ಬಾಳಿಗೊಂದು ಚಿಂತನ - 2

ಬಾಳಿಗೊಂದು ಚಿಂತನ - 2

ಸತ್ಯ, ನ್ಯಾಯ, ತ್ಯಾಗ, ಅಹಿಂಸೆ, ಸಹಕಾರ, ಮಾನವತೆ, ಆರ್ದ್ರತೆ ಇವೆಲ್ಲವುಗಳು ಮಾನವೀಯ ಮೌಲ್ಯಗಳ ಬೇರುಗಳು.ಒಂದು ತುಂಡಾದರೂ ಬದುಕು ದುರ್ಬಲ. ಬಹಳಷ್ಟು ಮಂದಿ ಆಸೆಗೆ ಬಲಿಬಿದ್ದು ಎಲ್ಲವನ್ನೂ ಕಳಕೊಂಡು ಬೀದಿಗೆ ಬೀಳುವುದು ನಾವು ಕಂಡಿದ್ದೇವೆ. ಆಸೆಯೇ ಇಲ್ಲದಿದ್ದರೆ ಆರಾಮ ಅಲ್ಲವೇ? ಒಳ್ಳೆಯ ಕೆಲಸಕ್ಕೆ ಹಣ ಬೇಕಾದರೆ ನೂರೆಂಟು ಸಬೂಬು, ಆಕ್ಷೇಪಣೆಯನ್ನು ಹೇಳುವುದಿದೆ.ತ್ಯಾಗಕ್ಕಿಂತ ಶ್ರೇಷ್ಠವಾದ ಯೋಗವಿಲ್ಲ. ಭೋಗ ಒಂದು ರೋಗವಿದ್ದಂತೆ. ಅದೇ ತ್ಯಾಗದಿಂದ ಇಂದಲ್ಲದಿದ್ದರೆ ನಾಳೆಯಾದರೂ ಫಲ ಸಿಗಬಹುದು.

ಇನ್ನೊಬ್ಬರನ್ನು ನೋಯಿಸಿದರೆ ನಮಗೇನು ಸಿಗುತ್ತದೆ? ಅದರಲ್ಲಿಯೂ ಸಂತೋಷ ಪಡುವವರನ್ನು ವಿಘ್ನ ಸಂತೋಷಿಗಳು ಎನ್ನುತ್ತೇವೆ. ಬೇರೆಯವರಿಗೆ ಸಾಧ್ಯವಾದರೆ ಸಹಕರಿಸೋಣ, ದುಃಖ ಕೊಡುವ ಅಧಿಕಾರ ನಮಗೆ ಕೊಟ್ಟವರಾರು ಅಲ್ಲವೇ?

'ಅಹಿಂಸಾಃ ಪರಮೋಧರ್ಮ', ಈ ಮಾತು ಅಕ್ಷರಶಃ ನಿಜ. ರಾಷ್ಟ್ರಪಿತ ಗಾಂಧೀಜಿಯವರು ಪ್ರತಿಪಾದಿಸಿದ್ದು ಇದನ್ನೇ. ಅವರ ನೋವನ್ನು ನಮ್ಮ ನೋವೆಂದು ಕಂಡು ಸ್ಪಂದಿಸೋಣ, ಯಾರಿಗೂ ಹಿಂಸೆ ನೀಡಬೇಡಿ, ಎಲ್ಲರೂ ದೇವರ ಮಕ್ಕಳು, ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆ ತೋರಿಸಿ, ಇದೆಲ್ಲವನ್ನೂ ನಾವು ಪಠ್ಯದಲ್ಲಿ ಓದಿದವರು. 

ಸರ್ವ ಸಂಪತ್ತನ್ನು ತ್ಯಾಗ ಮಾಡಿ, ಅರಣ್ಯಕ್ಕೆ ಹೋಗಿ ತಪಸ್ಸು ಮಾಡೆಂದು ಎಲ್ಲಿಯೂ ಹೇಳಿಲ್ಲ, ಇದ್ದದ್ದನ್ನು ಹಂಚಿ ಉಣ್ಣಿರಿ ಇಷ್ಟೇ ಹೇಳುವದು. ವೇದಾಂತವು ಸಂಸಾರಸಾರವನ್ನು ಹೇಳುತ್ತದೆ. ನಾವು ಅದನ್ನು ಅರ್ಥೈಸಿ, ಅಳವಡಿಸಿಕೊಳ್ಳುವುದರಲ್ಲಿರುವುದು. ತ್ಯಾಗದಿಂದ ಬದುಕು ಸಾರ್ಥಕ ಖಂಡಿತಾ.

ನ್ಯಾಯ ಮಾರ್ಗದಲ್ಲಿ ನಡೆಯಿರಿ ನಮ್ಮ ಹಿರಿಯರು ಹಾಕಿಕೊಟ್ಟ ಬುನಾದಿ, ನಾವು ಸ್ವಲ್ಪ ಓರೆಕೋರೆಯಾಗಿ ನಡೆದು ಹಾಳು ಮಾಡಿಕೊಂಡು, ನಮ್ಮ ತಲೆಮೇಲೆ ನಾವೇ ಚಪ್ಪಡಿಕಲ್ಲು ಹಾಕಿಕೊಳ್ಳುತ್ತೇವೆ. ನ್ಯಾಯ-ಅನ್ಯಾಯ,ಒಂದೇ ನಾಣ್ಯದ ಎರಡು ಮುಖಗಳು, ಆದರೂ ಅಜಗಜಾಂತರ ವ್ಯತ್ಯಾಸ. ಆದಷ್ಟೂ ನ್ಯಾಯವಂತರಾಗಿರೋಣ.

ನಾವು ಸಾಯುವಾಗ ಏನಾದರೂ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ. ಆದರೆ ಒಳ್ಳೆಯ ಗುಣಗಳನ್ನು, ಆದರ್ಶಗಳನ್ನು ಭೂಮಿ ಮೇಲೆ ಬಿಟ್ಟು ಹೋಗಲು ಸಾಧ್ಯವಿದೆ.ಜೀವನದಲ್ಲಿ ಅಳವಡಿಸಿಕೊಳ್ಳುವುದು ಯಾವುದು, ವರ್ಜಿಸಬೇಕಾದ್ದು ಯಾವುದು ಅಷ್ಟಿದ್ದರೆ ನಮ್ಮ ಬದುಕು ಸಾರ್ಥಕ.ವಿವೇಕ, ಜ್ಞಾನ, ನಮ್ಮಲ್ಲಿರುವವರೆಗೆ, ನಮ್ಮನ್ನು ಯಾರಿಗೂ ಮುಟ್ಟಲೂ ಸಹ ಸಾಧ್ಯವಿಲ್ಲ.

ಹೂವಿನ ದಳಗಳು ಇಂದು ಅರಳಿ ಸುವಾಸನೆ ಬೀರಿ ಹೇಗೆ ಎಲ್ಲರನ್ನೂ ಆಕರ್ಷಿಸುತ್ತದೋ, ನಾಳೆ ಬಿದ್ದು ಹೋಗುತ್ತದೋ ಹಾಗಿರೋಣ ಸ್ನೇಹಿತರೇ.

'ತ್ಯಾಗೇನೈಕೇ ಅಮೃತತ್ವ ಮಾನಷುಃ ಈ ಮಾತನ್ನು ನಾವು ವೇದಗಳಲ್ಲಿ ಕಾಣಬಹುದು.

ತ್ಯಾಗ, ಸಹಕಾರ, ಹಂಚುವಿಕೆ, ಇನ್ನೊಬ್ಬರ ನೋವುಗಳಿಗೆ ಸ್ಪಂದಿಸುವ ಗುಣ ಈ ಎಲ್ಲಾ ಆಭರಣಗಳಿಂದ ಎಂದೆಂದೂ ಶೋಭಿಸೋಣ.

ಮಹಾತ್ಮಾ ಗಾಂಧಿ ಹಾಗೂ ಭಾರತ ಮಾತೆಯ ಹೆಮ್ಮೆಯ ಸುಪುತ್ರ ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಜನ್ಮದಿನವಾದ ಇವತ್ತು (ಅಕ್ಟೋಬರ್ 2) ನಾವು ಅವರ ಹಿತನುಡಿಗಳನ್ನು ಬಾಳಿನಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನ ಮಾಡೋಣ.

-ರತ್ನಾ ಭಟ್ ತಲಂಜೇರಿ