ಬಾಳ ಪಯಣ ನಿರಂತರ....

ಬಾಳ ಪಯಣ ನಿರಂತರ....

ಒಮ್ಮೊಮ್ಮೆ ಸಂತಸ ಉಕ್ಕಿ ಹರಿಯುತ್ತದೆ,

ಇನ್ನೊಮ್ಮೆ ದುಃಖದ ಕಟ್ಟೆ ಒಡೆಯುತ್ತದೆ,

ಮತ್ತೊಮ್ಮೆ ಉತ್ಸಾಹ ಚಿಮ್ಮುತ್ತದೆ,

ಮಗದೊಮ್ಮೆ ನಿರಾಸೆ ಕಾಡುತ್ತದೆ,

 

ಆಗೊಮ್ಮೆ ಸಾಧಿಸುವ ಛಲ ಮೂಡುತ್ತದೆ,

ಈಗೊಮ್ಮೆ ವಿಫಲತೆಯ ಭಯವಾಗುತ್ತದೆ.

ಅಲ್ಲೊಮ್ಮೆ ಭರವಸೆಯ ಗೆರೆ ಕಾಣುತ್ತದೆ,

ಇಲ್ಲೊಮ್ಮೆ ಆ ಸಾಧ್ಯತೆಯೇ ಕ್ಷೀಣಿಸುತ್ತದೆ,

 

ಮುಂದೊಮ್ಮೆ ಭವ್ಯ ಭವಿಷ್ಯದ ಕನಸು ಕಟ್ಟುತ್ತದೆ,

ಹಿಂದೊಮ್ಮೆ ಪ್ರಪಾತಕ್ಕೆ ಬಿದ್ದ ನೆನಪುಗಳು ತಟ್ಟುತ್ತವೆ,

ಎಲ್ಲೋ ಒಮ್ಮೆ ಆಕ್ರೋಶ ಘರ್ಜಿಸುತ್ತದೆ,

ಎಂದೋ ಒಮ್ಮೆ ತಾಳ್ಮೆ ಮೆರೆಯುತ್ತದೆ,

 

ಮೇಲೊಮ್ಮೆ ಮನಸ್ಸು ವಿಹರಿಸುತ್ತದೆ,

ಕೆಳಗೊಮ್ಮೆ ಹೃದಯ ಬಿರಿಯುತ್ತದೆ....

 

ಮನವೆಂಬ ಮರ್ಕಟವ ಬಲ್ಲವರಾರು,

ಹಾಗೋ ಹೀಗೋ ಹೇಗೇಗೋ

ಆಡುತ್ತಾ ಆಡಿಸುತ್ತಾ ಸಾಗುತ್ತದೆ,

ಅದುವೇ ಬದುಕು - ಇದುವೇ ಜೀವನ.

ನಮ್ಮ ಬಾಳ ಪಯಣ ನಿರಂತರ....

  • ಜ್ಞಾನ ಭಿಕ್ಷಾ ಪಾದಯಾತ್ರೆಯ 141 ನೆಯ ದಿನ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನಲ್ಲಿ ವಾಸ್ತವ್ಯದ ಸಮಯದಲ್ಲಿ ಬರೆದ ಬರಹ. 

-ವಿವೇಕಾನಂದ. ಹೆಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ