ಬಾವಿಗೆ ಮಳೆನೀರಿಂಗಿಸಿದರೆ ಪ್ರಯೋಜನ ಇದೆಯೇ?

ಬಾವಿಗೆ ಮಳೆನೀರಿಂಗಿಸಿದರೆ ಪ್ರಯೋಜನ ಇದೆಯೇ?

ಬಾವಿಗೆ ಮಳೆ ನೀರಿಂಗಿಸಿದರೆ ಪ್ರಯೋಜನ ಇದೆಯೇ? ಈ ಪ್ರಶ್ನೆ ಕೇಳುವವರು ಹಲವರು. ಇದಕ್ಕೆ ಉತ್ತರ ಸಿಗಬೇಕೆಂದಾದರೆ, ಬಾವಿಗೆ ಮಳೆ ನೀರಿಂಗಿಸುವವರ ಬಾವಿಯನ್ನು ಕಣ್ಣಾರೆ ಕಾಣಬೇಕು.

ಅದಕ್ಕಾಗಿಯೇ ಹೋಗಿದ್ದೆ, ಹತ್ತು ವರುಷಗಳ ಮುಂಚೆ (೨೯ ಜೂನ್ ೨೦೦೯ರಂದು), ಮಂಗಳೂರಿನ ಖಾಸಗಿ ಪಶುವೈದ್ಯ ಡಾ. ಮನೋಹರ ಉಪಾಧ್ಯರ ಮನೆಗೆ. ಯಾಕೆಂದರೆ, ಅವರು ತನ್ನ ಮನೆಯ ಬಾವಿಗೆ ೨೦೦೧ರಿಂದ ನೇರವಾಗಿ ಮಳೆನೀರು ಇಂಗಿಸುತ್ತಿದ್ದಾರೆ. ಮಂಗಳೂರಿನ ಹೊರವಲಯದ "ಬೆಂದೂರ್ ವೆಲ್" ವೃತ್ತ ಐದು ರಸ್ತೆಗಳು ಕೂಡುವ ವಿಶಾಲ ವೃತ್ತ. ಅಲ್ಲಿಂದ ಬೆಂಗಳೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂದೂವರೆ ಕಿಮೀ ಸಾಗಿದಾಗ, ಮರೋಳಿಯಲ್ಲಿ ಎಡಬದಿಯಲ್ಲಿ ಎರಡು ಫಲಕಗಳು ಕಾಣಿಸಿದವು: (೧) ಸೂರ್ಯನಾರಾಯಣ ದೇವಸ್ಥಾನಕ್ಕೆ ದಾರಿ (೨) ಪಶುಚಿಕಿತ್ಸಾಲಯಕ್ಕೆ ದಾರಿ. ಆ ದಾರಿಯಲ್ಲಿ ೦.೭ ಕಿಮೀ ಸಾಗಿದಾಗ, ದೊಡ್ಡ ಆಲದಮರ ದಾಟಿದೊಡನೆ ಎದುರಿಗಿತ್ತು, ಡಾ. ಉಪಾಧ್ಯರ ಪಶುಚಿಕಿತ್ಸಾಲಯ.

ಅದು ೩೫ ಸೆಂಟ್ಸ್ ವಿಸ್ತಾರದ ಕಂಪೌಂಡ್. ಪಶುಚಿಕಿತ್ಸಾಲಯದ ಹಿಂಬದಿಯಲ್ಲಿ ಅವರ ಮನೆ. ಮನೆಯ ಚಾವಣಿಯ ವಿಸ್ತೀರ್ಣ ೧,೬೦೦ ಚದರಡಿ. ಮನೆ ಕಟ್ಟಿಸುವಾಗ ಬಾವಿ ತೋಡಿಸಿದ್ದರು. ೩೮ ಅಡಿ ಆಳದಲ್ಲಿ ಸಿಕ್ಕಿತ್ತು ಬಂಡೆ. ಅದನ್ನು ಒಡೆಸಿದರೆ ಸುತ್ತಲಿನ ಮನೆಗಳಿಗೆ ಅಪಾಯ ಸಂಭವ. ಹಾಗಾಗಿ ಒಡೆಸಲಿಲ್ಲ. ಆ ಬಾವಿಯಲ್ಲಿ ಬೇಸಗೆ ಕೊನೆಯಲ್ಲಿ ಕೇವಲ ಒಂದಡಿ ನೀರು.

ಬಾವಿ ತೋಡಿಸಿದ, ನಂತರದ ವರುಷದಲ್ಲಿ ಮಳೆ ಹೊಯ್ಯೋದು ಕಂಡಾಗ, ಮನೆಯ ಚಾವಣಿ ನೀರನ್ನೆಲ್ಲ ಬಾವಿಗೆ ಇಳಿಸಿದರೆ ಹೇಗೆ? ಎಂಬ ಯೋಚನೆ. ಸುಮಾರು ೩,೦೦೦ ರೂಪಾಯಿ ವೆಚ್ಚದಲ್ಲಿ ಪೈಪ್‍ಗಳ ಜಾಲ ಜೋಡಣೆ. ಎರಡನೆಯ ಮಹಡಿಯ ಚಾವಣಿಯ ಎರಡೂ ಬದಿಗಳಿಗೆ ದಂಬೆಯಂತೆ ಅರ್ಧ-ಕತ್ತರಿಸಿದ ಪಿವಿಸಿ ಪೈಪ್‍ಗಳ ಜೋಡಣೆ. ಅವೆರಡನ್ನೂ ಜೊತೆಗೂಡಿಸಿ, ಒಂದೇ ಪಿವಿಸಿ ಪೈಪಿನ ಮುಖಾಂತರ ನೆಲಮಟ್ಟಕ್ಕೆ ಇಳಿಸಿದರು. ಅಲ್ಲಿಂದ ನೆಲದಾಳದಲ್ಲಿ ಪೈಪ್ ಹಾಯಿಸಿ, ನೇರವಾಗಿ ಬಾವಿಯೊಳಕ್ಕೆ ಮಳೆನೀರು ಬೀಳುವಂತೆ ಪೈಪ್ ಇರಿಸಿದರು.

ಒಂದೇ ವರುಷದಲ್ಲಿ ಫಲಿತಾಂಶ ಕಂಡು ಬಂತು. ಬೇಸಗೆಯ ಕೊನೆಯಲ್ಲಿ ಬಾವಿಯಲ್ಲಿ ಐದಡಿ ನೀರು. ಅನಂತರದ ವರುಷಗಳಲ್ಲಿ ಬೇಸಗೆಯಲ್ಲಿ ಸುಮಾರು ಅಷ್ಟೇ ನೀರು. ಕೆಲವು ವರುಷಗಳಲ್ಲಿ ಬೇಸಗೆಯಲ್ಲಿ ಬಾವಿಯ ನೀರಿನ ಆಳ ಹತ್ತಡಿ! ವಿಶಾಲ ಕಂಪೌಡಿನಲ್ಲಿ ಹಲವು ಗಿಡಮರಗಳು, ಕಣ್ತುಂಬ ಹಸುರು. ಬಿರುಬೇಸಗೆಯಲ್ಲೂ ಅವುಗಳ ಹಸುರು ಮಾಸದಿರಲು ಕಾರಣ ಈ ಬಾವಿಯ ನೀರು.

ಬಾವಿಗೆ ಮಳೆ ನೀರಿಂಗಿಸುವವರು ಚಾವಣಿ ನೀರನ್ನೆಲ್ಲ ಬಾವಿಗೆ ಉಣಿಸಬೇಕೆಂದಿಲ್ಲ. ಬಾವಿಗೆ ಹತ್ತಿರದ ಇಳಿಪೈಪಿನ ನೀರನ್ನು ಮಾತ್ರ ಬಾವಿಗೆ ತಿರುಗಿಸಿದರೂ ಸಾಕು. ನೆನಪಿರಲಿ, ಪೈಪ್ ಉದ್ದ ಹೆಚ್ಚಿದಷ್ಟೂ ವೆಚ್ಚ ಹೆಚ್ಚು.

ಬಾವಿಗೆ ಮಳೆನೀರನ್ನು ನೇರವಾಗಿ ಇಳಿಸಬಹುದೇ? "ಬಾವಿ ಇರುವಲ್ಲಿ ಮಣ್ಣು ಹೇಗಿದೆ" ಎಂದು ಪರಿಶೀಲಿಸಿದರೆ ಈ ಸಂದೇಹ ನಿವಾರಣೆ. ಡಾ. ಉಪಾಧ್ಯ ಬಾವಿಗೆ ಕಾಂಕ್ರೀಟ್ ರಿಂಗ್ ಇಳಿಸಿದ್ದಾರೆ. ಹೀಗೆ ರಿಂಗ್ ಇಳಿಸಿದ ಅಥವಾ ಕಲ್ಲು ಕಟ್ಟಿದ ಬಾವಿಯ ಮಣ್ಣು ಕುಸಿಯುವ ಭಯವಿಲ್ಲ. ಮೆದುಮಣ್ಣಿನ ಜಾಗದಲ್ಲಿ ತೋಡಿದ ಬಾವಿಗೆ ನೇರವಾಗಿ ಮಳೆನೀರು ಹಾಯಿಸಿದರೆ ಬಾವಿಯೊಳಗೆ ಮಣ್ಣು ಕುಸಿದೀತು.

ಚಾವಣಿಯಿಂದ ಬಾವಿಗೆ ನೇರವಾಗಿ ಬಿಡುವ ಮಳೆನೀರನ್ನು ಸೋಸಬೇಡವೇ? ಇದನ್ನು ಅವರವರೇ ನಿರ್ಧರಿಸಬೇಕು. ಮೊದಲ ಎರಡು-ಮಳೆ ನೀರನ್ನು ಹೊರಕ್ಕೆ ಹಾಯಿಸಿ, ಅನಂತರದ ಮಳೆ ನೀರನ್ನು ಬಾವಿಗೆ ಬಿಡುವುದು ಉತ್ತಮ. ಇದಕ್ಕಾಗಿ ಇಳಿಪೈಪಿನ ಕೊನೆಯಲ್ಲಿ ಒಂದು ಮೆದು ಪೈಪ್ ಜೋಡಿಸಿದರೂ ಸಾಕು. ಮೊದಲ ಮಳೆ ಬಂದಾಗ ಮೆದು ಪೈಪನ್ನು ತಿರುಗಿಸಿದರೆ ಮಳೆನೀರು ಹೊರಕ್ಕೆ; ಅನಂತರ ಮೆದು ಪೈಪ್ ತಿರುಗಿಸಿ, ಮಳೆನೀರು ಬಾವಿಗೆ ಹೋಗುವಂತೆ ವ್ಯವಸ್ಥೆ. ಅದಲ್ಲದೆ,  ಮಳೆನೀರು ಸೋಸಲು ಸುಲಭದಲ್ಲಿ ಶೋಧಕ ಮಾಡಿಕೊಳ್ಳಬಹುದು. ೩ ಅಡಿ ಉದ್ದ-ಅಗಲ-ಎತ್ತರದ ಟ್ಯಾಂಕ್ ಮಾಡಬಹುದು. ಇದರಲ್ಲಿ, (ಮೇಲೆ) ಮರಳು, ಸಣ್ಣ ಜಲ್ಲಿ, ದೊಡ್ಡ ಜಲ್ಲಿಗಳ ಮೂರು ಪದರ ತುಂಬಬೇಕು. (ಒಂದರ ಕೆಳಗೊಂದು ಪದರ, ತಲಾ ಅರ್ಧ ಅಡಿ ದಪ್ಪ) ಈ ಶೋಧಕದಲ್ಲಿ ಸೋಸಿದ ಮಳೆನೀರನ್ನು ನೇರವಾಗಿ ಬಾವಿಗೆ ಬಿಡಬಹುದು. ಟ್ಯಾಂಕಿನ ಬದಲಾಗಿ ದೊಡ್ಡ ಪ್ಲಾಸ್ಟಿಕ್ ಅಥವಾ ಅಲ್ಯುಮಿನಿಯಂ ಬಕೆಟಿನಿಂದ ಇಂತಹ ಶೋಧಕ ಮಾಡಿ ಕೊಳ್ಳಬಹುದು.

ಬೀಳ್ಗೊಡುವಾಗ, ಬಾವಿಯಲ್ಲಿ ಮುಕ್ಕಾಲು ಭಾಗ ತುಂಬಿದ್ದ ನೀರನ್ನು ತೋರಿಸುತ್ತಾ, ಡಾ. ಉಪಾಧ್ಯ ಹೇಳಿದರು, "ಬಾವಿಗೆ ಮಳೆನೀರಿಂಗಿಸಿ ನಮಗೆ ಪ್ರಯೋಜನ ಆಗಿದೆ. ಇಲ್ಲೇ ಕಾಣುತ್ತದೆ ನೋಡಿ. ಸುತ್ತಲಿನ ಮನೆಗಳವರಿಗೂ ಪ್ರಯೋಜನ ಆಗಿದೆ. ಅವರ ಬಾವಿಗಳಲ್ಲೂ ಬೇಸಗೆಯಲ್ಲಿ ನೀರಿನ ಮಟ್ಟ ಏರಿದೆ."