ಬಾಹ್ಯಾಕಾಶಯಾನಕ್ಕೆ ಖಾಸಗಿ ರಂಗ

ಬಾಹ್ಯಾಕಾಶಯಾನಕ್ಕೆ ಖಾಸಗಿ ರಂಗ

ಬಾಹ್ಯಾಕಾಶಯಾನಕ್ಕೆ ಖಾಸಗಿ ರಂಗ

ಬಾಹ್ಯಾಕಾಶಯಾನಕ್ಕೆ ಖಾಸಗಿ ರಂಗ

ಇದುವರೆಗೆ ಬಾಹ್ಯಾಕಾಶಯಾನದಲ್ಲಿ ಸರಕಾರಿ ಸಂಸ್ಥೆಗಳು ಮಾತ್ರಾ ಭಾಗವಹಿಸಿವೆ.ಅದೂ ಕೂಡಾ ಅಮೆರಿಕಾ,ರಶ್ಯಾ,ಜಪಾನ್,ಚೀನಾ,ಭಾರತದ ಸರಕಾರಿ ಸಂಸ್ಥೆಗಳಿಗೇ ಸೀಮಿತ.ಇದೇ ಮೊದಲ ಬಾರಿಗೆ ಬಾಹ್ಯಾಕಾಶಕ್ಕೆ ವಾಹನವೊಂದನ್ನು ಕಳುಹಿಸಿ,ಅದನ್ನು ಭೂಮಿಯ ಸುತ್ತು ಪ್ರದಕ್ಷಿಣೆ ಬರಿಸಿ,ಬಳಿಕ ಶಾಂತಸಾಗರದಲ್ಲಿ ನಿಗದಿತ ಸ್ಥಾನದಲ್ಲಿ ಇಳಿಸಲು ಖಾಸಗಿ ಕಂಪೆನಿಯಾದ ಸ್ಪೇಸೆಕ್ಸ್ ಸಫಲವಾಗಿದೆ.ಆ ಹೊತ್ತು,ಕಂಪೆನಿಯ ಸಿ ಇ ಓ ಮಸ್ಕ್ ಆನಂದದಿಂದ ಮಾತು ಹೊರಡದಂಥಹ ಸ್ತಿತಿಯಲ್ಲಿದ್ದುದು ಸಹಜವೇ ಆಗಿತ್ತು.ಸ್ಪೇಸ್ ಎಕ್ಸ್‌ಪ್ಲೋರೇಶನ್ ಟೆಕ್ನಾಲಜೀಸ್ ಇಂಕ್ ಎನ್ನುವುದು ಕಂಪೆನಿಯನ್ನು ಸಂಕ್ಷಿಪ್ತವಾಗಿ ಸ್ಪೇಸೆಕ್ಸ್ ಎನ್ನುತ್ತಾರೆ.ಕಂಪೆನಿ ಕಳುಹಿಸಿದ ಕ್ಯಾಪ್ಸೂಲ್ ಭೂಮಿಗೆ ಎರಡು ಬಾರಿ ಸುತ್ತಿ,ಶಾಂತ ಸಾಗರದ ತನ್ನ ಗುರಿಯಿಂದ ಕೆಲವೇ ದೂರ ಅಂತರದಲ್ಲಿ ರೈಳಿಯಿತು.ಗಗನಯಾತ್ರಿಗಳಿದ್ದರೆ,ಅವರನ್ನು ಬಾಹ್ಯಾಕಾಶದ ಅಂತಾರ್ರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಇಳಿಸಲು ಯಾವ ಸಮಸ್ಯೆಯೂ ಆಗುತ್ತಿರಲಿಲ್ಲ.ಇನ್ನು ಮುಂದೆ ಸ್ಪೇಸ್ ಶಟಲ್ ಅಂತಹ ದುಬಾರಿ ಪ್ರಯೋಗಗಳನ್ನು ಮುಂದುವರಿಸದಿರಲು ನಾಸಾ ಕೈಗೊಂಡ ನಿರ್ಧಾರದ ನಂತರ ಇಂತಹ ಕ್ಯಾಪ್ಸೂಲುಗಳನ್ನು ಬಳಸಿ,ಅಂತಾರ್ರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಗಗನಯಾತ್ರಿಗಳನ್ನು ಮತ್ತು ಸಾಮಗ್ರಿಗಳನ್ನು ಕಳುಹಿಸುವುದು ಅನಿವಾರ್ಯವಾಗಿದೆ.ಇದು ಸ್ಪೇಸ್ ಶಟಲ್‌ಗೆ ಹೋಲಿಸಿದರೆ ಕಡಿಮೆ ಖರ್ಚಿನ ದಾರಿಯಾಗಿದೆ.ಇದರಲ್ಲಿ ಬಾಹ್ಯಾಕಾಶಯಾನಿಗಳನ್ನು ಕೊಂಡೊಯ್ಯಬಹುದು.ಕ್ಯಾಪ್ಸೂಲಿನಲ್ಲಿ ಜೀವರಕ್ಷಕ ಸವಲತ್ತುಗಳನ್ನು ಕಲ್ಪಿಸಬೇಕಾಗುತ್ತದೆ.ಹೆಲಿಪ್ಯಾಡಿನಷ್ಟು ವಿಶಾಲ ಪ್ರದೇಶಗಳಲ್ಲಿ ನಿಖರವಾಗಿ ಇಳಿಸುವ ವ್ಯವಸ್ಥೆ ಹೊಂದಿರಬೇಕಾಗುತ್ತದೆ.ಸ್ಪೇಸೆಕ್ಸ್ ಬರೇ ಸಾವಿರದಿನ್ನೂರು ಜನರ ಬೆಂಬಲದೊಂದಿಗೆ ಕಾರ್ಯಾಚರಿಸುತ್ತದೆ.ಅಂತಾರ್ರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಅಮೆರಿಕಾದ ಗಗನಯಾತ್ರಿಗಳನ್ನು ಕಳುಹಿಸಲು,ನಾಸಾವೀಗ ರಶ್ಯಾದ ಸಹಾಯ ಪಡೆದುಕೊಳ್ಳಬೇಕಿದೆ.ಇದು ಬಹು ದುಬಾರಿ ವೆಚ್ಚದಲ್ಲಿ ಲಭ್ಯವಿದೆ.ಓರ್ವನನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಇಪ್ಪತ್ತಾರು ದಶಲಕ್ಷ ಡಾಲರು ಖರ್ಚು ಬರುತ್ತದೆ.ಮುಂದಿನ ವರ್ಷ ವೆಚ್ಚ ಎರಡು ಪಟ್ಟಾಗಲಿದೆ.ಖಾಸಗಿ ಕಂಪೆನಿಗಳು ಈ ಸೇವೆ ಒದಗಿಸುವಂತಾದರೆ,ಬೇರೆ ಬೇರೆ ಕಂಪೆನಿಗಳಿಗೆ ಬೇರೆ ಬೇರೆ ಹೊಣೆ ಹೊರಿಸುವುದು ನಾಸಾದ ಯೋಚನೆ.ತನ್ನ ಪ್ರಯೋಗಗಳನ್ನು ಮಂಗಳ ಗ್ರಹ,ಕ್ಷುದ್ರಗ್ರಹಗಳ ಅಧ್ಯಯನದತ್ತ ಹೆಚ್ಚಿಸುವುದು ನಾಸಾದ ಚಿಂತನೆಯಾಗಿದೆ.
-------------------------------------
ಗೂಗಲ್:ಕ್ರೋಮ್ ಓಎಸ್,ನೋಟ್‌ಬುಕ್
ಗೂಗಲ್ ತನ್ನ ಕ್ಲೌಡ್ ಕಂಪ್ಯೂಟಿಂಗ್‌ಗೆ ಹೊಂದಿಕೊಳ್ಳುವ ಕ್ರೋಮ್ ಕಾರ್ಯನಿರ್ವಹಣಾ ವ್ಯವಸ್ಥೆಯನ್ನು ಹೊರತಂದಿದೆ.ಕ್ಲೌಡ್ ಕಂಪ್ಯೂಟಿಂಗಿನಲ್ಲಿ ಅಂತರ್ಜಾಲದಲ್ಲಿನ ಸವಲತ್ತುಗಳನ್ನು ಬಳಸಿಕೊಳ್ಳುವ ಪ್ರಯತ್ನ ನಡೆಯುತ್ತದೆ.ಬ್ರೌಸರ್ ಅವಲಂಬಿತ ಕಂಪ್ಯೂಟರ್ ಬಳಕೆಯೇ ಗುರಿಯಾದ ಕಾರಣ,ಕ್ರೋಮ್ ಓಎಸ್‌ನಲ್ಲಿ ಎದ್ದು ಕಾಣುವುದು ಬ್ರೌಸರ್ ಮಾತ್ರಾ.ಹಾಡು ಕೇಳುವ ತಂತ್ರಾಂಶವನ್ನು ತೆರೆದರೂ,ಅದು ಬ್ರೌಸರ್ ಟ್ಯಾಬ್ ಆಗಿ ತೆರೆದುಕೊಳ್ಳುತ್ತದೆ!ಇನ್ನು ಪದಸಂಸ್ಕಾರಕ ಕಡತಗಳನ್ನು ತೆರೆಯಲು ಗೂಗಲ್ ಡಾಕ್ಸ್ ಸಹಾಯ ಬೇಕು-ಅಂದರೆ ನೀವು ಅಂತರ್ಜಾಲಕ್ಕೆ ಸಂಪರ್ಕ ಹೊಂದಿರಬೇಕು.ಸ್ಮರಣಕೋಶಗಳಿಗೆ ಅಥವಾ ತಂತ್ರಾಂಶಗಳಿಗಿರಲಿ ಅಂತರ್ಜಾಲವನ್ನೇ ಅವಲಂಬಿಸುವುದೇ ಈ ಹೊಸ ಪರಿಯ ಕಂಪ್ಯೂಟಿಂಗಿನ ಧ್ಯೇಯವಾದ ಕಾರಣ,ಗೂಗಲ್ ಒಎಸ್‌ನಿಂದ ಹೆಚ್ಚಿನ ನಿರೀಕ್ಷೆಯೂ ಇಲ್ಲ.ಇನ್ನು ಗೂಗಲ್ ಬಿಡುಗಡೆ ಮಾಡಿದ ಯಂತ್ರಾಂಶ Cr 48 ಎಂಬ ಹೆಸರಿನಿಂದ ಪರೀಕ್ಷಾರ್ಥ ಬಳಕೆಗೆ ಸಿದ್ಧವಾಗಿಸಲಾಗಿರುವ ನೋಟ್‌ಬುಕ್.ಆಯ್ದ ತಂತ್ರಜ್ಞರಿಗೆ ಇದನ್ನು ಗೂಗಲ್ ಒದಗಿಸುತ್ತಿದೆ.ಇದು ಬಹಳ ಸರಳ ನೋಟ್‌ಬುಕ್.ಕೀಲಿ ಮಣೆ,ಮೌಸ್ ಕೂಡಾ ಇದ್ದು,ಯುಎಸ್‌ಬಿ,ಮೆಮರಿ ಕಾರ್ಡ್ ನಂತಹ ಪೋರ್ಟ್‌ಗಳನ್ನೂ ಹೊಂದಿದೆ.ಕ್ಯಾಪ್ಸ್‌ಲಾಕ್ ಕೀಲಿಯು ಇದರಲ್ಲಿಲ್ಲದಿರುವುದು ಗಮನಿಸಬೇಕಾದ ಅಂಶವಾಗಿದೆ.ಇದೀಗ ಶೋಧ ಸೇವೆ ಒದಗಿಸುವ ಕೀಲಿಯಾಗಿ ಬಿಟ್ಟಿದೆ.ಇದನ್ನೊತ್ತಿದರೆ,ಬ್ರೌಸರಿನ ಶೋಧ ಪುಟ ತೆರೆದುಕೊಳ್ಳುತ್ತದೆ.ಫಂಕ್ಷನ್ ಕೀಲಿಗಳ ಬದಲಿಗೆ ಬ್ರೌಸರ್ ನಿಯಂತ್ರಣ ಕೀಲಿಗಳಿವೆ.ಮೌಸ್‌ನ ಕಾರ್ಯನಿರ್ವಹಣೆ ಇನ್ನೂ ಸಮರ್ಪಕವಾಗಿಲ್ಲ,ಅಂತರ್ಜಾಲದ ಹಲವು ಬಹುಮಾಧ್ಯಮ ವಿಷಯ ಇರುವ ಅಂತರ್ಜಾಲ ತಾಣಗಳೂ ತೆರೆದು ಕೊಳ್ಳುವಾಗ,ತುಸು ನಿಧಾನವಾಗುವುದು ಮುಂತಾದ, ಸಣ್ಣಪುಟ್ಟ ತೊಂದರೆಗಳು ಎದ್ದು ಕಾಣಿಸುತ್ತವೆ ಎಂದು ಪರೀಕ್ಷಕರ ವರದಿಗಳು ಹೇಳುತ್ತವೆ.
ಕ್ರೋಮ್ ಓಎಸ್‌ನಲ್ಲಿ ಕಂಪ್ಯೂಟರಿನಲ್ಲಿ ಬಳಕೆಯ ಸಮಗ್ರ ನೋಟ ನೀಡುವ ಸವಲತ್ತು ಇದೆ.ಒಂದು ಕೆಲಸ ಮಾಡುತ್ತಿರುವಾಗ ಇನ್ನೊಂದು ಕೆಲಸ ಮಾಡಲು ಅನುವಾಗಿಸಲಾಗಿದೆ.ಉದಾಹರಣೆಗೆ ಅಂತರ್ಜಾಲ ಪುಟವನ್ನು ನೋಡುತ್ತಿರುವಾಗಲೇ ಇತರರೊಡನೆ ಚಾಟಿಂಗ್ ನಡೆಸಲು,ಅಥವಾ ಹಾಡಿನ ಧ್ವನಿ ಏರಿಳಿಸಲು ಸಾಧ್ಯವಾಗುತ್ತದೆ.ಮುಂದಿನ ಅವತರಣಿಕೆಗಳಲ್ಲಿ,ಗೂಗಲ್ ಕ್ರೋಮ್ ಓಎಸ್ ಮತ್ತು ಯಂತ್ರಾಂಶ ಎರಡೂ ಕೂಡಾ ಸುಧಾರಿಸುವುದು ನಿಶ್ಚಿತ.
----------------------------------------------
ವರ್ಷದ ಶೋಧ
ವರ್ಷದ ಕೊನೆ ಮುಟ್ಟುತ್ತಿರುವಂತೆಯೇ ಈ ವಶ ಜನರು ಯಾವುದರ ಬಗ್ಗೆ ಹೆಚ್ಚು ಗೂಗಲ್ ಶೋಧ ಸೇವೆಯಲ್ಲಿ ಹುಡುಕಾಡಿದರು ಎನ್ನುವುದನ್ನು ಗೂಗಲ್ ಹೇಳಿಕೊಳ್ಳುತ್ತಿದೆ.ಐಪ್ಯಾಡ್,ಚ್ಯಾಟ್‌ರೌಲೆಟ್ ಎನ್ನುವ ವಿಡಿಯೋ ಚ್ಯಾಟ್ ತಾಣಗಳ ಬಗ್ಗೆ ಜನ ಹೆಚ್ಚು ಶೋಧಿಸುತ್ತಿದ್ದಾರೆ.ಕಳೆದ ವರ್ಷದ ಸ್ವೈನ್ ಫ್ಲೂ,ಜಾಕ್ಸನ್ ಮುಂತಾದ ಶೋಧಗಳು ಈಗ ಹಿಂದೆ ಸರಿದಿವೆ.
-----------------------------------
ಉದಯವಾಣಿ ಡೈರಿ ಗೆಲ್ಲಿ!
ಈ ಪ್ರಶ್ನೆಗಳಿಗೆ ಸರಿಯುತ್ತರ ಕಳಿಸಿ,ಉದಯವಾಣಿ ಡೈರಿ ಗೆಲ್ಲಿ.ಬಹುಮಾನ ಪ್ರಾಯೋಜಿಸಿದವರು ಅಂಬಲ್ಪಾಡಿಯ ನಿವೃತ್ತ ಬ್ಯಾಂಕರ್ ಎ ಎಸ್ ಕಲ್ಲೂರಾಯ.
*ಮಿರರ್ ಸೈಟ್ ಎಂದರೇನು?ಇದಕ್ಕೆ ಕನ್ನಡ ಪದ ಸೂಚಿಸಿ.
*ಹ್ಯಾಕರ್ ಎಂದರೆ ಯಾರು? ಪದಕ್ಕೆ ಕನ್ನಡ ಪದ ಸೂಚಿಸಿ.
(ಉತ್ತರಗಳನ್ನು ashok567@gmail.comಗೆ ಮಿಂಚಂಚೆ ಮಾಡಿ,ವಿಷಯ:NS9 ನಮೂದಿಸಿ ).
(ಕಳೆದ ವಾರದ ಸರಿಯುತ್ತರಗಳು:
*ಸಿಲ್ವರ್ ಲೈಟ್ ಅಂದರೆ ಮೈಕ್ರೊಸಾಫ್ಟ್ ಕಂಪೆನಿಯ ಸುಲಭವಾಗಿ ಅಭಿವೃದ್ಧಿ ಪಡಿಸಲಾಗುವ,ಸಂವನಶೀಲ ಅಂತರ್ಜಾಲ,ಮೊಬೈಲ್ ಮತ್ತು ಡೆಸ್ಕ್‌ಟಾಪ್ ಅಪ್ಲಿಕೇಶನ್ ರಚಿಸಲು ಅನುವು ಮಾಡುವ ಚೌಕಟ್ಟು.
*ಈ ಅಂಕಣದ ಬರಹಗಳಿರುವ ಬ್ಲಾಗ್ http://ashok567.blogspot.com,ಬಹುಮಾನ ಗೆದ್ದ ಶ್ರೀಶೈಲ ಭಟ್ಟರವರಿಗೆ ಅಭಿನಂದನೆಗಳು.)
------------------------------------------------------------
ವಿಕಿ ಲೀಕ್ಸ್:ಅಪಾಯಕಾರಿ?
ಅಮೆರಿಕಾದ ಇರಾಕ್,ಅಪ್ಘಾನ ರಹಸ್ಯಗಳನ್ನು ಬಯಲು ಮಾಡಿ,ಹಲವಾರು ರಹಸ್ಯ ಕೇಬಲ್ ಸಂದೇಶಗಳನ್ನು ಬಯಲು ಮಾಡಿ ಸುದ್ದಿಗೆ ಬಂದ ವಿಕಿ ಲೀಕ್ಸ್‌ಯ ಮುಖ್ಯಸ್ಥನ ಹೆಸರಿಗೆ ಮಸಿ ಬಳಿಯಲು,ಆತನನ್ನು ಲೈಂಗಿಕ ಪ್ರಕರಣದಲ್ಲಿ ಸಿಕ್ಕಿಸಲಾಯಿತೇ?ಈ ಸಂಶಯ ಹಲವರನ್ನು ಬಾಧಿಸುತ್ತಿದೆ.ವಿಕಿಲೀಕ್ಸ್‌ನ ಮುಖ್ಯಸ್ಥ ಅಸಾಂಗೆ ಆಸ್ಟೇಲಿಯನ್ ಮೂಲದವರು.ಆತನು ತನ್ನ ಇಪ್ಪತ್ತನೇ ವಯಸ್ಸಿನಲ್ಲಿಯೇ ಕೆನಡಾದ ಟೆಲಿಕಾಂ ಕಂಪೆನಿಯ ಅಂತರ್ಜಾಲ ತಾಣವನ್ನು ಬೇಧಿಸಿ,ಕ್ರಿಮಿನಲ್ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಂಡಾತ.ಕಂಪ್ಯೂಟರ್ ಮಟ್ಟಿಗೆ ಹ್ಯಾಕರ್ ಎನ್ನುವ ಹೆಗ್ಗಳಿಕೆ ಈತನದ್ದು.ವಿಕಿಲೀಕ್ಸ್‌ನ ಮೂಲ ಯಾವುದು ಎನ್ನುವುದು ಸ್ಪಷ್ಟವಿಲ್ಲ.ಆದರೆ ವಿಕಿಲೀಕ್ಸ್‌ಗೆ ಸಾವಿರದೈನೂರು ಪ್ರತಿಕೃತಿ ಅಂತರ್ಜಾಲ ತಾಣಗಳಿವೆ.ಅದರ ಬಳಕೆದಾರರಿಗೆ ಈ ಸಾವಿರದೈನೂರು ಸೈಟುಗಳಲ್ಲಿ ಯಾವುದಾದರೂ ಮೂಲದಿಂದ ತಾಣದ ಮಾಹಿತಿ ಲಭ್ಯವಾಗುತ್ತದೆ.ಅಲ್ಲದೆ ಹಲವಾರು ಸರ್ವರ್‌ಗಳು ಇರುವ ಕಾರಣ,ಇದರ ಕಾರ್ಯಾಚರಣೆಯನ್ನು ಸುಲಭವಾಗಿ ನಿಲ್ಲಿಸುವುದು ಕಷ್ಟ.ಸೈಬರ್ ಸಮರದ ಮೂಲಕ ವಿಕಿಲೀಕ್ಸ್‌ನ್ನು ಮಣಿಸುವುದು ಸುಲಭವಲ್ಲ.ಅದು ಮಾಹಿತಿಯನ್ನು ಗೂಢಲಿಪಿಯಲ್ಲಿ ಕಾಪಾಡಿಕೊಳ್ಳಲು ಸಮರ್ಥವಾಗಿದೆ.ಅಸಾಂಗೆಗೆ ಹ್ಯಾಕರುಗಳ ಬೆಂಬಲ ಸಿಗುತ್ತಿದೆ.ಆದರೆ ಆತನ ಜತೆ ಕೆಲಸ ಮಾಡಿದ್ದವರು,ಆತನ ಹಿಟ್ಲರ್‌ನಂತಹ ಸರ್ವಾಧಿಕಾರಿ ಪ್ರವೃತ್ತಿಯ ಬಗ್ಗೆ ದೂರಿಕೊಂಡದ್ದೂ ಇದೆ.ವಿಕಿಲೀಕ್ಸ್ ತಾಣದ ಭವಿಷ್ಯ ಏನು ಎಂಬುದು ಮಸುಕಾಗಿದೆ.ಆರೋಪದ ವಿಚಾರಣೆ ಎದುರು ನೋಡುತ್ತಿರುವ ಅಸಾಂಗೆಗೆ ಈಗ ಕಂಪ್ಯೂಟರ್ ಕೂಡಾ ಲಭ್ಯವಿಲ್ಲ.ತನ್ನಲ್ಲಿ ಬ್ಯಾಂಕ್ ಆಫ್ ಅಮೆರಿಕಾ ಬಗ್ಗೆ ಒಂದು ಹಾರ್ಡ್‌ಡಿಸ್ಕ್ ತುಂಬಾ ಮಾಹಿತಿಯಿದ್ದು,ಅದು ಬಹಳಷ್ಟು ಸ್ಫೋಟಕ ಮಾಹಿತಿಯನ್ನು ಹೊಂದಿದೆ ಎಂದು ಅಸಾಂಗೆ ಹೇಳಿಕೊಂಡಿದ್ದಾರೆ.
-------------------------------
*ಅಶೋಕ್‌ಕುಮಾರ್ ಎ

Comments