನು ಎಷ್ಟು ಎತ್ತರಕ್ಕೆ ಬೇಕಾದರೂ ಒಯ್ಯಬಹುದು, ಕೆಳಗೆಯೂ ಹಾಕಬಹುದು. ಸಹವಾಸ ದೋಷದಿಂದ ಆ ಹುಡುಗ ಕೆಟ್ಟುಹೋದ, ಆ ಹೆಣ್ಣು ಮಗು ಹಾಳಾದಳು ಹೀಗೆಲ್ಲ ಹೇಳುತ್ತೇವೆ. ಹಾಗಾಗಿ ಸಹವಾಸ ಮಾಡುವಾಗಲೇ ಜಾಗ್ರತೆ ವಹಿಸಬೇಕು. ಬುದ್ಧಿಯಲ್ಲಿ ಭಿನ್ನತೆ ಇರುವುದು ಸಹಜ. ಎಲ್ಲರೂ ಎಲ್ಲಾ ‌ಸಾಮರ್ಥ್ಯ ಹೊಂದಲಾರರು. ಯಾರೂ ಪರಿಪೂರ್ಣರಲ್ಲ. ಒಂದು ವೇಳೆ ತಪ್ಪು ಹಾದಿ ಹಿಡಿಯುತ್ತಾನೆ ಎಂದಾದರೆ ಸರಿದಾರಿಗೆ ತರಲು ಪ್ರಯತ್ನಿಸುವ ಕೆಲಸವಾಗಬೇಕು. ಅದೇ ಆಗುತ್ತಿಲ್ಲ ಈಗ. ನಾವ್ಯಾಕೆ ಅವರ ವಿಷಯದಲ್ಲಿ ಬಾಯಿಹಾಕುವುದು? ಎಂಬ ಧೋರಣೆಯೂ ಇರಬಹುದು. ಆದರೆ ಪ್ರಯತ್ನ ಮಾಡುವುದು ನಮ್ಮ ಒಂದು ಅಳಿಲು ಸೇವೆ ಅಲ್ಲವೇ? ತಿಳುವಳಿಕೆ ನೀಡುವ ಕೆಲಸ ಮಾಡೋಣ. ಅದಕ್ಕೆ ಹಿರಿಯರು ಹೇಳುವ ಒಂದು ಮಾತಿದೆ 'ಸ್ನೇಹ, ಗೆಳೆತನ ಮಾಡುವಾಗ ನೋಡಿ ಮಾಡು ಎಂಬುದಾಗಿ. 'ಸಮಾಜದಲ್ಲಿ, ಪರಿಸರದಲ್ಲಿ ಆದಷ್ಟು ಒಳ್ಳೆಯವರ ಸ್ನೇಹಚಾರ ನಮ್ಮದಾಗಿರಲಿ.

-ಸಂಗ್ರಹ: ರತ್ನಾ ಭಟ್ ತಲಂಜೇರಿ

 (ಶ್ಲೋಕ:ಸುಭಾಷಿತ ಸಂಗ್ರಹ)