ಬಾಳಿಗೊಂದು ನುಡಿ

ಬಾಳಿಗೊಂದು ನುಡಿ

ಗುರಿ ಬೇಕು ನಡೆಯಲ್ಲಿ

ಗುರಿ ಬೇಕು ನುಡಿಯಲ್ಲಿ

ಛಲ ಬೇಕು ಸಾಧನೆಯ ವಿಜ್ಞಾನ ಯುಗದಲ್ಲಿ//

ಈ ಮೂರು ಸಾಲುಗಳನ್ನು ವಾಮನನ ಮೂರು ಹೆಜ್ಜೆಗಳಿಗೆ ಹೋಲಿಸಬಹುದು. ಲೋಕಾನುಭವವೇ ಅಡಗಿದ ಸಾಲುಗಳಿವು. ನಮ್ಮ ಯಾವುದೇ ನಡೆಗೆ ಒಂದು ಗುರಿ ಬೇಕೇ ಬೇಕು, ಮನೆಯಿಂದ ಹೊರಗೆ ಯಾಕೆ ಹೋಗುತ್ತೇವೆ ಎಂಬುದು, ಮೊದಲೇ ಯೋಚಿಸಿ ಹೋದರೆ ಹೋದ ಕೆಲಸ ಸಾಧಿಸಬಹುದು. ಗೊತ್ತಿಲ್ಲದೆ ಹೊರಟರೆ, ಅಂಬಿಗನಿಲ್ಲದ ದೋಣಿಯಂತಾದೀತು.

ನಮ್ಮ ಬದುಕಿನ ಪ್ರತೀ ಹೆಜ್ಜೆಗಳಲ್ಲೂ ಒಂದು ಗುರಿ, ಒಂದು ದೃಷ್ಟಿ ಇರಲೇಬೇಕು. ಇಲ್ಲದಿದ್ದರೆ ಗಾಳಿಗೆ ಸಿಲುಕಿರುವ ತರಗೆಲೆಗಳಾಗಿ ಹಾರಿ ಹೋಗಬಹುದು. ನಾನೇನು ಮಾಡಬೇಕು? ಏನು ಹೇಗೆ ಯಾವ ದಾರಿಯಲ್ಲಿ ಹೋದರೆ ಒಳ್ಳೆಯದಾಗಬಹುದು ಈ ಎರಡೂ ಕಲ್ಪನೆಗಳ ದಾರಿಗಳೂ ಸ್ಪಷ್ಟವಾಗಿರುವವ ಮಾತ್ರ ಬದುಕಿನ ಮಜಲುಗಳಲ್ಲಿ ಯಶಸ್ವಿಯಾಗುತ್ತಾನೆ.

ನಮ್ಮ ನುಡಿ, ನಾವಾಡುವ ಮಾತು ಸ್ಪಷ್ಟವಾಗಿರಬೇಕು. ಸುಳ್ಳನ್ನೇ ತಮ್ಮ ಬಂಡವಾಳ ಮಾಡಿಕೊಂಡವರ ಬದುಕು ಮೂರಾಬಟ್ಟೆಯಾಗುವುದು ನಿಶ್ಚಿತ. ಮಾತಿನಲ್ಲಿ ಹಿಡಿತವಿದ್ದವ, ಎಲ್ಲರನ್ನೂ ಆಕರ್ಷಿಸಬಲ್ಲ. ಜೀವನದಲ್ಲಿ ಎಂದೂ ಸೋಲಲಾರ. ಮಾತು ತೂಕ ತಪ್ಪದಿರಲಿ. ಮಾತಿನ ಮೇಲೆ ನಿಗಾ ಇರಲಿ. ಮಾತೇ ಆಭರಣವೆನ್ನುವುದು ನೆನಪಿನಲಿರಲಿ. ಆದ ಕಾರಣ ಚೆನ್ನಾಗಿ ಆಲೋಚಿಸಿಯೇ ಮಾತನಾಡೋಣ. ಎಷ್ಟೋ ಜನ ಹಿಂದಿನಿಂದ ಹೇಳುವುದು ಕೇಳಿದ್ದೇವೆ 'ಆ ಮನುಷ್ಯ ಒಬ್ಬ ಅಸಾಮಿಯೇ ಸರಿ, ಎಲುಬಿಲ್ಲದ ನಾಲಿಗೆ ಅವನದು, ಎಂತ ಮಾತಾಡ್ತಾನೆ ಅಂತ ಅವನಿಗೆ ಗೊತ್ತಿಲ್ಲ, ಆ ದೇವರಿಗೂ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಈ ನಗೆಪಾಟಲಿಗೆ ಈಡಾಗುವುದು ಬೇಡ. ತೂಕದ ಮಾತುಗಳನ್ನು ಆಡೋಣ. ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು ನಾಣ್ನುಡಿಗೆ ನಮ್ಮ ಮಾತು ಕಾರಣವಾಗುವುದು ಬೇಡ.

ವಿಜ್ಞಾನದ ಎಲ್ಲಾ ಸಿದ್ಧಿಗಳೂ ಸಾಧನೆಯ ಫಲವಲ್ಲವೇ? ಕಠಿಣ ಪರಿಶ್ರಮ, ಏಕಾಗ್ರತೆ, ಪ್ರಾಮಾಣಿಕತೆಯ ಪ್ರತಿಫಲವೇ ವಿಜ್ಞಾನ ವಿಸ್ಮಯ. ಪ್ರಯತ್ನದಿಂದಲೇ ಫಲ ಪಡೆಯೋಣ. ನಾವೆಲ್ಲರೂ ಸತತ ಪರಿಶ್ರಮ, ಒಳ್ಳೆಯ ನಡೆನುಡಿ, ಮುಂದಿನ ಕೆಲಸಕಾರ್ಯಗಳತ್ತ ನಮ್ಮ ಗುರಿಯನ್ನು ಹರಿಸುತ್ತಾ ಜೀವನ ಸಾಗಿಸೋಣ ಸ್ನೇಹಿತರೇ ಆಗದೇ?

ಮುಂದೆ ಗುರಿ ಇರಲಿ, ನಮ್ಮ ಹಿಂದೆ ಮಾರ್ಗದರ್ಶನ ನೀಡಬಲ್ಲ ಓರ್ವ ಗುರುವಿರಲಿ.

-ರತ್ನಾ ಭಟ್ ತಲಂಜೇರಿ