ಬಾಹ್ಯಾಕಾಶದಲ್ಲಿ ಕೃತಕ ಆಕಾಶಕಾಯಗಳ “ಮಾಲಿನ್ಯ”

ಬಾಹ್ಯಾಕಾಶದಲ್ಲಿ ಕೃತಕ ಆಕಾಶಕಾಯಗಳ “ಮಾಲಿನ್ಯ”

ಬಾಹ್ಯಾಕಾಶದಲ್ಲಿ ಕೋಟಿಗಟ್ಟಲೆ ಮಾನವ ನಿರ್ಮಿತ ಆಕಾಶಕಾಯಗಳು ಭೂಮಿಯನ್ನು ಸುತ್ತುತ್ತಿವೆ. ಕೆಲವು ತಿಂಗಳ ಹಿಂದೆ, ಚೀನಾದ ಕೃತಕ ಉಪಗ್ರಹವೊಂದರ ಭಾಗಗಳು ಯು.ಎಸ್.ಎ. ದೇಶದ ಮೇಲೆ ಬೀಳಬಹುದೆಂದು ಸುದ್ದಿಯಾಗಿತ್ತು. ಇದೀಗ ಮೇ 2022ರ ಎರಡನೇ ವಾರದಲ್ಲಿ ಗುಜರಾತಿನ ಕೆಲವು ಸ್ಥಳಗಳಲ್ಲಿ ಆಕಾಶದಿಂದ ಫುಟಬಾಲ್ ಗಾತ್ರದ ಗೋಲಾಕಾರದ (ಕಪ್ಪು ಮತ್ತು ಬೆಳ್ಳಿ ಬಣ್ಣದ) ಲೋಹದ ವಸ್ತುಗಳು ಜಮೀನಿಗೆ ಬಿದ್ದಿವೆ. ಸುರೇಂದ್ರನಗರ ಜಿಲ್ಲೆಯ ಸಯ್ಲಾ ಗ್ರಾಮ, ಖೇಡಾ ಜಿಲ್ಲೆಯ ನಡಿಯಾಡ್ ಪಟ್ಟಣ ಮತ್ತು ಆನಂದ್ ಜಿಲ್ಲೆಯ ಮೂರು ಹಳ್ಳಿಗಳಲ್ಲಿ ಈ ವಿದ್ಯಮಾನ ವರದಿಯಾಗಿದೆ. ಇದರಿಂದಾಗಿ ಅಲ್ಲಿನ ಜನರಲ್ಲಿ ಆತಂಕ ಮೂಡಿದೆ.

ಇದೆಲ್ಲ ಶುರುವಾದದ್ದು ಎಪ್ರಿಲ್ 21, 1961ರಂದು. ಆ ದಿನ, ಅಂದಿನ ಸೋವಿಯೆತ್ ಯೂನಿಯನಿನ ಬೈಕನೂರ್ ಕೊಸ್ಮೊಡ್ರೋಮ್‌ ಉಡ್ಡಯನ ಕೇಂದ್ರವು ಮಾನವ ಚರಿತ್ರೆಯ ಅಪೂರ್ವ ಸಾಧನೆಗೆ ಸಜ್ಜಾಗಿ ನಿಂತಿತ್ತು. ನೋಡನೋಡುತ್ತಿದ್ದಂತೆಯೇ ಯೂರಿ ಗಗಾರಿನ್ ಎಂಬಾತನಿದ್ದ ವೊಸ್ಟೊಕ್ 3ಕೆ.ಎ. ಎಂಬ ಹೆಸರಿನ ಬಾಹ್ಯಾಕಾಶ ವಾಹಕ ಆಕಾಶಕ್ಕೇರಿತು. ಆ ಮೂಲಕ ಯೂರಿ ಗಗಾರಿನ್ ಭೂಮಿಯಿಂದ ಬಾಹ್ಯಾಕಾಶಕ್ಕೆ ಚಿಮ್ಮಿದ ಮೊತ್ತಮೊದಲ ಗಗನಯಾತ್ರಿ ಎಂಬ ಹೆಗ್ಗಳಿಕೆಗೆ ಪಾತ್ರನಾದ.

ಈ ಮೊದಲ ಬಾಹ್ಯಾಕಾಶಯಾನ ಕೇವಲ ಒಂದು ಗಂಟೆ 48 ಸೆಕೆಂಡುಗಳಲ್ಲಿ ಮುಕ್ತಾಯವಾದರೂ, ಅದು ಮಾನವ ಜನಾಂಗದ ಚರಿತ್ರೆಯನ್ನೇ ಬದಲಾಯಿಸಿತು. ಅದರಿಂದಾಗಿ ಭೂಮಿಯ ಜೀವಿಯಾದ ಮನುಷ್ಯ ಯಶಸ್ವಿಯಾಗಿ ಅಂತರಿಕ್ಷ ಯುಗಕ್ಕೆ ಕಾಲಿಟ್ಟಿದ್ದ.

ಆ ಮುಂಚೆ, ಪ್ರಪ್ರಥಮ ಕೃತಕ ಉಪಗ್ರಹ “ಸ್ಪುಟ್ನಿಕ್"ಅನ್ನು ಸೋವಿಯೆತ್ ಯೂನಿಯನ್ ಬಾಹ್ಯಾಕಾಶಕ್ಕೆ ಕಳಿಸಿದಾಗಲೇ ಅಂತರಿಕ್ಷ ಯುಗ ಆರಂಭವಾಗಿತ್ತು. ಆದರೆ, ವೊಸ್ಟೊಕ್ ಯಾನ ವಿಶೇಷವಾಗಿತ್ತು. ಯಾಕೆಂದರೆ, ಮನುಷ್ಯನೊಬ್ಬ ಬಾಹ್ಯಾಕಾಶಕ್ಕೆ ಜಿಗಿದು, ವಿಶ್ವದಲ್ಲಿ ಮನುಷ್ಯರ ಏಕೈಕ ನೆಲೆಯಾದ ಭೂಮಿಯ ನೋಟವನ್ನು ಅಲ್ಲಿ ಕಣ್ಣಾರೆ ಕಂಡು ಭೂಮಿಗೆ ಹಿಂತಿರುಗಿದ್ದ.

ವೊಸ್ಟೊಕ್ ಯಾನವು ರಾಜಕೀಯವಾಗಿಯೂ ಗಂಭೀರ ಪರಿಣಾಮ ಬೀರಿತು. ಅರುವತ್ತನೆಯ ದಶಕವು ಅಮೇರಿಕಾ ಮತ್ತು ಸೋವಿಯೆತ್ ಯೂನಿಯನಿನ ನಡುವೆ ಶೀತಲ ಸಮರವು ಬಿರುಸಾಗಿದ್ದ ಅವಧಿ. ಇದರಿಂದಾಗಿ, ಅವೆರಡು ದೇಶಗಳ ನಡುವೆ “ಬಾಹ್ಯಾಕಾಶ ಸ್ಪರ್ಧೆ” ಭುಗಿಲೆದ್ದಿತು. ಬಾಹ್ಯಾಕಾಶಕ್ಕೆ ಕೃತಕ ಉಪಗ್ರಹಗಳನ್ನು ಉಡಾಯಿಸುವ ಸ್ಪರ್ಧೆಯೇ ಮುಂದೆ ಚಂದ್ರ ಮತ್ತು ಮಂಗಳನಲ್ಲಿಗೆ ವಾಹಕಗಳನ್ನು ಕಳಿಸಲು ಕಾರಣವಾಯಿತು.

ಅದೇನಿದ್ದರೂ, ಕೃತಕ ಉಪಗ್ರಹಗಳು ಅವನ್ನು ಉಡಾಯಿಸುವ ದೇಶಗಳ ಸಾಮರ್ಥ್ಯದ ಸಂಕೇತವಾದವು. ಇದರಿಂದಾಗಿ, ಇತರ ಯಾವುದೇ ಯಂತ್ರದಂತೆ ಕೃತಕ ಉಪಗ್ರಹವೂ ಒಂದು ಯಂತ್ರ ಎಂಬುದು ಮರೆತೇ ಹೋದಂತಾಯಿತು. ಅದರ ಪರಿಣಾಮವಾಗಿ ಇದೀಗ ಹೆಚ್ಚೆಚ್ಚು ಕೃತಕ ಉಪಗ್ರಹಗಳು ಹಳೆಯದಾಗಿ, ಸವೆದು, ಸಾಯುವ ಸ್ಥಿತಿಗೆ ಬಂದಿವೆ,

ಯಾವುದೇ ಕೃತಕ ಉಪಗ್ರಹದ ಬಾಳ್ವಿಕೆ ಅದರ “ಪಥ"ವನ್ನು ಅವಲಂಬಿಸಿರುತ್ತದೆ. ಉದಾಹರಣೆಗೆ, ಮೊದಲ 300 ಕಿಮೀ ಎತ್ತರದ ಪಥದಲ್ಲಿ ಸುತ್ತುವ ಕೃತಕ ಉಪಗ್ರಹದ ಆಯುಷ್ಯ ಕೆಲವೇ ಕೆಲವು ತಿಂಗಳು. 500 ಕಿಮೀ ಎತ್ತರದ ಪಥದಲ್ಲಿ ಸುತ್ತುವ ಕೃತಕ ಉಪಗ್ರಹದ ಆಯುಷ್ಯ 10 ವರುಷಗಳು ಮತ್ತು 1,000 ಕಿಮೀ ಎತ್ತರದಲ್ಲಿ ಸುತ್ತುವ ಕೃತಕ ಉಪಗ್ರಹದ ಆಯುಷ್ಯ ಹಲವು ವರುಷಗಳು.

ಕೃತಕ ಬಾಹ್ಯಾಕಾಶಕಾಯಗಳ ಬಗ್ಗೆ ಯು.ಎಸ್.ಎ. ದೇಶದ ನ್ಯಾಷನಲ್ ಏರೋನಾಟಿಕ್ಸ್ ಮತ್ತು ಸ್ಪೇಸ್ ಅಡ್ಮಿನಿಸ್ಟ್ರೇಷನ್ ನೀಡಿರುವ ಅಂಕೆಸಂಖ್ಯೆ ಹೀಗಿದೆ: ಒಂದು ಸೆಮೀ.ನಿಂದ ತೊಡಗಿ ಹತ್ತು ಸೆಮೀ. ವರೆಗಿನ ಅಳತೆಯ ಕೃತಕ ಬಾಹ್ಯಾಕಾಶಕಾಯಗಳ ಸಂಖ್ಯೆ ಹತ್ತು ಕೋಟಿಗಿಂತ ಅಧಿಕ. ವರುಷದಿಂದ ವರುಷಕ್ಕೆ ಈ ಸಂಖ್ಯೆ ಹೆಚ್ಚುತ್ತಲೇ ಇದೆ. ಯಾಕೆಂದರೆ, ಕೃತಕ ಉಪಗ್ರಹಗಳ ಸಂಖ್ಯೆಯೂ ಹೆಚ್ಚುತ್ತಿದೆ.

ಒಂದು ಕೃತಕ ಉಪಗ್ರಹ ನಾಶವಾಗುವ ಹೊತ್ತು ಬಂದಾಗ ಏನಾಗುತ್ತದೆ? ಅದರ ಚಿಕ್ಕಪುಟ್ಟ ಭಾಗಗಳು ಅಪಾಯರಹಿತ ಎಂದು ಅನಿಸಬಹುದು. ಆದರೆ, ಸತ್ಯಸಂಗತಿ ಭಯಾನಕವಾಗಿದೆ. ಈ ಪುಟಾಣಿ ಭಾಗಗಳು ಭೂಮಿಯನ್ನು ಸೆಕೆಂಡಿಗೆ ಹತ್ತು ಕಿಮೀ ವೇಗದಲ್ಲಿ ಸುತ್ತುತ್ತಿರುತ್ತವೆ. ಇಂತಹ ಭಾರೀ ವೇಗದಿಂದಾಗಿ ಅವುಗಳು ಭಾರೀ ಚಲನಶಕ್ತಿ ಹೊಂದಿರುತ್ತವೆ. ಈ ಪುಟಾಣಿ ಭಾಗಗಳು ಬೇರಾವುದೇ ವಸ್ತುವಿಗೆ ಢಿಕ್ಕಿ ಹೊಡೆದರೆ, ಆ ಸಂಘಟ್ಟನೆಯ ವೇಗ ಗಂಟೆಗೆ 36,000 ಕಿಮೀ. ಉದಾಹರಣೆಗೆ, ಈ ವೇಗದಲ್ಲಿ ಕೇವಲ 2 ಮಿಮೀ ಅಳತೆಯ ಒಂದು ವಸ್ತು ಗಂಟೆಗೆ 100 ಕಿಮೀ ವೇಗದ ಕ್ರಿಕೆಟ್ ಬಾಲ್‌ನಂತೆ ಅಪ್ಪಳಿಸುತ್ತದೆ. ಹಾಗೆಯೇ ಕೇವಲ 10 ಮಿಮೀ ಅಳತೆಯ ಒಂದು ವಸ್ತು ಗಂಟೆಗೆ 100 ಕಿಮೀ ವೇಗದ ಮೋಟರ್-ಬೈಕಿನಂತೆ ಅಪ್ಪಳಿಸುತ್ತದೆ!

ಈಗ ನಮ್ಮ ಮುಂದಿರುವ ಪ್ರಶ್ನೆ: ಬಾಹ್ಯಾಕಾಶದಲ್ಲಿ ಸುತ್ತುತ್ತಿರುವ ಹೆಚ್ಚೆಚ್ಚು ಸಂಖ್ಯೆಯ ಭಗ್ನಾವಶೇಷಗಳನ್ನು ಏನು ಮಾಡುವುದು? ಕೃತಕ ಉಪಗ್ರಹವು ಚಲನೆ ನಿಲ್ಲಿಸಿ, ಭೂಮಿಯತ್ತ ಗಂಟೆಗೆ ಸಾವಿರಾರು ಕಿಮೀ ವೇಗದಲ್ಲಿ ನುಗ್ಗುವಾಗ ವಾತಾವರಣದ ಘರ್ಷಣೆಯಿಂದ ಉತ್ಪನ್ನವಾಗುವ ಉಷ್ಣತೆಯಿಂದಾಗಿ ಉರಿದು ಹೋಗುತ್ತದೆ. ಅದೇನಿದ್ದರೂ, ದೊಡ್ಡದೊಡ್ಡ ಕೃತಕ ಉಪಗ್ರಹಗಳಿಗೆ ಮನುಷ್ಯ ವಾಸಸ್ಥಳಗಳಿಂದ ದೂರದಲ್ಲಿ “ಅಂತಿಮ ಸ್ಥಳ” ಗೊತ್ತುಮಾಡಲಾಗಿದೆ. ಶಾಂತ ಸಾಗರದಲ್ಲಿರುವ ಅದರ ಹೆಸರು “ಆಕಾಶನೌಕೆಗಳ ಸಮಾಧಿಸ್ಥಳ”.

ಬಾಹ್ಯಾಕಾಶದಲ್ಲಿ ಭೂಮಿಯನ್ನು ಸುತ್ತುವ ಗಗನಯಾತ್ರಿಗಳಿಗೆ ಅಲ್ಲಿನ ಭಗ್ನಾವಶೇಷಗಳು ಹೊಸ ಸಮಸ್ಯೆಯೊಂದನ್ನು ಹುಟ್ಟು ಹಾಕಿವೆ: ದೂರದ ನಕ್ಷತ್ರಪುಂಜಗಳನ್ನು ಮತ್ತು ನಕ್ಷತ್ರಗಳನ್ನು ಅಧ್ಯಯನ ಮಾಡಲು ಅವರು ಅವುಗಳಿಂದ ನುಗ್ಗಿ ಬರುವ ಬೆಳಕನ್ನು ಅವಲಂಬಿಸಿದ್ದಾರೆ. ಆದರೆ, ಈಗ ಬಾಹ್ಯಾಕಾಶದ ಭಗ್ನಾವಶೇಷಗಳು ಆ ಬೆಳಕಿನ ವೀಕ್ಷಣೆಗೆ ಅಡ್ದಿಯಾಗುತ್ತಿವೆ. ಅಂತೂ, ಪ್ರಗತಿಯ ವಿಪರ್ಯಾಸಕ್ಕೆ ಒಂದು ಉತ್ತಮ ಉದಾಹರಣೆ: ಬಾಹ್ಯಾಕಾಶದಲ್ಲಿರುವ ಕೃತಕ ಆಕಾಶಕಾಯಗಳ “ಮಾಲಿನ್ಯ".

ಪ್ರಾತಿನಿಧಿಕ ಫೋಟೋಗಳು: ಬಾಹ್ಯಾಕಾಶದಲ್ಲಿ ಕೃತಕ ಆಕಾಶಕಾಯಗಳ ದಟ್ಟಣೆ
ಕೃಪೆ: ಸ್ಪೇಸ್.ಕೋಮ್ ಮತ್ತು ಇಓಎಸ್.ಆರ್ಗ್

Comments

Submitted by Ashwin Rao K P Fri, 06/24/2022 - 09:06

ಬಾಹ್ಯಾಕಾಶದ ಮಾಲಿನ್ಯದ ಅಪಾಯ ದೊಡ್ಡದು

ಲೇಖನದಲ್ಲಿ ತಿಳಿಸಿದಂತೆ ಬಾಹ್ಯಾಕಾಶದಲ್ಲಾಗುವ ಮಾಲಿನ್ಯವನ್ನು ನಾವು ಈಗಲೇ ತಡೆಗಟ್ಟದೇ ಹೋದರೆ ಮುಂದೆ ಭವಿಷ್ಯದಲ್ಲಿ ನಮಗೆ ಬಹುದೊಡ್ಡ ಅಪಾಯವಾಗುವ ಸಾಧ್ಯತೆ ಇದೆ. ಏಕೆಂದರೆ ಬಾಹ್ಯಾಕಾಶದಲ್ಲಿ ಗುರುತ್ವಾಕರ್ಷಣಾ ಶಕ್ತಿ ಇರುವುದಿಲ್ಲ ಅಥವಾ ತುಂಬಾನೇ ಕಡಿಮೆ ಇರುತ್ತದೆ. ಇದರಿಂದಾಗಿ ಅಲ್ಲಿರುವ ಯಾವುದೇ ಮಾಲಿನ್ಯಕಾರಕ ವಸ್ತುಗಳು ನಮ್ಮ ನಿಯಂತ್ರಣದಲ್ಲಿರುವುದಿಲ್ಲ. ನಾವು ಭೂಮಿಯಿಂದ ಹಾರಿಸಿ ಬಿಟ್ಟಿರುವ ಹಲವಾರು ಕೃತಕ ಉಪಗ್ರಹಗಳು ತಮ್ಮ ಕೆಲಸ ಮುಗಿಸಿ ಅಥವಾ ಭೂಮಿಯ ಸಂಪರ್ಕ/ ನಿಯಂತ್ರಣ ತಪ್ಪಿಹೋಗಿ ತಿರುಗಾಡುತ್ತಲೇ ಇವೆ. ಇದೆಲ್ಲವೂ ಮುಂದೊಂದು ದಿನ ನಮಗೆ ಬಹಳ ದೊಡ್ಡ ಕಂಟಕವಾಗುವ ಲಕ್ಷಣ ಇದೆ.

ಸಕಾಲಿಕ ಲೇಖಕ. ಬರೆದ ಲೇಖಕರಿಗೆ ಧನ್ಯವಾದಗಳು.