ಬಾಳುಕುನ ಪುರಾಣ

ಬಾಳುಕುನ ಪುರಾಣ

ಪುಸ್ತಕದ ಲೇಖಕ/ಕವಿಯ ಹೆಸರು
ಡಾ. ಪ್ರಕಾಶ ಗ.ಖಾಡೆ
ಪ್ರಕಾಶಕರು
ಅನಿಕೇತನ ಪ್ರಕಾಶನ, ನವನಗರ, ಬಾಗಲಕೋಟೆ
ಪುಸ್ತಕದ ಬೆಲೆ
ರೂ. ೧೨೦.೦೦, ಮುದ್ರಣ: ೨೦೨೩

ಡಾ. ಪ್ರಕಾಶ ಗ ಖಾಡೆ ಇವರ ನೂತನ ಕಥಾ ಸಂಕಲನ ‘ಬಾಳುಕುನ ಪುರಾಣ'. ತಮ್ಮ ಕಥಾ ಸಂಕಲನದ ಕುರಿತಾಗಿ, ತಮ್ಮ ಕಥೆಗಳ ಬಗ್ಗೆ ಲೇಖಕರು ತಮ್ಮ ಮಾತಿನಲ್ಲಿ ಹೇಳುವುದು ಹೀಗೆ...

“ಕಾರಣಗಳಿಲ್ಲದೇ ಕಥೆ ಹುಟ್ಟಿತೇ? ಕಥೆಗಳಿಗಿರುವ ಮೋಹಕತೆ ಎಂಥದು? ಕಥೆ ಕಟ್ಟುವ ಕುಶಲತೆಯೂ ಕಲ್ಲಲ್ಲಿ ಒಂದು ಮೂರುತಿಯನ್ನು, ಕಟ್ಟಿಗೆಯಲ್ಲಿ ಒಂದು ಆಕೃತಿಯನ್ನು ರೂಪಿಸಿದಂತೆ. ಕಥೆ ಎಲ್ಲ ವಯೋಮಾನದವರಿಗೂ ಬೇಕು. ವ್ಯಕ್ತಿ ತಾನೇ ಒಂದು ಕಥೆಯಾಗುವ, ತನ್ನ ಸುತ್ತಲ ಘಟನೆಗಳೇ ಆಕಾರಗಳಾಗುವ, ತನ್ನ ಕಾಲದ ಜನರ ಮನೋಭಾವಗಳು ದಾಖಲಾಗುವ ಇಂಥ ವಿಸ್ಮಯಗಳನ್ನು ತನ್ನ ಒಡಲಲ್ಲಿ ತುಂಬಿಟ್ಟುಕೊಂಡು ಎಲ್ಲವನ್ನು ತೋಡಿ ಬಯಲಾಗುವ ಮತ್ತೇ ಹೊಸತನಕ್ಕೆ ತೆರೆದುಕೊಳ್ಳುವ ಕಥಾ ಪಯಣ ಒಂದು ಜೀವಂತಿಕೆಯ ಲಕ್ಷಣ. ನಾನು ಕಥೆ ಬರೆಯುವುದೇ ಸಾಹಿತ್ಯದ ಅದರಲ್ಲೂ ಸೃಜನಶೀಲ ಸಾಹಿತ್ಯದ ಒಂದು ಶಕ್ತಿಯೆಂದು ಭಾವಿಸಿಕೊಂಡವನು. ನಮ್ಮ ತಂದೆ ಜಿ.ಬಿ.ಖಾಡೆಯವರ ಅಪಾರ ಜಾನಪದದ ಆಸಕ್ತಿಯ ಕಾರಣವಾಗಿ ಅವರು ಕಳೆದ ಶತಮಾನದ ಅರವತ್ತರ ದಶಕದಲ್ಲಿ ಡೊಳ್ಳಿನ ಮೇಳದವರು ತಮ್ಮ ಹಾಡುಗಳ ಮೂಲಕ ಹೇಳುತ್ತಿದ್ದ ಜನಪದ ಕಥೆಗಳನ್ನು ಸಂಗ್ರಹಿಸಿ ಸಂಪಾದಿಸಿದ್ದರು. ನಾನು ಅವನ್ನು ಓದಿಕೊಂಡು ಬೆಳೆದವನು. ಮುಂದೆ ವಿದ್ಯಾರ್ಥಿದೆಸೆಯಲ್ಲಿ ಮಾಸ್ತಿ, ತೇಜಸ್ವಿ, ಲಂಕೇಶ. ದು.ನಿಂ.ಬೆಳಗಲಿ, ಸತ್ಯಕಾಮ, ರಾವಬಹದ್ದೂರ, ಬಿ.ಟಿ.ಲಲಿತಾ ನಾಯಕ, ಕುಂವೀ ಅವರ ಕಥೆಗಳನ್ನು ಓದುತ್ತಾ ಕಥಾ ಸಾಹಿತ್ಯದ ಆಸಕ್ತಿಯನ್ನು ಒಂದು ತಪಸ್ಸನ್ನಾಗಿ ಸ್ವೀಕರಿಸಿಕೊಂಡೆ.

ಮೊದಲ ಕಥೆ 'ಸೂರ್ಯ ಚಂದ್ರರು ಕಾವಲೋ' ೧೯೯೯ ರಲ್ಲಿ ಬರೆದೆ, ಅದು ಅದೇ ವರ್ಷ ಕನ್ನಡ ಪ್ರಭದಲ್ಲಿ ಪ್ರಕಟವಾಯಿತು, ಅದೇ ಖುಷಿಯಲ್ಲಿ ಬರೆದ 'ನಮ್ಮೂರ ನಮಗ ಪಾಡ' ಕಥೆ ಪ್ರಜಾವಾಣಿಯಲ್ಲಿ, 'ಭೂಮಿ ತಲ್ಲಣಿಸ್ಯಾವ' ಕಥೆ ವಿಜಯ ಕರ್ನಾಟಕದ ವಿಜಯ ನೆಕ್ಷದಲ್ಲಿ ಪ್ರಕಟವಾದಾಗ ಆದ ಖುಷಿಯೇ ಬೇರೆ. ಹೀಗೆ ಇಪ್ಪತ್ತು ವರ್ಷಗಳ ಪಯಣದಲ್ಲಿ ಬರೆದುಕೊಂಡು ಬಂದ ಕಥೆಗಳನ್ನೆಲ್ಲ ಸೇರಿಸಿ ೨೦೨೧ರಲ್ಲಿ ಹತ್ತು ಕಥೆಗಳನ್ನೊಳಗೊಂಡ 'ಚೆಲುವಿ ಚಂದ್ರಿ' ಕಥಾ ಸಂಕಲನವನ್ನು ಹೊರತಂದೆ. ಅದು ನೀಡಿದ ಸಂತಸ ಅಪಾರ, ಕಥಾ ಬರವಣಿಗೆಯನ್ನು ಒಂದು ತಪಸ್ಸಿನಂತೆ ಬರೆಯುತ್ತ ಹೋದೆ, ಈ ಎರಡು ವರ್ಷಗಳಲ್ಲಿ ಮತ್ತೆ ಎಂಟು ಕಥೆಗಳು ಹುಟ್ಟಿಕೊಂಡವು. ಅದರ ಒಂದು ಕಟ್ಟು ಈ 'ಬಾಳುಕುನ ಪುರಾಣ' ಕಥಾ ಸಂಕಲನ, ಈಗ ೨೦೨೩ರಲ್ಲಿ ಹೊರಬಂದಿದೆ. ಇಲ್ಲಿಯ ಕಥೆಗಳೂ ನಾಡಿನ ಗಣ್ಯ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕಥಾ ಪ್ರಶಸ್ತಿಗಳನ್ನು ಪಡೆದು ಕಥೆಗಾರನಿಗೆ ಹೆಸರು ಮತ್ತು ಒಂದಿಷ್ಟು ಕೀರ್ತಿಯನ್ನೂ ಪ್ರಾಪ್ತ ಮಾಡಿವೆ. ಈ ಸಂಕಲನದ 'ಬಾಳುಕುನ ಪುರಾಣ' ಹಾಗೂ ಯಾಗದ ಕುದುರೆ ಕಥೆಗಳು ಸುಧಾದಲ್ಲೂ, 'ಇಲ್ಲಿಂದ ಮೇಲೆ ಶಬ್ದವಿಲ್ಲ' ಕಥೆ ಪ್ರಜಾವಾಣಿಯಲ್ಲೂ ಪ್ರಕಟವಾಗಿವೆ. 'ಸಧ್ಯಕಿದು ಜಮಖಂಡಿ ಸಂತಿ' ಕಥೆ ಮುಂಬಯಿಯ ಮೊಗವೀರ ಪತ್ರಿಕೆಯವರು 'ಅಕ್ಕರ ತಾಯವ್ವ' ಕಥೆಗೆ ಬೆಳಗಾವಿಯ ಕಲ್ಯಾಣರಾವ ಮುಚಳಂಬಿ ಪ್ರಶಸ್ತಿ ದೊರೆತಿದೆ. ಪ್ರತಿ ವರ್ಷ ನಡೆಸುವ ರಾಷ್ಟ್ರಮಟ್ಟದ ಕಥಾ ಸ್ಪರ್ಧೆಯಲ್ಲಿ ಪ್ರಶಸ್ತಿಗೆ ಭಾಜನವಾಗಿದೆ, ಈ ಕಥೆ ಕರ್ಮವೀರ ೪ ಜೂನ ೨೦೨೩ ರ ಸಂಚಿಕೆಯಲ್ಲಿ ಪ್ರಕಟವಾಗಿದೆ.

ಈಗ ಬಾಗಲಕೋಟೆಯಲ್ಲಿ ನೆಲೆಸಿದ್ದರೂ, ಗ್ರಾಮೀಣ ಪ್ರದೇಶದ ನನ್ನೂರು ಜಮಖಂಡಿ ತಾಲೂಕಿನ ತೊದಲಬಾಗಿ, ಇಲ್ಲಿಯ ಪರಿಸರದಲ್ಲಿಯೇ ನನ್ನ ಬಾಲ್ಯವನ್ನು ಕಳೆದೆ, ಮುಂದೆ ತಂದೆಯವರ ಕಂದಾಯ ಇಲಾಖೆಯ ವೃತ್ತಿ ಕಾರಣವಾಗಿ ಬಾದಾಮಿ ತಾಲೂಕಿನ ಕೆರೂರು, ಇಳಕಲ್ಲಿಗಳಲ್ಲಿ ಬದುಕಿನ ಪಯಣ ಮುಂದುವರೆಯಿತು, ಏಳೂರು ಸುತ್ತಿ ಏಳೂರು ಕೆರೆಯ ನೀರು ಕುಡಿದು ಅಲ್ಲಿನ ಪರಿಸರದ ಸಂದರ್ಭಗಳು, ಪಾತ್ರಗಳು ನನಗರಿವಿಲ್ಲದೇ ಇಲ್ಲಿನ ಕಥೆಗಳಲ್ಲಿ ಜೀವ ಪಡೆದಿವೆ. ಕೆರೂರಿನಲ್ಲಿ ಕಂಡ ಮೋಡಿಯಾಟದವರು ನನ್ನ 'ಬುದ್ಧ ಪ್ರಿಯೆ ಶಾಂತಿ' ಕಥೆಯಲ್ಲಿ ಬಂದರೆ, ನಮ್ಮೂರು ತೊದಲಬಾಗಿಯಲ್ಲಿ ಕಂಡ ಬಹಿರೂಪಗಾರರು 'ಬಾಳುಕುನ ಪುರಾಣ' ಕಥೆಯಲ್ಲಿ ಬರುತ್ತಾರೆ. ಬಾದಾಮಿ ಮಹಾಕೂಟದ ಬೆಟ್ಟ, ನಮ್ಮೂರು ತದಲಬಾಗಿ ಲಕ್ಕವ್ವ ದೇವಿ, ಒಂದು ಪಾತ್ರಗಳಾಗಿಯೇ ಕಥೆಗಳಲ್ಲಿ ತೂರಿಕೊಳ್ಳುತ್ತಾರೆ. ಕನ್ನಡ ಮರಾಠಿ ಭಾಷಾ ಬಾಂಧವ್ಯದ ಜಮಖಂಡಿ ಸುತ್ತಿನ ಭಾಷೆಗೆ ಪ್ರೀತಿಯ ಗಡಸುತನ, ಕಠೋರತೆಯ ಮೃದುತ್ವತನವಿದೆ. ಕೃಷ್ಣೆ, ಘಟಪ್ರಭೆಯರ ಪೆರ್ದೊರೆಯ ನಾಡು ನಮ್ಮದು, ಈ ಜೀವನದಿಗಳ ತಟಾಕದ ಭಾಷಾ ಸಮೃದ್ಧಿ ನನ್ನ ಇಲ್ಲಿನ ಕಥೆಗಳಲ್ಲಿ ಗುಡ್ಡೆಲ್ಲಾ ಹೈನಾಗುವಂತೆ ಚೆಲ್ಲುವರಿದಿದೆ. ಈ ಪರಿಸರದಲ್ಲಿ ಬದುಕಿದ್ದ ದು.ನಿಂ.ಬೆಳಗಲಿ ಅವರ ಕೃಷ್ಣಾ ತೀರದ ವಸ್ತು ಸಂಗತಿಗಳು, ಸತ್ಯಕಾಮರ ಅಮೂರ್ತ ತಂತ್ರಗಾರಿಕೆಗಳು, ರಾವಬಹಾದ್ದೂರ ಅವರ ಗ್ರಾಮೀಣ ಸಂವೇದನೆಗಳು ನಾನು ಈ ಪರಿಸರದ ಕೂಸಾಗಿರುವುದರಿಂದ ಸಹಜವಾಗಿಯೇ ಇಲ್ಲಿನ ಕಥೆಗಳೆಲ್ಲಾ ಅವರ ಮುಂದುವರಿಕೆಯಾಗಿರಬಹುದೆಂಬ ಒಂದು ಅಗೋಚರ ಕನವರಿಕೆ ನನ್ನದು, ಇದನ್ನು ಓದುಗ ದೊರೆಗಳಷ್ಟೇ ಪ್ರಮಾಣೀಕರಿಸಬೇಕು.

ಬಾಗಲಕೋಟೆ ಅದರಲ್ಲೂ ಜಮಖಂಡಿ ಸುತ್ತಿನ ಪರಿಸರದ ಘಟನೆ, ವಸ್ತು, ಸನ್ನಿವೇಶ ಮತ್ತು ಹಬ್ಬ ಆಚರಣೆ ನಂಬುಗೆ ನಡಾವಳಿ, ಸತ್ಯ, ಪ್ರಾಮಾಣಿಕತೆ, ಮಾತುಕತೆ, ಜಾತ್ರೆ ಜಾನಪದ ಎಲ್ಲವೂ ನನ್ನ ಕಥೆಗಳಲ್ಲಿ ಹೆಡೆಮುರಿದು ಬಿದ್ದಿವೆ. ಜಮಖಂಡಿ ಸುತ್ತಿನ ಭಾಷಾ ಕುಶಲತೆ ನನ್ನ ಕಥೆಗಳ ಜೀವ ದ್ರವ್ಯ. ಇಲ್ಲಿನ ಕಥೆಗಳ ಬಗ್ಗೆ ನಾನು ಮಾತನಾಡಬಾರದು, ಕಥೆಗಳೇ ಎಲ್ಲ ಹೇಳುವಾಗ ಕಥೆಗಾರನ ಕೆಲಸವೇನೂ ಇರುವುದಿಲ್ಲ. ಈಗ ನನ್ನ ಕಥೆಯಾಯ್ತು, ಮತ್ತೆ ಏನಿದ್ದರೂ ಇವೆಲ್ಲಾ ನಿಮ್ಮ ಕಥೆಗಳು, ನನ್ನ ಕಥೆಗಳೊಂದಿಗೆ ತಾವು ಸದಾ ಜೊತೆಯಾಗಿರಿ ಎಂಬ ಪ್ರೀತಿಯನ್ನಷ್ಟೇ ನಾನು ಬಯಸಬಲ್ಲೆ.” ೧೦೦  ಪುಟಗಳ ಈ ಪುಟ್ಟ ಕಥಾ ಸಂಕಲನದ ೮ ಕಥೆಗಳು ಬಹಳ ಸೊಗಸಾಗಿ ಓದಿಸಿಕೊಂಡು ಹೋಗುತ್ತವೆ.