ಬಾಳಿಗೊಂದು ನುಡಿ - 86

ಬಾಳಿಗೊಂದು ನುಡಿ - 86

‘ದಳ್ಳುರಿ’ ಎನ್ನುವ ಪದ ಹೇಳಲು ಸುಲಭ. ಅದರ ಒಳಾರ್ಥ ಬಹಳ ನಿಗೂಢ. ಓರ್ವ ಮನುಷ್ಯ ದಳ್ಳುರಿಯ ಜ್ವಾಲೆಗೆ ಒಮ್ಮೆ ಸಿಲುಕಿದ ಎಂದಾದರೆ, ಅದರಿಂದ ಹೊರಬರಲಾಗದೆ ಒದ್ದಾಡಿ ಒದ್ದಾಡಿ ಒಂದು ದಿನ ದಹಿಸಿಯಾನು. ದೇಹದೊಳಗಿನ ಉರಿ ಆ ಮಟ್ಟದ್ದು. ಮನಸಿನೊಳಗೆ ಯಾವುದನ್ನೂ ಗೂಡುಕಟ್ಟಿ ಇಟ್ಟುಕೊಳ್ಳಬಾರದು. ಎದೆ ಗೂಡಿನೊಳಗಿನ ಸಂಗ್ರಹ ಆತನ ಅವನತಿಗೆ ಕಾರಣವಾಗಬಹುದು. ನಾಲ್ಕು ಜನ ಮೆಚ್ಚುವಂತಿದ್ದರೆ ಚಂದವಲ್ಲವೇ? ಜೀವನದಲ್ಲಿ ಕಷ್ಟವೆಂಬ ದಳ್ಳುರಿ ಬರುವುದು ಸಹಜ. ಅದನ್ನು ನಿವಾರಿಸಿಕೊಂಡು ಮುಂದೆ ಹೋಗುವ ಚಾಕಚಕ್ಯತೆ ನಮ್ಮಲ್ಲಿರಬೇಕು. ಇದಕ್ಕಾಗಿ ವಾಮಮಾರ್ಗದ ಸಂಪಾದನೆಗಿಳಿಯುವುದು ಸರಿಯಲ್ಲ. ನೈತಿಕ ಮೌಲ್ಯಗಳ ಮಾರಿಕೊಂಡು, ಉತ್ತಮ ನಡತೆಗಳ ಗಾಳಿಗೆ ತೂರಿದವ ಒಮ್ಮೆ ವಿಜ್ರಂಭಿಸಬಹುದು. ನಂತರ ನೆಲಕಚ್ಚಿಯಾನು. ಆಗ ಮನುಷ್ಯರು ಬಿಡಿ, ಆ ದೇವರು ಸಹ ‘ಅಯ್ಯೋ ಪಾಪ’ ಹೇಳಲು ಬರಲಾರನು. ಹಾಗಾಗಿ ಉರಿ ಎಂಬ ಪದವೇ ನಮಗೆ ಬೇಡ. ಸತ್ಯವನ್ನು ಎತ್ತಿ ಹಿಡಿಯೋಣ. ದೇಹ ದಹಿಸುವ ಯಾವುದೇ ಅವಗುಣಗಳಿಗೆ ಮಣೆ ಹಾಕದೆ ಇರುವಷ್ಟು ದಿನ ನೆಮ್ಮದಿಯಲ್ಲಿರೋಣ.

-ರತ್ನಾ ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ