ಬಾಳಿಗೊಂದು ಚಿಂತನೆ - 93

*ಸ ಸುಹೃದ್ ವ್ಯಸನೇ ಯಃ ಸ್ಯಾದ್*
*ಅನ್ಯಜಾತ್ಯುದ್ಭವೋಪಿ ಸನ್/*
*ವೃದ್ಧೌ ಸರ್ವೋಪಿ ಮಿತ್ರಂ ಸ್ಯಾತ್*
*ಸರ್ವೇಷಾಮೇವ ದೇಹಿನಾಮ್//*
ನಾವು ತುಂಬಾ ಕಷ್ಟದಲ್ಲಿರುವ ಸಮಯದಲ್ಲಿ ಯಾರು ಸಹಕಾರ ಮಾಡುವರೋ ಅವರೇ ನಿಜವಾದ ಮನುಷ್ಯ ಜಾತಿಯವರು. ಮಾನವತೆಯ ಅಂಶವನ್ನು ಇನ್ನೂ ಉಳಿಸಿಕೊಂಡವರು. ಯಾವ ಜಾತಿಯಲ್ಲಿ ಹುಟ್ಟಿದರೂ, ಸಂಕಷ್ಟಗಳು ಇರುವಾಗ ಜೊತೆಗೆ ಬರುವವನೇ ನಿಜವಾದ ಮಿತ್ರ. ಒಳ್ಳೆಯದಾಗಿರುವಾಗ, ಒಳ್ಳೆಯ ಸ್ಥಿತಿಯಲ್ಲಿರುವಾಗ ಎಲ್ಲರಿಗೂ ಎಲ್ಲರೂ ಮಿತ್ರರೇ. ಕಷ್ಟ ಬಂದಾಗ ನಿಜವಾದ ಸ್ನೇಹಿತರು ಯಾರು ಎಂದು ಗೊತ್ತಾಗುವುದು.
ನಮ್ಮ ಹತ್ತಿರ ಬೇಕಾದಷ್ಟು ಸಂಪತ್ತು ಇದೆ ಎಂದಾದರೆ, ನಮ್ಮ ಬಗ್ಗೆ ಆಸಕ್ತಿ, ಅಭಿಮಾನ ಎಲ್ಲಾ ತೋರಿಸುವವರು ತುಂಬಾ ಜನ ಇದ್ದಾರೆ. ಅದೇ ಕಷ್ಟ ಆದಾಗ ದೂರ ಹೋಗುವರು. ಆಗ ಸಹ ನಮ್ಮ ತ್ಯಜಿಸದೇ ಇರುವವರು, ಜಾತಿ, ಮತ, ಕುಲ, ಹೆಣ್ಣು, ಗಂಡು, ದೇಶ, ಭಾಷೆ ಯಾವುದೂ ನೋಡದೇ ಇರುವವರು ನಿಜವಾದ ಗೆಳೆಯರು, ಸ್ನೇಹಿತರು. ನಮಗೆ ತೋರಿಕೆಯ ಗೋಸುಂಬೆಯ ಹಾಗೆ ಬಣ್ಣ ಬದಲಾಯಿಸುವವರು ಬೇಡ. ಅವರುಗಳು ಅಪಾಯಕಾರಿಗಳು. ಕಷ್ಟ ಸುಖ ಎರಡರಲ್ಲೂ ಪಾಲ್ಗೊಳ್ಳುವವರನ್ನೇ ಆಯ್ಕೆ ಮಾಡೋಣ. ಮೊದಲು ಮಾನವರಾಗೋಣ, ಉಳಿದದ್ದೆಲ್ಲಾ ಮತ್ತೆ.
-ಪಂಚತಂತ್ರ ಸಂಗ್ರಹ: ರತ್ನಾ ಕೆ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ