ಬಾಳಿಗೊಂದು ಚಿಂತನೆ - 92

ಬಾಳಿಗೊಂದು ಚಿಂತನೆ - 92

*ಕ್ಷಮಯಾ ದಯಯಾ ಪ್ರೇಮ್ಣಾ* *ಸೂನೃತೇನಾರ್ಜುವೇನ ಚ /*

 *ವಶೀಕುರ್ಯಾಜ್ಜಗತ್ ಸರ್ವಂ* *ವಿನಯೇನ ಚ  ಸೇವಯಾ//*

ನಾವು ಈ ಜಗತ್ತನ್ನು ಗೆಲ್ಲಬೇಕಾದರೆ ಹಲವಾರು ದಾರಿಗಳಿವೆ. ಕ್ಷಮೆ, ಕೃಪೆ, ಪ್ರೀತಿ, ಸತ್ಯ, ಸರಳತೆ, ವಿನಯ ಮತ್ತು ಸೇವೆಯಿಂದ ಎಲ್ಲವನ್ನೂ ಗೆಲ್ಲಬಹುದು.

ಕ್ಷಮಾಗುಣವೆನ್ನುವುದು ಅಷ್ಟೂ ಮನಸ್ಸನ್ನು ಪರಿವರ್ತನೆ ಮಾಡುವಂತಹ ಸಾಧನ. ತಿದ್ದಿಕೊಳ್ಳಬಹುದಾದ ತಪ್ಪಿಗೆ ಮಾತ್ರ ಕ್ಷಮೆ ಎಂಬ ಪದ ಸೂಕ್ತ. ಗುರು ಹಿರಿಯರ, ಭಗವಂತನ ಕೃಪೆ ನಮಗೆ ಬೇಕು. ನಾವೇ ದೇವರಾಗುವುದಲ್ಲ. ಎಷ್ಟೋ ಸಲ ತುಂಬಾ ಕಷ್ಟದಲ್ಲಿದ್ದವಗೆ ಸಹಾಯ ಮಾಡಿದಾಗ ಸಮಯಕ್ಕೆ ಸರಿ ದೇವರ ಹಾಗೆ ಬಂದೆ ಅನ್ನಬಹುದು. ಅದು ಅವರ ದೊಡ್ಡ ಗುಣ. ಪ್ರೇರಣೆ ಭಗವಂತನದು. ಪ್ರೀತಿಯಿಂದ ಗೆಲ್ಲಲಾಗದ್ದು ಏನಾದರೂ ಇದೆಯೇ? ಎಷ್ಟೇ ಕೋಪಿಷ್ಠನಾದರೂ ಪ್ರೀತಿಯಿಂದ, ಸಮಾಧಾನದಿಂದ ಅವನ ಹತ್ತಿರ ಕುಳಿತು ಮಾತನಾಡಿಸಿದರೆ ಸರಿಹೋಗಬಹುದು. ಅವನಿಂದ ಹೆಚ್ಚು ನಾವು ಹಾರಿದರೆ ಕೆಲಸ ಕೆಡಬಹುದು. ಸತ್ಯ ಎಂದೂ ಸತ್ಯವೇ. ಒಮ್ಮೆ ಸುಳ್ಳಿಗೆ ಜಯ ಸಿಕ್ಕರೂ, ಕೊನೆಗೆ ಗೆಲ್ಲುವುದು ಸತ್ಯವೇ. ‘ಸುಳ್ಳು ಕ್ಷಣಿಕ, ಸತ್ಯ ಶಾಶ್ವತ’ ಸರಳತೆಯ ಜೀವನ, ವ್ಯವಹಾರ, ನಡವಳಿಕೆ ಮೇರು ವ್ಯಕ್ತಿತ್ವದ ಪ್ರತೀಕ.

‘ವಿನಯವೇ ಭೂಷಣ’ ವಿನಯದ ನಡತೆಯನ್ನು ಎಲ್ಲರೂ ಮೆಚ್ಚುವರು. ಸೇವೆ ಯಾವ ರೂಪದಲ್ಲಿಯೂ ಇರಬಹುದು. ಅದು ಅವರವರ ಕೈ, ಸಂಪತ್ತು, ಮನೋಧರ್ಮವನ್ನು ಬಿಂಬಿಸುತ್ತದೆ.ಮನೆಯ ಹಿರಿಯರ, ಕಿರಿಯರ, ಕೈಲಾಗದವರ, ಬಡವರ, ದೀನರ, ಆರ್ಥಿಕವಾಗಿ ಕಷ್ಟದಲ್ಲಿರುವವರ ಹೀಗೆ ಹಲವಾರು ವಿಧದ ಸೇವೆ ಇರಬಹುದು. ಎಲ್ಲದಕ್ಕೂ ಕೋಪಿಸುತ್ತಾ ಹೋದರೆ ಬದುಕು ನಿಸ್ಸಾರ, ಸತ್ವಹೀನವಾಗಬಹುದು. ಇತರರಿಗೆ ಸಹಾಯ ಮಾಡುತ್ತ ಬಾಳುವುದರಲ್ಲಿ ಸಣ್ಣಪುಟ್ಟ ಸಂತೋಷ, ತೃಪ್ತಿ ಸಹ ಸಿಗುತ್ತದೆ. ಕೆಲವೊಂದು ತಪ್ಪುಗಳಲ್ಲಿ ಸಕಾರಣ ಇರಲೂ ಬಹುದು. ತಪ್ಪೆಸಗಲು ಕಾರಣವೇನು ಎಂದು ಚಿಂತನ ಮಾಡಿ ತಿಳಿದು ವ್ಯವಹರಿಸಿದಾಗ, ಅಲ್ಲಿ ಕ್ಷಮೆ ಕೆಲಸಕ್ಕೆ ಬರುತ್ತದೆ. ‘ನಮಗೆ ಇರಲು ಜಾಗ, ಹಸಿವನ್ನು ನೀಗಿಸುವ, ನಮ್ಮೆಲ್ಲ ಅಪಚಾರಗಳನ್ನೂ ಸಹಿಸುವ ಭೂಮಿತಾಯಿ ನಮ್ಮನ್ನು ಕ್ಷಮಿಸುತ್ತಿದ್ದಾಳೆ ಅಂದರೆ ಅದರಿಂದ ದೊಡ್ಡ ಕ್ಷಮೆ ಬೇರೆ ಅಗತ್ಯವಿದೆಯೇ?’ ನಮ್ಮ ಹೆತ್ತವರು ನಾವು ಎಸಗುವ ಎಷ್ಟೋ ತಪ್ಪುಗಳನ್ನು, ಅವಮಾನಗಳನ್ನು, ನಿಂದನೆಗಳನ್ನು ಮೌನವಾಗಿ ಸಹಿಸಿ ಕ್ಷಮಿಸುತ್ತಾರೆ. ಅವರ ಮನದೊಳಗಿನ ನೋವಿನ ಅರಿವು ಸಹ ನಮಗಿರುವುದಿಲ್ಲ. ಹಾಗಾಗಿ ಇತರರಿಗೆ ನೋವು ಕೊಡದಿರೋಣ. ಎಲ್ಲಾ ಸಾಧ್ಯವಾದಷ್ಟು ಒಳ್ಳೆಯ ಗುಣಗಳನ್ನು ಮೈಗೂಡಿಸಿಕೊಂಡು ಇರುವ ಮೂರು ದಿನದ ಬಾಳ್ವೆಯನ್ನು ಹಸನಾಗಿಸೋಣ. 

(ಶ್ಲೋಕ : ಸುಭಾಷಿತ ಸಂಗ್ರಹ)

-ರತ್ನಾ.ಕೆ.ಭಟ್ ತಲಂಜೇರಿ 

ಚಿತ್ರ ಕೃಪೆ: ಇಂಟರ್ನೆಟ್ ತಾಣ