ಬಾಳೆ - ಕೃಷಿಕರ ಮಾರ್ಗದರ್ಶಿ

ಬಾಳೆ - ಕೃಷಿಕರ ಮಾರ್ಗದರ್ಶಿ

ಪುಸ್ತಕದ ಲೇಖಕ/ಕವಿಯ ಹೆಸರು
ರಾಧಾಕೃಷ್ಣ ಹೊಳ್ಳ ಮತ್ತು ಪಿ.ವಿ.ಹೇರಳೆ
ಪ್ರಕಾಶಕರು
ರಾಧಾಕೃಷ್ಣ ಹೊಳ್ಳ, ಆಶ್ರಯ, ನಿಟ್ಟಡೆ - ಅಂಚೆ, ವೇಣೂರು-೫೭೪೨೪೨
ಪುಸ್ತಕದ ಬೆಲೆ
ರೂ: ೧೨೫.೦೦, ಮುದ್ರಣ: ಅಕ್ಟೋಬರ್ ೨೦೧೦

ಕೃಷಿ ಪತ್ರಕರ್ತರಾದ ರಾಧಾಕೃಷ್ಣ ಹೊಳ್ಳ ಇವರು ತಾವು ಬಾಳೆ ಬೆಳೆಯ ಬಗ್ಗೆ ಬರೆದ ಲೇಖನಗಳನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ. ಇವರ ಈ ಪ್ರಯತ್ನಕ್ಕೆ ಸಹಕಾರ ನೀಡಿದ್ದಾರೆ ಕೃಷಿ ಸಂಶೋಧನಾ ಕೇಂದ್ರದ ಪ್ರಾಧ್ಯಾಪಕರಾದ ಪಿ ವಿ ಹೇರಳೆ ಇವರು. ಬಾಳೆ ಬೆಳೆಯ ಬಗ್ಗೆ ಸಮಗ್ರವಾದ ವಿಷಯವನ್ನು ತಿಳಿಸಿಕೊಡುವ ಒಂದು ಕೈಪಿಡಿ ಈ ಪುಸ್ತಕ ಎಂದರೆ ತಪ್ಪಾಗಲಾರದು. 

ಬಾಳೆ ಬೆಳೆಯ ಪರಿಚಯದಿಂದ ಪ್ರಾರಂಭಿಸಿ ಅದರ ತಳಿ ವೈವಿಧ್ಯಗಳು, ಬೇಸಾಯ ಕ್ರಮ, ನೆಡು ಸಾಮಾಗ್ರಿ, ಅಧಿಕ ಇಳುವರಿಗೆ ಗೊಬ್ಬರಗಳ ಬಳಕೆ, ಸುಧಾರಿತ ಬಾಳೆ ಬೇಸಾಯದ ಕ್ರಮ, ಬಾಳೆಯೊಂದಿಗೆ ಬೆಳೆಯಬಹುದಾದ ಮಿಶ್ರ ಬೆಳೆಗಳು, ಅಧಿಕ ಸಾಂದ್ರ ಬೇಸಾಯ, ಬಾಳೆ ಬೆಳೆಯ ಆರ್ಥಿಕತೆ, ನೀರಾವರಿ, ಬೆಳೆಯನ್ನು ಸಂರಕ್ಷಿಸುವ ವಿಧಾನ, ಪೋಷಕಾಂಶಗಳ ಕೊರತೆಯಿಂದಾಗಿ ಉಂಟಾಗುವ ರೋಗಗಳು, ಮಾದರಿ ಬಾಳೆ ಬೆಳೆ, ಹಾರ್ಮೋನುಗಳ ಬಳಕೆ, ಬಾಳೆಯನ್ನು ಕೊಯ್ಲು ಮಾಡುವುದು ಮತ್ತು ಸಂಗ್ರಹಣೆ, ಬಾಳೆಯ ಬಹು ಉಪಯೋಗಗಳು, ಬಾಳೆಹಣ್ಣಿನ ಆರೋಗ್ಯಕರ ಗುಣಗಳು ಮತ್ತು ಬಾಳೆ ಹಣ್ಣಿನ ಪಾಕಗಳು ಈ ಎಲ್ಲಾ ವಿಷಯಗಳ ಸಮಗ್ರ ವಿವರಗಳು ಈ ಪುಸ್ತಕದಲ್ಲಿ ಲಭ್ಯ. ಪ್ರತೀ ವಿಷಯಕ್ಕೆ ಸೂಕ್ತವಾದ ಛಾಯ ಚಿತ್ರಗಳನ್ನು ನೀಡಿದ್ದಾರೆ. 

ತಮ್ಮ ಮುನ್ನುಡಿಯಲ್ಲಿ ಲೇಖಕರು ಹೇಳುವುದು ಹೀಗೆ..."ಸಮಸ್ತ ರೈತ ಸಮುದಾಯಕ್ಕೆ ಆರ್ಥಿಕ ಬೆಂಬಲ, ಜೊತೆಗೆ ತಿನ್ನುವ ವರ್ಗಕ್ಕೆ ಪೌಷ್ಟಿಕ ಆಹಾರದ ಬೆಂಬಲ ನೀಡುತ್ತಾ ಬಂದಿರುವ ಬಾಳೆ ಬೆಳೆ ನಮ್ಮ ರಾಜ್ಯವೂ ಸೇರಿದಂತೆ ದೇಶ, ವಿದೇಶಗಳಲ್ಲೂ ಅತ್ಯಧಿಕ ಪ್ರಮಾಣದಲ್ಲಿ ಬೆಳೆಸಲ್ಪಡುವ ಶುಭದಾಯಕ ಬೆಳೆ. ಇದಕ್ಕೆ ವಾಣಿಜ್ಯ ಬೆಳೆಗಳಲ್ಲಿ ಮಹತ್ವದ ಸ್ಥಾನವಿದೆ. ಇಂದು ರೈತವರ್ಗಕ್ಕೆ ಸಾಂಪ್ರದಾಯಿಕ ಕೃಷಿಗಳಿಂದ ಬರುವಂಥಹ ಉತ್ಪತ್ತಿಯು ಸಾಲದು. ಅವನ ಅಗತ್ಯತೆಗಳಿಗೆ ಹೆಚ್ಚಿನ ಆದಾಯ ಬೇಕು. ಇದಕ್ಕಾಗಿ ಅವನು ಹೆಚ್ಚು ಆದಾಯ ತಂದುಕೊಡುವಂತಹ ಬೆಳೆಗಳನ್ನು ಬೆಳೆಸಬೇಕಾಗಿದೆ. ಇಂತಹ ಬೆಳೆಗಳ ಸಾಲಿನಲ್ಲಿ ಬಾಳೆ ಬೆಳೆ ಎನ್ನಬಹುದು. ಬಾಳೆ ಬೆಳೆಯನ್ನು ಶ್ರದ್ಧೆಯಿಂದ ಬೆಳೆಸುವುದರಿಂದ ಕಡಿಮೆ ಅವಧಿಯಲ್ಲೇ ಹಾಕಿದ ಬಂಡವಾಳ ಮತ್ತು ಲಾಭವನ್ನು ಪಡೆಯಲು ಸಾಧ್ಯವಿದೆ. ಬಾಳೆ ಬೆಳೆಯುವ ಬಗ್ಗೆ ಎಲ್ಲರಿಗೂ ಗೊತ್ತಿದೆ. ಆದರೆ ವೈಜ್ಞಾನಿಕವಾಗಿ ಬೆಳೆದು ಲಾಭ ಪಡೆಯುವ ತಂತ್ರಜ್ಞಾನ ಎಲ್ಲರಿಗೂ ಗೊತ್ತಿಲ್ಲ. ಬಾಳೆ ಬೆಳೆಯುವ ಪ್ರತಿಯೊಬ್ಬ ಬೆಳೆಗಾರನಿಗೂ ಅದರ ವೈಜ್ಞಾನಿಕ ಸತ್ಯಗಳನ್ನು, ಅದರ ಕುರಿತಾಗಿ ಆಗಿರುವ ಹೊಸ ಹೊಸ ಸಂಶೋಧನೆಗಳನ್ನು ತನ್ನ ರೂಢಿಯ ಆಡುಭಾಷೆಯಲ್ಲಿ ಅರ್ಥವಾಗುವಂತೆ ಅರಿಯಲು ಸಾಧ್ಯವಾಗಬೇಕು ಎಂಬ ಉದ್ದೇಶದಿಂದ ವಿವಿಧ ಬೆಳೆಗಾರರು, ಬೆಳೆ ವಿಜ್ಞಾನಿಗಳು, ಸಂಶೋಧನಾ ನಿರತರು ಹಾಗೂ ಬೆಳೆ ಕುರಿತ ವಿವಿಧ ಪ್ರಕಟಣೆಗಳಿಂದ ಒಟ್ಟು ಸೇರಿಸಿ ಓರಣವಾಗಿ ಕೂಡಿಸಿ ಕನ್ನಡದಲ್ಲಿ ಸಂಪಾದಿತ ಪುಸ್ತಕ 'ಬಾಳೆ ಕೃಷಿಕರ ಮಾರ್ಗದರ್ಶಿ' ಇದು ಪ್ರತಿಯೊಬ್ಬ ಬಾಳೆ ಬೆಳೆಗಾರನಿಗೂ ಒಂದು ಮಾರ್ಗದರ್ಶಿ ಕೈಪಿಡಿಯಾಗಿರಲಿ ಎಂಬುದು ನಮ್ಮ ಇಚ್ಛೆ" ಎಂದಿದ್ದಾರೆ.

೧೨೦ ಪುಟಗಳ ಈ ಪುಸ್ತಕದ ರಕ್ಷಾಪುಟಗಳಲ್ಲಿ ವರ್ಣರಂಜಿತ ಫೋಟೋಗಳು ಚೆನ್ನಾಗಿವೆ. ಪುಸ್ತಕದ ಕೊನೆಯಲ್ಲಿ ನೀಡಿರುವ ಬಾಳೆಯ ಆರೋಗ್ಯಕಾರಿ ಗುಣಗಳು ಹಾಗೂ ಬಾಳೆಯಿಂದ ತಯಾರಿಸಬಹುದಾದ ಪಾಕಗಳು ಬಹಳ ಮಾಹಿತಿ ಪೂರ್ಣವಾಗಿವೆ. ನೀವು ಬಾಳೆ ಕೃಷಿಕರಾಗಿರದೇ ಇದ್ದರೂ ಸಹ ಮಾಹಿತಿ ಮತ್ತು ಆಸಕ್ತಿ ತಣಿಸಲು ಈ ಪುಸ್ತಕವನ್ನು ಖಂಡಿತವಾಗಿಯೂ ಓದಿಕೊಳ್ಳಬಹುದು.