ಬಾಸ್

ಬಾಸ್

 
ಕಛೇರಿಯಲ್ಲಿ  ಎಷ್ಟೇ ಚೆನ್ನಾಗಿ ಕೆಲಸ ಮಾಡಿದರೂ, ಸಂತೃಪ್ತಿಗೊಳಿಸಲಾಗದ ಏಕೈಕ  ಇಸಮು ಅಂದರೆ, ಅದು ನಿಮ್ಮ ಬಾಸ್. ನಿಮ್ಮ ಕೆಲಸದಲ್ಲಿ ತಪ್ಪು ಹುಡುಕುವ ಏಕೈಕ ಉದ್ದೇಶಕ್ಕೆ ಜನಿಸಿರುವ ಮಹಾನುಭಾವನೇ  ಈ ನಮ್ಮ ಬಾಸ್.  200% ಸರಿಯಾದ  assignment ಅನ್ನು ಆತನ ಮುಂದಿಟ್ಟರೂ, ಅದರಲ್ಲಿ ಅತಿ ಗೌಣವಾದ  ಸಣ್ಣ ತಪ್ಪೊಂದನ್ನು ಹೆಕ್ಕಿ ತೆಗೆದು, ನಿಮಗೆ ಕೆಲಸವೇ  ಗೊತ್ತಿಲ್ಲವೆನ್ನುತ್ತ ಉಗಿದು ಉಪ್ಪಿನಕಾಯಿ ಹಾಕುವ ಚಾಣಾಕ್ಷನೀತ.  ಈ ಸದ್ಗುಣಗಳ ಬಹು ಪಾಲನ್ನು ನಮ್ಮ ಪತ್ನಿಯರ‌ಲ್ಲಿ  ಕಾಣಬಹುದಾದರೂ ಅಲ್ಲಿ ಪ್ರೀತಿಯೂ ಇರುತ್ತಾದ್ದರಿಂದ, ಅವರನ್ನು  ಇವನಷ್ಟು ದ್ವೇಷಿಸಲು  ಸಾಧ್ಯವಿಲ್ಲ.  ಅದಕ್ಕೇ ಕೆಲವರು ಹೆಂಡತಿಯನ್ನು ಮನೆಯ ಬಾಸ್ ಎನ್ನುವುದು! ನಿಮ್ಮ ಜೀವನವನ್ನು ಎಷ್ಟು ಹೈರಾಣವಾಗಿಸಲು ಸಾಧ್ಯವೋ  ಅಷ್ಟನ್ನೂ ಅಣುವಷ್ಟೂ ತಪ್ಪದಂತೆ ಮಾಡುತ್ತಾನೆ, ಈ ಕೋಪಿಷ್ಠ,  ದರ್ಪಿಷ್ಠ, ಹಿಂಸಾ ವಿನೋದಿ ಬಾಸ್.  ಈ  ಪರಾಕಾಷ್ಠೆಯಿಂದಾಗಿ,  ಎಷ್ಟೋ ಜನ ತಮ್ಮ ಬಾಸ್‍ನ ಹೆಸರಿನವರನ್ನೂ ದ್ವೇಷಿಸುವುದುಂಟು !
 
ಬಾಸ್‍ಗಳು ಯಾಕೆ ಹೀಗೆ ಅನ್ನುವ ಬಹು-ಬೇಡಿತ  ಪ್ರಶ್ನೆಗೆ (Frequently Asked Questions) ಉತ್ತರವನ್ನು ಹುಡುಕಲು  ಹೊರಟರೆ ನಮ್ಮ ಅರಿವಿಗೆ  ಬರುವುದೇನೆಂದರೆ, ಇದಕ್ಕೆ ಕಾರಣ,  ಅವರು ತಮ್ಮನ್ನು `ದೇವರು' ಅಂದುಕೊಂಡಿರುವುದು. ತಮ್ಮಿಂದ ತಪ್ಪಾಗುವುದು ಅಸಾಧ್ಯ (The King can do no wrong  ತತ್ತ್ವದನ್ವಯ !) ಹಾಗೂ ತಮ್ಮ ಕೈ ಕೆಳಗಿನವರಿಂದ  ತಪ್ಪಿನ ಹೊರತಾಗಿ  ಬೇರೇನೂ  ಘಟಿಸದು  ಅನ್ನುವ ಅಚಲ  ವಿಶ್ವಾಸ ಮತ್ತು ನಂಬಿಕೆ ಅವರದು.  ಅವರವರ ನಂಬಿಕೆ ಅವರವರಿಗೆ  ಅಂತ ವಿಶಾಲ ಹೃದಯದಿಂದ  ಬಿಟ್ಟಿದ್ದಕ್ಕೇ ತಾನೇ ಅವರು,  ನಮ್ಮ ತಲೆಯ ಮೇಲೆ ಕುಳಿತಿರುವುದು.  ಹಾಗಾಗಿಯೇ  ಅವರು ಎಲ್ಲರಿಂದ `ನೀನೇ ಇಂದ್ರ, ನೀನೇ ಚಂದ್ರ'  ಎನ್ನುವ ಸಹಸ್ರ ನಾಮಾರ್ಚನೆ(!)ಯನ್ನು ಅಪೇಕ್ಷಿಸುತ್ತಾರೆ.  ಬಾಸ್  ಅಪೇಕ್ಷೆಯನ್ನು ಉಪೇಕ್ಷಿಸದ ಬಹು  ದೊಡ್ಡ ಗುಂಪೂ ಇರುತ್ತದೆಯೆನ್ನುವುದನ್ನು ಮರೆಯಬೇಡಿ. ಕೆಲಸದಿಂದ  ಬಾಸ್‍ನನ್ನು ಸಂತೃಪ್ತಿಗೊಳಿಸಲಾಗದೆನ್ನುವುದನ್ನು ಅರಿತ ಈ ಮಂದಿ,  ಅದಕ್ಕಾಗಿ  buttering ಅಥವಾ ಬೆಣ್ಣೆ ಹಚ್ಚುವ ಕೆಲಸಕ್ಕೆ ಕೈ ಹಾಕುತ್ತಾರೆ.  ಬಾಸ್‍ನ ಅಪೇಕ್ಷೆಯೇ  ಅದಾದುದ್ದರಿಂದ ಅವರು ಅದರಲ್ಲಿ ಯಶಸ್ವಿಯೂ ಆಗುತ್ತಾರೆ.  ಇಂಥವರಲ್ಲಿ  ಹಲವರು, ತಮ್ಮ ಮುಂಬಡ್ತಿಗಳಿಗೆ  ಸಹಾಯಕವಾಗುವ Service record ಗೋಸುಗ,  ಬಾಸ್‍ಗಳನ್ನು `ಚೆನ್ನಾಗಿ'  ಇಟ್ಟುಕೊಳ್ಳುತ್ತಾರೆ.  ಖಾಸಗೀ ರಂಗದಲ್ಲೇನೂ ಪರಿಸ್ಥಿತಿ  ಭಿನ್ನವಲ್ಲ.  ಇಲ್ಲಿ S.R. ಆದರೆ, ಅಲ್ಲಿ Performance Appraisal ಹೆಸರಿನಲ್ಲಿ ಬಾಸ್‍ನ ಗುಣಗಾನ  ಅಷ್ಟೇ.  ಅದಕ್ಕೇ ಹೆಸರಲ್ಲೇನಿದೆ ಅಂದ ಷೇಕ್ಸ್‍ಪಿಯರ್!
 
ಬಾಸ್‍ನ  ಕೃಪಾಕಟಾಕ್ಷಕ್ಕೆ ತಮ್ಮೆಲ್ಲ ನಾಚಿಕೆ, ಸ್ವಾಭಿಮಾನಗಳನ್ನು ಗಂಟು ಕಟ್ಟಿ  ಮೂಲೆಗೆ ಬಿಸಾಕಿ, ವಸ್ತುಶಃ ಅವರ ಮನೆಯ ನೌಕರರಂತೆ  ಕೆಲಸ ಮಾಡುವವರೂ  ನಮಗೆ ಕಾಣಸಿಗುತ್ತಾರೆ.  ಉಳಿದವರು ಇಂಥವರನ್ನು ಚಮಚಾ, ಚೇಲಾ, ಬಕೆಟ್ ಎಂದೆಲ್ಲಾ ಹೇಳಿ ಬಾಯಿ ಚಪಲ  ತೀರಿಸಿಕೊಳ್ಳುವುದುಂಟು. ಅಯಾಚಿತವಾಗಿ  ಇಂಥ ಮಿಕಗಳು  ಸಿಕ್ಕರೆ ಬಿಡಲಿಕ್ಕೆ ಬಾಸ್ ಏನು ಬಕರಾನೇ?
ಬಾಸ್  ನಿವೃತ್ತನಾದಾಗ, ಅವನ ಕಿರಿಕಿರಿ ತಪ್ಪಿದ ಖುಷಿಯಷ್ಟೇ ಮಹತ್ವವಾದ‌ ಇನ್ನೊಂದು ಖುಷಿಯೆಂದರೆ, ಇನ್ನು ಮುಂದೆ ಆತನ  ಪೇಲವ ಜೋಕುಗಳಿಗೆ  `ಹೊಟ್ಟೆ ಹಿಡಿದು  ನಗಬೇಕಾದ' ಅನಿವಾರ್ಯತೆ ಇರದು ಎಂಬುದು.  `ಕಸ್ತೂರಿ ನಿವಾಸ' ಅನ್ನುವ ಚಲನಚಿತ್ರದಲ್ಲಿ ಬಾಸ್ ಆದ ಡಾ|| ರಾಜ್ ಜೋಕಿಗೆ ರಾಜಾಶಂಕರ್ ನಗದಿದ್ದರೂ ಅವನಿಗೆ ಏನೂ ಆಗದು.  ಎಷ್ಟಂದ್ರೂ ರಾಜ್ ನಾಯಕ ತಾನೇ? ಆದರೆ, ನಿಜ ಜೀವನದಲ್ಲಿ  ಹೀಗಾದೀತೇ? ಪ್ರಯತ್ನಿಸಿ  ಕೈ ಸುಟ್ಟುಕೊಂಡವರನ್ನು ನಾನಂತೂ ಕಾಣೆ!
 
ಬಾಸ್‍ನ `ಸರ್ವಜ್ಞ' ತನದ  ಅರಿವು ನಮಗುಂಟಾಗುವುದು ಸಾಧಾರಣವಾಗಿ ಮೀಟಿಂಗುಗಳಲ್ಲಿ.  ಸಾಮಾನ್ಯತಃ ಆತ ಮೀಟಿಂಗುಗಳಲ್ಲಿ  ಅರ್ಧಕ್ಕೂ  ಮಿಗಿಲು `ಹೌದಪ್ಪ'ಗಳನ್ನೇ  ಇರಿಸಿಕೊಳ್ಳುತ್ತಾನೆ.  ಅವರುಗಳು - `ಛೇ ಇಂಥಾ ಐಡಿಯಾಗಳು  ನಿಮಗಷ್ಟೇ  ಹೇಗೆ ಹೊಳೆಯುತ್ತವೆ ಸಾರ್?' ಎಂದು ಅಭಿನಂದನಾತ್ಮಕ  ನೋಟ ಬೀರಿದಾಗ, ಆತನ ಮುಖ ನೋಡಬೇಕು - ಸಾಕ್ಷಾತ್  ಸೂರ್ಯನೂ ಅದರ ಮುಂದೆ ಮಂಕಾದಾನು !  ಅವರುಗಳು ಹಾಗಂದದ್ದು  ಪಕ್ಕಾ ವಿರೋಧಾರ್ಥದಲ್ಲಿ ಅನ್ನುವ ಸತ್ಯದ ಅರಿವಿದ್ರೂ  ಅದನ್ನು ಜಾಣತನದಿಂದ ಪಕ್ಕಕ್ಕೆ ಸರಿಸುತ್ತಾನಾತ.
 
ಮೀಟಿಂಗಿನಲ್ಲಿ ನೀವೊಂದು ಒಳ್ಳೆಯ ಪಾಯಿಂಟ್  ಮುಂದಿಟ್ಟಿರಿ ಅಂದ್ಕೊಳ್ಳಿ. ಅದನ್ನು ತನ್ನದೆಂದು  ಹೇಳಿಕೊಳ್ಳಲು ಆತ ಒಂದಿಷ್ಠೂ ನಾಚುವುದಿಲ್ಲ ! `ನಾನು ಆವಾಗಿನಿಂದ ಅದನ್ನೇ ಹೇಳ್ತಿರೋದು' ಅಂತ ಆತ ನುಡಿದಾಗ, ಎಲ್ಲರ ಪ್ರಶಂಸೆ  ನಿಮ್ಮ ಬದಲಾಗಿ  ಬಾಸಿಗೆ ಸಂದರೆ, ಅದು ನಿಮ್ಮ ತಪ್ಪಿಲ್ಲ, ವ್ಯವಸ್ಥೆಯ ತಪ್ಪು!
 
ಇನ್ನು ಕೆಲ ಘಟಾನುಘಟಿಗಳು ಸರಳವಾಗಿ  ತಮ್ಮ ಪಾರಮ್ಯವನ್ನು ಸ್ಥಾಪಿಸುತ್ತಾರೆ.  ಮೀಟಿಂಗೂ  ಒಳಗೊಂಡಂತೆ, ಎಲ್ಲೆಲ್ಲಿಯೂ  ತಮ್ಮ ಮಾತೇ  ಅಂತಿಮ ಅನ್ನುತ್ತಾರವರು.  ಅದೇ ಬಾಸ್‍ನ ಅಂತಸ್ಸತ್ವ, ಮೂಲಭೂತ ಗುಣ ಧರ್ಮ  ಹಾಗೂ ಮೂಲಭೂತ ಹಕ್ಕು.  ನಯವಾಗಿ  ಹೇಳಿದಾಗ  ಒಪ್ಪದೇ  ವಿರೋಧಿಸಿದ್ದೇ ಆದಲ್ಲಿ ನಿಮಗೆ  ಉಗ್ರ ನರಸಿಂಹನ ದರ್ಶನ ಖಾತ್ರಿ.  ಆಗಲೂ ನೀವು ಒಪ್ಪಲಿಲ್ಲವೆಂದರೆ, ನಿಮಗೆ ನಿಮ್ಮ ಉದ್ಯೋಗದ  ಮೇಲೆ ಆಸೆ ಇಲ್ಲವೆಂದರ್ಥ!
 
 ಮತ್ತೆ ಕೆಲ ಬಾಸ್‍ಗಳು ಸಾತ್ವಿಕವಾಗಿಯೇ ತಮ್ಮ ಮೊಂಡು ವಾದವನ್ನು ಮುಂದಿಡುತ್ತಾರೆ.  ಅವರಿಗೆ ಬೇಕಾದ‌ದ್ದು, ನಿಮ್ಮ ಬಾಯಲ್ಲಿ  ಬಂದ ಹೊರತು, ಮೀಟಿಂಗ್  ಮುಗಿಯುವುದೇ ಇಲ್ಲ.  ನಿಮ್ಮ ಬಾಯಲ್ಲಿಯೇ ಆ `ತೀರ್ಮಾನ'  ತರಿಸಿ, ಅದು ಅವರು ನಿಮ್ಮ ಮೇಲೆ `ಹೇರಿದ' ತೀರ್ಮಾನವಲ್ಲ ಅಂತ ಫರ್ಮಾಯಿಸುತ್ತಾರೆ!
 
ಬಾಸ್‍ಗಳ ಪ್ರಕಾರ, ಆ ಕಛೇರಿ ನಡೆಯುತ್ತಿರುವುದೇ ಅವರ ಉಪಸ್ಥಿತಿಯಿಂದ. `ಉಳಿದ' ದಂಡಪಿಂಡಗಳನ್ನು ಸಂಭಾಳಿಸಿ ಕಛೇರಿಯನ್ನು ಉತ್ತಮವಾಗಿ ನಿರ್ವಹಿಸುವುದು ಅವರಿಗೆ ಕರತಲಾಮಲಕ!  ಈ ಶ್ರೇಷ್ಠತಾ  ವ್ಯಸನದಿಂದಾಗಿ,  ಅವರು ತಮ್ಮ ಬಾಸಿಸಂ ತೋರ್ಪಡೆಗೆ, ಕೆಲವೊಮ್ಮೆ ತಮ್ಮ‌ ಅಧೀನರಿಗೆ  ದಕ್ಕಬೇಕಾದ  ಸೌಲಭ್ಯಗಳಿಗೂ ಕತ್ತರಿ ಪ್ರಯೋಗ  ಮಾಡುವುದುಂಟು. ಬಾಸ್‍ನ  ತಾಕತ್ತೇನೆಂಬುದನ್ನು  ಈ ಅಧೀನರಿಗೆ  ತಿಳಿಸಲಿಕ್ಕಾಗಿಯೇ  ಅವರ ಈ ಆರ್ಭಟ.  ಒಮ್ಮೆ ಹೀಗಾಯ್ತು.  ಒಬ್ಬ ಗುಮಾಸ್ತ  ಮದುವೆ ಊಟ ಮುಗಿಸಿ  ಕಛೇರಿಗೆ ಬಂದ‌. ಬಾಸ್ ವ್ಯಂಗ್ಯದಿಂದಂದ -`ಎಲ್ಲೋ ಪಾರ್ಟಿ ಮುಗಿಸಿ  ಬಂದಂತಿದೆ!' ಮರುಕ್ಷಣ ಗುಮಾಸ್ತನಂದ - `ಹೌದು ಸಾರ್, ಪಾರ್ಟಿ ಮಾಡಿದ್ವಿ. ತಾವು ನಮಗೆ ಇಂಕ್ರಿಮೆಂಟ್ ದಯಪಾಲಿಸಿ 25 ವರ್ಷ ಆಯ್ತು ನೋಡಿ – ಅದರ ರಜತ ಮಹೋತ್ಸವದ ಪಾರ್ಟಿ ! '
 
ಬಾಸ್ ಅಂದ್ರೇ  ಕಟ್ಟುನಿಟ್ಟು. ಇವೆರಡೂ  ಸಮಾನಾರ್ಥಕ ಪದಗಳೆಂದ್ರೂ  ತಪ್ಪಿಲ್ಲ ಬಿಡಿ. ಕಟ್ಟುನಿಟ್ಟಾಗಿದ್ದರಷ್ಟೇ ಕೆಲಸ ತೆಗೆಯಲು ಸಾಧ್ಯ ಅನ್ನುವುದು ಬಾಸ್‍ಗಳ  ಅಂಬೋಣ.  ಹಾಗಾಗಿ ಆತ ಎಲ್ಲರನ್ನೂ ಯಂತ್ರಗಳಂತೆ ದುಡಿಸುತ್ತಾನೆ.  ಕಛೇರಿಗೆ  ನೀವು  ಸ್ವಲ್ಪ ತಡವಾಗಿ ತಲುಪಿದ  ಯಾವುದೇ  ಸಂದರ್ಭದಲ್ಲಿಯೂ ಆತ ಬೇಗ ಬಂದಿರುತ್ತಾನೆ.  ನೀವು ಮುಂಚೆ ಬಂದು ಕೆಲಸ ಮಾಡಿದ್ದನ್ನು ನೋಡಲು ಯಾವಾಗಲೂ  ಆತ ಬಂದಿರುವುದಿಲ್ಲ! ಒಟ್ಟಿನಲ್ಲಿ  ನಿಮ್ಮ ಗ್ರಹಚಾರ ಕೆಟ್ಟಿದ್ದೇ ಭಾಗ್ಯ !
 
ಬಾಸ್‍ಗೆ ಬೈ ಹೇಳಲು ಹೋದಾಗಲೇ ಆತನಿಗೆ  ಎಲ್ಲಾ ಬಾಕೀ ಉಳಿದ ಕೆಲಸಗಳು  ನೆನಪಾಗುತ್ತವೆ ! ಅವುಗಳನ್ನು ನಿಮಗೆ ವರ್ಗಾಯಿಸಿ, ತಾನು ಹಾಯಾಗಿ  ಮನೆಗೆ ತೆರಳುತ್ತಾನೆ.  ಪ್ರತಿದಿನ  ಒಂಭತ್ತರವರೆಗೆ ಕಛೇರಿ ಕಾಯುವ ನಿಮ್ಮ  ಕಾಯಕಕ್ಕೆಂದೂ  ಚ್ಯುತಿಬಾರದಂತೆ  ಇಂತೇ ನೋಡಿಕೊಳ್ಳುತ್ತಾನೆ. ಆಗೆಲ್ಲಾ ನಮಗೆ ಬಾಸ್‍ಗೂ ಡಾನ್‍ಗೂ ಯಾವುದೇ ವ್ಯತ್ಯಾಸ ಕಾಣದಾಗುತ್ತದೆ.  ತನಗೆ ಮಾತ್ರ ಸಂಸಾರ, ಉಳಿದವರಿಗಲ್ಲ ಅನ್ನುವ `ಪರ-ಸನ್ಯಾಸತ್ವ'  ಅವನದ್ದು.  ರಜೆಯ  ದಿವಸಗಳಲ್ಲೂ  ಅಧೀನರನ್ನು ದುಡಿಸಿಕೊಳ್ಳಲು ಹಿಂಜರಿಯದ  ಅಪರೂಪದ ವ್ಯಕ್ತಿತ್ವ ಆತನದು !
 
ಬಾಸ್‍ನ  ನಿಜವಾದ ಕಿರಿಕ್ಕಿನ ದರ್ಶನವಾಗುವುದು, ನೀವು ರಜೆ ಕೇಳಿದಾಗ. ಎಷ್ಟೇ ಅತ್ಯವಶ್ಯವಾದ  ಕಾರ್ಯಕ್ರಮಕ್ಕೆ  ನೀವು ರಜೆ ಕೇಳಿದರೂ, ಆತ, ಹೇಗೆ ತಾನು ರಜೆ ತೆಗೆದುಕೊಳ್ಳದೇ ಸಂಸ್ಥೆಗೆ ದುಡಿದಿದ್ದೇನೆ ಅಂತ‌ ಒಂದೂ ವರೆ ಘಂಟೆ  ಭಾಷಣ ಬಿಗಿಯುತ್ತಾನೆ.  ಇಷ್ಟಾದ  ನಂತರವೂ ಆತ ನಿಮಗೆ  ರಜೆ ಮಂಜೂರು  ಮಾಡುತ್ತಾನೆಂದು ನೀವು ಭಾವಿಸಿದಲ್ಲಿ, ನೀವು ಭಾರೀ ಆಶಾವಾದಿಗಳಷ್ಟೇ. ಯಾವುದಕ್ಕೆ ರಜೆ  ಕೋರಿದರೂ, `ಬದಲೀ  ವ್ಯವಸ್ಥೆ ಮಾಡಿಕೊಳ್ಳುವುದು' ಎಂದಂದು  ಅಭ್ಯಾಸವಾಗಿದ್ದ ಬಾಸ್‍ಗೆ,  ಆತನ ಗುಮಾಸ್ತನೊಬ್ಬ `ಸಾರ್, ನನ್ನ ಮದುವೆಗೆ ರಜೆ ಕೊಡಿ' ಅಂತ ಕೇಳಿದಾಗಲೂ  ಇದೇ ಉತ್ತರ ಬಂದರೆ,  ಆ ಗುಮಾಸ್ತನ  ಗತಿ ಏನಾಗಬೇಡ ?! ಒಳ್ಳೆಯ ಬಾಸು (ಇರುವುದೇ  ಅನುಮಾನ, ಇದ್ದಿದ್ದರಲ್ಲಿ ಒಳ್ಳೆಯ  ಅನ್ನಬಹುದೇನೋ) ಒಂದು ವಾರ ರಜೆ  ಕೇಳಿದರೆ ಒಂದು ದಿನ ರಜೆ ಕೊಟ್ಟಾನು! ಹಾಗಾಗಿಯೇ  ಅನುಭವಸ್ಥ ನೌಕರರು  ಒಂದು ವಾರ ರಜೆ ಬೇಕಾದಾಗ  3 ತಿಂಗಳು ರಜೆ ಕೇಳುತ್ತಾರೆ !
 
ಇಂಥ ಕಿರಿಕಿರಿಯ ಮನುಷ್ಯ  ರಜೆ ಮೇಲೆ  ತೆರಳಿದರೆ,  ಸಹಜವಾಗಿಯೇ ಎಲ್ಲರಿಗೂ  ಪಾಯಸ  ಕುಡಿದಷ್ಟು  ಸಂತೋಷ.  ಹೀಗೇ ಒಮ್ಮೆ, ಬಾಸ್ ರಜೆ  ಮೇಲೆ ತೆರಳುತ್ತ ತಮ್ಮ ನೌಕರರಿಗೆ  ಹೇಳಿದ - `ಈ ರಜೆ  ನನಗೆ ಅತ್ಯವಶ್ಯವಾಗಿತ್ತು ನೋಡಿ' ಅಂತ. ಹಿಂದಿನಿಂದೊಬ್ಬ‌ ಮುಲುಗುಟ್ಟಿದ `ನಮಗೂ ಅಷ್ಟೇ !'
 
ಬಾಸುಗಳಿಗೆ  ತಮ್ಮ ಖದರ್ ತೋರಿಸಲಿಕ್ಕೆ ತುಂಬಾ ಆಸಕ್ತಿ.  ಅಂಥ ಸಂದರ್ಭಗಳಿಗಾಗಿ  ಅವರು ಕಾಯುತ್ತಿರುತ್ತಾರೆ.  ಹೀಗೇ  ಬಾಸೊಬ್ಬ  ಫ್ಯಾಕ್ಟರಿಗೆ  ಬಂದ. ತಾನು ಬಹಳ ಕಟ್ಟುನಿಟ್ಟು ಅನ್ನೋದನ್ನ ತೋರಿಸ್ಕೋಬೇಕಿತ್ತು ಆತನಿಗೆ.  ಅಲ್ಲೇ ನೋಡ್ಬೇಕಾದ್ರೆ, ಅವನಿಗೆ ಒಬ್ಬ ಹುಡುಗ  ಸುಮ್ಮನೆ ನಿಂತಿದ್ದು ಕಂಡಿತು.  ಅವಕಾಶ ಸಿಕ್ಕಿದ್ದಕ್ಕೆ ಒಳಗೊಳಗೇ ಖುಷಿಯಾದರೂ ಹೊರಗೆ ಮಾತ್ರ, ಕೆಂಡಾಮಂಡಲ ಕೋಪದಿಂದಂದ - `ಏಯ್ ನಿನ್ನ ಸಂಬಳ ಎಷ್ಟು ?' ಆ ಹುಡುಗ‌ ಆಶ್ಚರ್ಯದಿಂದಂದ‌ ‍‍- "ಸ್ವಾಮೀ, ರೂ. 3000/‍-" ಬಾಸ್ ನುಡಿದ - `ತೊಗೋ ಈ ರೂ. 9000/-, You are fired. ನಿನ್ನಂಥವರ  ಅಗತ್ಯ ನಮಗಿಲ್ಲ !'  ಆ ಹುಡುಗ  ಮರು ಮಾತಾಡದೇ  ಹೊರಟು ಹೋದ.  ಆಗ ಆತ  ಪಕ್ಕದಲ್ಲಿದ್ದಾತನನ್ನು  ವಿಚಾರಿಸಿದ - `ಆತ ಏನು ಕೆಲಸ ಮಾಡಿಕೊಂಡಿದ್ದ  ಇಲ್ಲಿ?'  ಆ ನೌಕರ ತಣ್ಣಗೆ  ಹೇಳಿದ - `ಸಾರ್,  ಆತ ಕೊರಿಯರ್ ಹುಡುಗ !'  ಆಗ ಬಾಸ್‍ನ  ಮುಖ ಹೇಗಾಗಿರಬಹುದೆಂದು ಊಹಿಸಿ, ನಮ್ಮ ಬಾಸ್‍ಗೆ ಹೀಗಾಗಬಾರದಿತ್ತೇ ಅಂತ ನಮಗೆ ಅನ್ನಿಸಿದಲ್ಲಿ, ಅದು ಮಾನವ ಸಹಜ ಗುಣ -  ಅಪರಾಧೀ  ಭಾವ ಬೇಡ !
 
ಚಮಚಾಗಿರಿ ಮಾಡಿ, ಉನ್ನತ ಹುದ್ದೆಗೇರಿ,  ಬಾಸ್‍ಗಳಾಗಿ  ಬರುವವರೂ ಉಂಟು. ಕೆಲಸ ಬಾರದ ಅವರ ಫಜೀತಿ ಕೆಲಸಗಳು ಅಷ್ಟಿಷ್ಟಲ್ಲ. ಹಾಗಂತ ನೀವು ಅವರನ್ನು ತಿದ್ದಲಾರಿರಿ. ಏನಾದರೂ  ಆಗಲಿ, ನಾನು ತಿದ್ದಿಕೊಳ್ಳೆನೆಂಬ  ದೃಢ ನಿಶ್ಚಯ ಮಾಡಿದ ಇವರನ್ನು ತಿದ್ದ ಹೊರಟಲ್ಲಿ  ನಮ್ಮ ಎದೆಯ ತಿದಿಯೊತ್ತೀತು ಅಷ್ಟೇ.  ಒಮ್ಮೆ ಗುಮಾಸ್ತನೊಬ್ಬ  ಬಂದು ಕೇಳಿದ - `ಸಾರ್, ಈ ಅನುಪಯುಕ್ತ  ಫೈಲ್‍ಗಳಿಗೆ  ಬೆಂಕಿ ಕಾಣಿಸಬೇಕು.  ತಮ್ಮ ಅನುಮತಿ ಬೇಕಾಗಿದೆ'. ಮರು ಯೋಚನೆಯೇ  ಇಲ್ಲದೇ, ಬಾಸ್ ಉಲಿದ - `ಯಾಕಿಲ್ಲ, ನನ್ನ ಅನುಮತಿಯಿದ್ದೇ ಇದೆ. ಆದರೆ,  ಸುಡುವ ಮುಂಚೆ,  ಅವುಗಳ ಕಾಪಿ ತೆಗೆದು ಕಾಪಿಟ್ಟುಕೊಂಡು, ಅಕಾರಾದಿಯಾಗಿ ಜೋಡಿಸಿ ಸುಡತಕ್ಕುದು !'  ಗುಮಾಸ್ತ  ಮೂರ್ಛೆ ಹೋದ ! ಕೆಲಸ  ಇಲ್ಲದಿದ್ರೂ ಕಂಬ ಸುತ್ತು ಅನ್ನುವ ಜಾತಿ, ಈ ಬಾಸ್‍ಗಳದ್ದು.
 
ಒಟ್ಟಿನಲ್ಲಿ, ಬಾಸ್‍ನಿಂದ  ನೊಂದ ಜೀವಿಗಳ ಎಣಿಕೆ  ಮಾಡಿದಲ್ಲಿ, ನಮ್ಮ ದೇಶದ ಜನಸಂಖ್ಯೆಯ  ಸಮೀಪ ಬಂದೀತು! ನಮಗೆ  ಬಾಸ್ ಆದರೂ,  ಆತನೂ ತನ್ನ ಬಾಸ್‍ನಿಂದ ನೊಂದಿರುತ್ತಾನಷ್ಟೇ ?! ಬಾಸ್ ಇಲ್ಲದಿದ್ದಾಗ, ನಮ್ಮ ಕಾರ್ಯಕ್ಷಮತೆ  ಅತ್ಯುನ್ನತ  ಮಟ್ಟದಲ್ಲಿರುತ್ತದೆಂದು  ಮನಃಶಾಸ್ತ್ರಜ್ಞರು  ಹೇಳಿದ್ದರೂ, ಅದನ್ನು ನೋಡಲು  ಬಾಸ್ ಇರುವುದಿಲ್ಲವಲ್ಲಾ! ಬಾಸ್‍ನ ಕಿರಿಕಿರಿಗೆ ಅಭ್ಯಸ್ಥರಾಗಿ ಆತನ  ಅನುಪಸ್ಥಿತಿಯಲ್ಲಿ ಮಂಕಾಗುವ  ಮಂಕುದಿಣ್ಣೆಯರಿದ್ದಾರೆನ್ನುವುದೂ  ದಿಟವೇ!
 
ಹೀಗೇ,  ಊಟದ ವೇಳೆಯಲ್ಲಿ ಸಹೋದ್ಯೋಗಿಗಳು  ಹರಟುತ್ತಿದ್ದರು.  ಒಬ್ಬ ಕಿಲಿಮಾಂಜಿರೋ ಅಗ್ನಿಪರ್ವತದ ಬಗ್ಗೆ ಹೇಳುತ್ತಿದ್ದ - `ಅದು  ಸೌಮ್ಯವಾಗಿ ಇರುತ್ತೆ.  ಆದರೆ,  ಬಾಯಿ ತೆರೆದರೆ ಬೆಂಕಿ ಉಗುಳುತ್ತದೆ.' ಇದನ್ನಷ್ಟೇ  ಕೇಳಿದ ಆಗ ತಾನೇ ಬಂದಾತ ಹೇಳಿದ - `ಓಹೋ ಒಗಟು ಹೇಳ್ತಿದಿಯೋ ?  ನನಗೆ ಗೊತ್ತಿಲ್ವೇ, ನಾನು  ಈ ಕಛೇರಿಯಲ್ಲಿ  10 ವರ್ಷಗಳಿಂದ  ದುಡೀತಿದ್ದೇನೆ!'  ಬಾಸ್‍ನ್ನು ಅಗ್ನಿಪರ್ವತಕ್ಕೆ ಸಮೀಕರಿಸಿದ ರೂಪಕಕ್ಕಿಂತ, ಹೆಚ್ಚಿಗೆ  ಹೇಳಲು ನಾನು ಅಶಕ್ತ. ಬಹಳ ಅರ್ಥವತ್ತಾದ, ಪರಿಣಾಮಕಾರೀ ರೂಪಕವಿದು, ಏನಂತೀರಿ?
 
 

Comments

Submitted by smurthygr Sat, 03/25/2017 - 16:39

ಸ್ವತಃ ತಾವೇ ಬಾಸ್ ಆದಾಗಲೇ ಅದರ ನಿಜಸ್ಥಿತಿ ತಿಳಿಯಲಾಗುವುದು ! :-)