ಬಾಳಿಗೊಂದು ಚಿಂತನೆ - 96

ಬಾಳಿಗೊಂದು ಚಿಂತನೆ - 96

ನಾವು ಎಷ್ಟೋ ವಿಷಯಗಳನ್ನು ಓದಿರಬಹುದು. ಯಾರಿಂದಲೋ ಕೇಳಿ ತಿಳಿದಿರಬಹುದು. ಆದರೆ ಅನುಭವ, ಜ್ಞಾನದ ತಿಳುವಳಿಕೆ ನಮ್ಮನ್ನು ಇನ್ನೂ ಗಟ್ಟಿಗೊಳಿಸುತ್ತದೆ. ಹಾಲು, ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪ ನಾವೆಲ್ಲರೂ ಉಂಡವರೇ ಆಗಿದ್ದೇವೆ. ಸುಮ್ಮನೆ ಕುಳಿತರೆ ಇದನ್ನೆಲ್ಲ ಪಡೆಯಲಾಗದು. ಹಸುಗಳನ್ನು ಸಾಕಿ ಸಲಹಿದರೆ ಹಾಲು ದೊರೆಯಬಹುದು. ಎಲ್ಲವನ್ನೂ ಉಣ್ಣಬಹುದು.ಇಲ್ಲವಾದಲ್ಲಿ ಸಾಕಷ್ಟು ಆರ್ಥಿಕ ಸ್ಥಿತಿಗತಿ ಬೇಕು, ಹೊರಗಿನಿಂದ ಖರೀದಿಸಿ ಸೇವಿಸಲು. ಎರಡೂ ಇಲ್ಲದವರು ಬೇಕು ಅಂದರೆ ಹೇಗೆ? ಮೊಸರನ್ನು ಕಡೆದರೆ (ಮಥಿಸಿದರೆ) ಮಾತ್ರ ಬೆಣ್ಣೆ ಸಿಗಬಹುದು. ಹಾಗೆಯೇ ನಮ್ಮ ಮಸ್ತಿಷ್ಕವನ್ನು ಉತ್ತಮ ವಿಚಾರಗಳಿಂದ ಮಥಿಸಿ ಜ್ಞಾನವನ್ನು ಹೆಚ್ಚಿಸಿಕೊಳ್ಳೋಣ. ಒಳ್ಳೆಯ ಪುಸ್ತಕಗಳು ಜ್ಞಾನದ ಆಗರಗಳು. ಹಿರಿಯರ ನುಡಿಗಳು ಬದುಕಿಗೆ ದಾರಿದೀಪಗಳು. 

ಭಗವದ್ಗೀತೆ, ರಾಮಾಯಣ, ಮಹಾಭಾರತ, ವೇದಗಳು, ಉಪನಿಷತ್ತುಗಳು, ಮೌಲ್ಯಭರಿತ ಕಥೆಗಳು, ವೈಚಾರಿಕ ಬರಹಗಳು ಇವೆಲ್ಲವೂ ಚಿಕ್ಕಂದಿನಿಂದಲೇ ಓದುವ ಹವ್ಯಾಸ ನಮ್ಮ ಬದುಕಲ್ಲಿ ತಿರುವು ಮೂಡಿಸಲು ಸಹಕಾರಿ. ಅಂತರಂಗದ ಕದ ತೆರೆದಾಗ ಮಾತ್ರ ನಾವು ಮನುಷ್ಯರಾಗಲು ಸಾಧ್ಯ. ನಮ್ಮಲ್ಲಿ ಸದಾಚಾರ, ದೈವಭಕ್ತಿ, ದೈವೀ ಚಿಂತನೆ, ವಿನಯಾದಿ ಸದ್ಗುಣಂಗಳು, ದಾನ ಗುಣ, ದೇಶಭಕ್ತಿ ಇವೆಲ್ಲ ಇದ್ದರೆ ನಮಗೂ ಒಳಿತು, ನಮ್ಮ ಸುತ್ತಮುತ್ತಲಿನವರಿಗೂ ಒಳಿತು. ಇದಿಲ್ಲದವ ಕೊಬ್ಬಿದ ಗೂಳಿಯಾಗಿ ಹಾಯಲು ನೋಡಿ, ಮಾನಸಿಕ ನೆಮ್ಮದಿ ಕೆಡಿಸಿಯಾನು.

*ಹಾಲು ಕಾಯಿಸಿ ಹೆಪ್ಪನಿಕ್ಕಿ ಕಡೆದೊಡೆ,ಮೊದಲು*

*ಮೇಲೆ ಕಾಣದ ಬೆಣ್ಣೆ ತೇಲಿ ಬರುವಂತೆ//*

*ಬಾಳನೀ ಜಗದ ಮಂತುವು ಕಡೆಯಲೇಳುವುದು/*

*ಆಳದಿಂದಾತ್ಮಮತಿ---ಮಂಕುತಿಮ್ಮ*//

 

(ಆಕರ:ಮಂಕುತಿಮ್ಮನ ಕಗ್ಗ)

ಸಂಗ್ರಹ: ರತ್ನಾ ಭಟ್ ತಲಂಜೇರಿ 

ಚಿತ್ರ ಕೃಪೆ: ಇಂಟರ್ನೆಟ್ ತಾಣ