ಬಾಳಿಗೊಂದು ಚಿಂತನೆ

ಬಾಳಿಗೊಂದು ಚಿಂತನೆ

ನಾವು ಈ ಭೂಮಿ ಮೇಲೆ ಜನ್ಮವೆತ್ತಬೇಕಾದರೆ ಏನೋ ಒಂದು ಕಾರಣವಿದೆ. ಮನುಷ್ಯ ಜನ್ಮ ಅತ್ಯಂತ ಶ್ರೇಷ್ಠವಾದ್ದು, ವೇದ, ಪುರಾಣ, ಇತಿಹಾಸಗಳಲ್ಲಿ ನಾವು ಓದಿದ ವಿಷಯ. ಹೇಗೆ ಋಷಿಮುನಿಗಳು ಸಾವಿರಾರು ವರುಷ ತಪಸ್ಸು ಮಾಡಿ ಪುಣ್ಯ ಸಂಪಾದನೆ, ಮೋಕ್ಷ ಸಾಧನೆಯ ಗುರಿಯನ್ನು ತಲುಪುತ್ತಾರೋ ಹಾಗೆ ನಮಗೆ ದಕ್ಕಿದೆ ಈ ಜನ್ಮ. ನಾವು ಮಾತ್ರ ಬೆಳೆದು ದೊಡ್ಡವರಾದಂತೆ ನಾನು, ನನ್ನದು, ಎಲ್ಲಾ ನನಗೇ ಇರುವುದು, ಅವ ನನಗೇನೂ ಅಲ್ಲ ಎಂಬ ಭಾವನೆಗಳನ್ನು ಮೈಗೂಡಿಸಿಕೊಂಡು ಕಣ್ಣಿದ್ದೂ ಕುರುಡರಾಗುತ್ತೇವೆ.

ನಾನು ದೇವರ ಮಗು, ನಾನು ದೇವರವನು ಎಂದರೆ ಭಯವಿಲ್ಲ. ಆದರೆ ಎಡೆಯಲ್ಲಿ ದೇವರೇ ನನ್ನವನು ಎಂದರೆ ಹೇಗಾದೀತು? ಕೃಷ್ಣನನ್ನು ಎಲ್ಲಾ ಯಾದವ ಸಮೂಹದವರು ಅಹಂಕಾರದಿಂದಲೇ ನೋಡಿ, ಇವ ನಮ್ಮವನೇ ಅಂದುಕೊಂಡು ತಾತ್ಸಾರ ಧೋರಣೆ ತಳೆದರು. ಕಡೆಗೆ ಏನಾಯಿತು, ಎಲ್ಲರ ಸರ್ವನಾಶವಾಯಿತು. ಅದೇ ಗೋಪಿಕೆಯರು ಕೃಷ್ಣನಿಗೆ ತಮ್ಮನ್ನು ತಾವೇ ಸಮರ್ಪಿಸಿಕೊಂಡರು, ಭಕ್ತಿಭಾವದಲ್ಲಿ ತೇಲಾಡಿದರು. ಅವರಿಗೆಲ್ಲ ಭಗವಂತ ಒಲಿದು ಬಂದ. ಎಲ್ಲಿ ನಾನು ನಿನ್ನವನು ಎಂಬುದಿದೆಯೋ ಅಲ್ಲಿ ಆ ದೇವನ ಆಶೀರ್ವಾದ ಖಂಡಿತಾ ಇದೆ. ನಮ್ಮ ಬೆನ್ನ ಹಿಂದೆಯೇ ಆತ ನಿಂತು ಬೇಕಾದ ಹಾಗೆ ಬೇಕಾದ್ದನ್ನು ಮಾಡಿಸುತ್ತಾನೆ ಅಥವಾ ಪ್ರೇರೇಪಣೆ ನೀಡುತ್ತಾನೆ.

ಭಗವಂತನ ಬಳಿ ತಮೋಗುಣಗಳೆಂಬುದಿಲ್ಲ. ಉಂಗುಷ್ಟದಿಂದ ನೆತ್ತಿಯವರಗೆ ತಮೋಗುಣಗಳನ್ನು ಬೆಳೆಸಿಕೊಂಡವಗೆ ದೈವ ದೇವರ ಸಾಕ್ಷಾತ್ಕಾರವಾದರೂ ಎಲ್ಲಿಯದು? ಏಕಾಗ್ರತೆ, ತಪಸ್ಸಿನ ಆಚೆ ನೋಡಿದರೆ ಮಾತ್ರ ದೇವನೊಲಿವ. ತಪಸ್ಸಿನ ಸಾಧನೆ ನಮ್ಮಿಂದಾಗಬೇಕು. ನಮ್ಮ ಆಸೆಗಳ ಮಿತಿಯಲ್ಲಿದ್ದು, ಬೇಕಾದ್ದನ್ನು ಮಾತ್ರ ಸಂಪಾದಿಸಿ, ಎಲ್ಲಾ ದೇವನಿಚ್ಛೆಯಂತೆ ಎಂದು ನಂಬಿಕೆ ಇಟ್ಟಾಗ, ಭಗವಂತ ಸಹ ಬೆನ್ನು ತಟ್ಟಿಯಾನು. ಆದಕಾರಣ ಅಹಂಕಾರ ಬಿಟ್ಟು, ನಾನು ಎಂಬುದ ಮರೆತು, ನಾವು, ನಾವೆಲ್ಲರೂ ಒಂದೇ ಎಂಬುದ ನಮ್ಮ ಬದುಕಿನಲ್ಲಿ ಅಳವಡಿಸಿ ಕೊಂಡು, ಇರುವಷ್ಟು ದಿನ ನೆಮ್ಮದಿಯಲ್ಲಿ ಜೀವಿಸೋಣ.

-ರತ್ನಾ ಭಟ್, ತಲಂಜೇರಿ (ಆಧಾರ:ಸೂಕ್ತಿ ಸೌರಭ)

ರೇಖಾ ಚಿತ್ರ: ಶ್ರೇಯಸ್ ಜಿ. ಕಾಮತ್, ಬೆಂಗಳೂರು