ಬಾಹ್ಯಾಕಾಶ ಯಾನ,ಖಾಸಗಿ ಕೈಗೆ
ಫೇಸ್ಬುಕ್:ಯಶಸ್ವಿ ಐಪಿಓ
ಫೇಸ್ಬುಕ್ ಕಂಪೆನಿಯು ತನ್ನ ಶೇರುಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡುವ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿದೆ.ಕಂಪೆನಿಯು ಮೂವತ್ತೆಂಟು ಡಾಲರು ಬೆಲೆಯಲ್ಲಿ ಒದಗಿಸಿದ ಶೇರುಗಳನ್ನು ಅಮೆರಿಕನ್ನರು ಮುಗಿಬಿದ್ದು ಖರೀದಿಸಿದರುಮೊನ್ನೆ ಶುಕ್ರವಾರ,ಶೇರುಗಳನ್ನು ಶೇರು ಮಾರುಕಟ್ಟೆಯಲ್ಲಿ ಪಟ್ಟಿ ಮಾಡಿದಾಗ,ಶೇರುಗಳ ವ್ಯವಹಾರ ದಾಖಲೆ ಸಂಖ್ಯೆಯಲ್ಲಿ ಆಗಿದ್ದು,ಜನರು ಫೇಸ್ಬುಕ್ ಶೇರುಗಳ ಬಗ್ಗೆ ಭರವಸೆ ಹೊಂದಿದ್ದಾರೆನ್ನುವುದನ್ನು ಸ್ಪಷ್ಟವಾಗಿ ತೋರಿಸಿತು.ಅದರ ಬೆಲೆ ನಿರೀಕ್ಷಿಸಿದಷ್ಟು ಏರಲಿಲ್ಲವಾದರೂ,ಇಂದಿನ ಅನಿಶ್ಚಿತ ಆರ್ಥಿಕ ಪರಿಸ್ಥಿಯ ನಡುವೆಯೂ ಐಪಿಓ,ಜನರ ಉತ್ಸಾಹದ ಪ್ರತಿಕ್ರಿಯೆ ಗಳಿಸಲು ಯಶಸ್ವಿಯಾದದ್ದು ಕಡಿಮೆ ಸಾಧನೆಯೇನೂ ಅಲ್ಲ.ನಲುವತ್ತೊಂದು ಡಾಲರುಗಳಿಗೆ ಏರಿ,ನಂತರ ಐಪಿಓದ ದರಕ್ಕಿಂತ ತುಸುವೇ ಮೇಲಿನ ದರದಲ್ಲಿ ಪೇಸ್ಬುಕ್ ಶೇರು ವಹಿವಾಟು ಮುಗಿಸಿತು.
-------------------------------------------------
ಗೂಗಲ್ ಶೋಧ:ಮತ್ತಷ್ಟು ಅನುಕೂಲಕರ
ಗೂಗಲ್ ವಿವಿಧ ಸೇವೆಗಳನ್ನು ಒದಗಿಸುವುದಷ್ಟೇ ಅಲ್ಲದೆ,ಅವನ್ನು ಒಂದೇ ಸವನೆ ಅನುಕೂಲಕರವಾಗಿಸುವುದನ್ನೂ ಹವ್ಯಾಸವಾಗಿಸಿಕೊಂಡಿದೆ.ತನ್ನ ಮುಖ್ಯ ಸೇವೆಯಾದ ಶೋಧ ಸೇವೆಯಲ್ಲಿ ಪದಪುಂಜವನ್ನು ಟೈಪಿಸಲು ಆರಂಭಿಸಿದೊಡನೆಯೇ,ನೀವು ಯಾವ ಪದಪುಂಜವನ್ನು ಕೀಲಿಸುತ್ತಿರಬಹುದು ಎನ್ನುವುದನ್ನು ಮುಂದಾಗಿಯೇ ಊಹಿಸಿ,ದಿಡೀರ್ ಫಲಿತಾಂಶಗಳನ್ನು ತೋರಿಸುವಂತಹ ಸ್ಮಾರ್ಟ್ ಶೋಧ ಒದಗಿಸಿದ ಮೊದಲ ಶೋಧ ಸೇವೆ ಗೂಗಲ್ ಎನ್ನುವುದನ್ನು ಮರೆಯಲಾಗದು.ಈಗ ಬಳಕೆದಾರ ಪದಪುಂಜವನ್ನು ನೀಡಿದಾಗ,ಅದು ಸಂಬಂಧಿಸಿದ ವಿವಿಧ ಕ್ಷೇತ್ರಗಳನ್ನು ಬಲಭಾಗದಲ್ಲಿ ತೋರಿಸಿ,ಆತನ ಆಸಕ್ತಿ ಯಾವ ವರ್ಗದ್ದು ಎನ್ನುವುದನ್ನು ತಿಳಿಯಪಡಿಸಲು ಗೂಗಲ್ ಶೋಧ ಅವಕಾಶ ನೀಡುತ್ತದೆ.ಉದಾಹರಣೆಗೆ ತೆಂಡೂಲ್ಕರ್ ಎಂದು ಟೈಪಿಸಿದಾಗ,ಬಳಕೆದಾರ ಕ್ರಿಕೆಟಿಗ ತೆಂಡೂಲ್ಕರ್ ಬಗ್ಗೆ ಅರಿಯಬೇಕೆಂದಿದ್ದಾನೆಯೇ,ಅಲ್ಲ ಆತನ ಆಸಕ್ತಿ ನಾಟಕಕಾರ ತೆಂಡೂಲ್ಕರ್ ಬಗ್ಗೆಯೇ, ಅಲ್ಲ ಬರಹಗಾರ ತೆಂಡೂಲ್ಕರ್ ಬಗ್ಗೆಯೇ ಎನ್ನುವುದನ್ನು ವಿಷದಪಡಿಸಲು ಅವಕಾಶ ಸಿಗುತ್ತದೆ.
--------------------------------------------------------
ನಿಸ್ತಂತು ವೈದ್ಯಕೀಯ ಪರಿವೀಕ್ಷಣೆಗೆ ಸ್ಪೆಕ್ಟ್ರಮ್
ಅಮೆರಿಕಾದ ಫೆಡರಲ್ ಕಮ್ಯುನಿಕೇಷನ್ ಕಮಿಷನ್(ಎಫ್ಸಿಸಿ) ನಿಸ್ತಂತು ವೈದ್ಯಕೀಯ ಪರಿವೀಕ್ಷಣೆಗಾಗಿಯೇ ಮಿಸಲಿರಿಸಿದ ಸ್ಪೆಕ್ಟ್ರಮ್ನ್ನು ಬಳಕೆಗೆ ಒದಗಿಸಿದೆ.ಟೂಜಿ,ತ್ರೀಜಿ ಸೇವೆಗಳಿಗೆ ಸ್ಪೆಕ್ಟ್ರಮ್ ನೀಡಿದಂತೆ,ಸೆನ್ಸರುಗಳ ಮೂಲಕ ದೇಹದ ಶಾಖ,ರಕ್ತದೊತ್ತಡ,ಗ್ಲುಕೋಸ್ ಮಟ್ಟ ಮುಂತಾದ ವಿವಿಧ ಅಂಶಗಳ ಮೇಲೆ ಕಣ್ಣಿರಿಸಿ,ಅವನ್ನು ಒಂದು ಸಾಧನದ ಮೂಲಕ ಕಂಪ್ಯೂಟರ್ ಜಾಲಕ್ಕೆ ರವಾನಿಸಲು ಸ್ಪೆಕ್ಟ್ರಮ್ ಕಾಯ್ದಿರಿಸಲದು ತೀರ್ಮಾನಿಸಿತು.ಈ ಸ್ಪೆಕ್ಟ್ರಮ್ ಕಡಿಮೆ ಆವರ್ತ ಸಂಖ್ಯೆ ಹೊಂದಿದ್ದು,ದೇಹಕ್ಕೆ ಹಾನಿತಾರದು.ಅಂದ ಹಾಗೆ ಸೆನ್ಸರುಗಳನ್ನು ದೇಹಕ್ಕೆ ಬ್ಯಾಂಡ್ಏಡ್ ಅಂತಹ ಪಟ್ಟಿಯನ್ನು ಅಂಟಿಸುವ ಮೂಲಕ ಅಳವಡಿಸಬಹುದು.ಈ ಸಂವೇದಕಗಳು ತುಸು ಶಕ್ತಿ ನೀಡುವ ಬ್ಯಾಟರಿಗಳನ್ನು ಹೊಂದಿರುತ್ತವೆ.ಸತತವಾಗಿ ದೇಹದ ಪರಿಸ್ಥಿತಿಯನ್ನು ಅವಲೋಕಿಸ ಬೇಕಿರುವಂತಹ ತುರ್ತು ಸ್ಥಿತಿ ಇದ್ದಾಗ,ಇವು ಬಹು ಪ್ರಯೋಜನಕಾರಿಯಾಗ ಬಲ್ಲುವು.
----------------------------------------------------
ಯೋಜನೆಗೆ ಬಂಡವಾಳ:ಜನರಿಂದಲೇ ಹೂಡಿಕೆ
ಉತ್ತಮ ಯೋಜನೆಯಿದೆ,ಅದಕ್ಕೆ ಬಂಡವಾಳ ಹೂಡಲು ಹಣವಿಲ್ಲ ಎನ್ನುವ ಚಿಂತೆಯಾದರೆ,ಈಗದಕ್ಕೆ ಇಂಟರ್ನೆಟ್ ಮೂಲಕ ಬಂಡವಾಳ ಒಟ್ಟುಗೂಡಿಸಲು ಸಾಧ್ಯವಿದೆ.ಕ್ರೌಡ್ಫಂಡಿಂಗ್ ಎನ್ನುವ ಹೊಸ ವ್ಯವಸ್ಥೆಯಲ್ಲಿ ಯೋಜನೆಯ ಬಗ್ಗೆ ವಿವರಗಳನ್ನು ಜನರ ಮುಂದಿರಿಸಲು ಅವಕಾಶ ನೀಡುವ ಇಂಟರ್ನೆಟ್ ವೆಬ್ಸೈಟುಗಳಿವೆ.ಇಲ್ಲಿ ಯೋಜನೆಯ ವಿವರಗಳನ್ನು ನೋಡಿದವರು ಇಚ್ಚಿಸಿದಲ್ಲಿ,ಯೋಜನೆಗೆ ಬಂಡವಾಳ ಹೂಡಲು ಅನುಕೂಲತೆಯಿದೆ.ಹನಿಹನಿಕೂಡಿದರೆ ಹಳ್ಳ,ತೆನೆತೆನೆ ಕೂಡಿದರೆ ಬಳ್ಳ ಎನ್ನುವಂತೆ ಅಲ್ಪಮೊತ್ತವನ್ನು ಲಕ್ಷಾಂತರ ಜನರಿಂದ ಸಂಗ್ರಹಿಸಿ,ದೊಡ್ಡ ಮೊತ್ತವನ್ನು ಒಟ್ಟುಗೂಡಿಸುವುದೇ ಕ್ರೌಡ್ಫಂಡಿಂಗ್ ವ್ಯವಸ್ಥೆಯಾಗಿದೆ.ಪ್ಲೆಜ್ಮ್ಯೂಸಿಕ್,ಇಂಡಿಗೋಗೋ,ಫ್ಲಾಟ್ರ್ ಮುಂತಾದ ತಾಣಗಳಲ್ಲಿ ಕ್ರೌಡ್ಫಂಡಿಂಗ್ ಸಾಧ್ಯ.ಹೀಗೆ ಸಂಗ್ರಹಿಸಿದ ಹಣವನ್ನು ಸೂಕ್ತವಾಗಿ ಹೂಡಿ,ಯೋಜನೆಗಳನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಿದಾಗ ಮಾತ್ರಾ ಇಂತಹ ವ್ಯವಸ್ಥೆಗಳು ಜನರ ವಿಶ್ವಾಸ ಉಳಿಸಿಕೊಳ್ಳಬಹುದು.ಸುಮ್ಮನೆ ಬಂಡವಾಳ ಸ್ಂಗ್ರಹಿಸಿ,ಜನರನ್ನು ದೋಚುವ ಟೋಪಿ ಕಂಪೆನಿಗಳಾದರೆ,ಜನರು ವಿಶ್ವಾಸ ಕಳೆದುಕೊಳ್ಳುವುದು ಖಂಡಿತ.ಕ್ರೌಡ್ಫಂಡಿಂಗ್ ತಾಣವನ್ನು ಬಳಸಿ,ಬಂಡವಾಳ ಸಂಗ್ರಹಿಸುವವರ ಹಿನ್ನೆಲೆಯನ್ನು ತಿಳಿದುಕೊಂಡು, ಅವಕಾಶ ನೀಡುವುದು ಮುಖ್ಯ.ಹೀಗಾಗುವುದು ಸಾಧ್ಯವೇ ಎನ್ನುವುದಕ್ಕೆ ಸುಲಭ ಉತ್ತರವಿಲ್ಲ.ಮ್ಯೂಸಿಕ್ ಆಲ್ಬಮುಗಳನ್ನು ಹೊರಡಿಸಲು,ಆನ್ಲೈನ್ ರೇಡಿಯೋ ಕೇಂದ್ರಗಳನ್ನು ನಡೆಸಲು ಹೀಗೆ ವಿವಿಧ ಯೋಜನೆಗಳ ವಿವರಗಳನ್ನು ತಾಣದಲ್ಲಿ ನೀಡಿ ಹಣ ಸಂಗ್ರಹಿಸುವ ಕಾರ್ಯ ನಡೆಯುತ್ತಿದೆ.
--------------------------------------------
ವಿಸಿಟಿಂಗ್ ಕಾರ್ಡ್:ಫೋಟೊ ಸೆರೆಹಿಡಿದು,ಮಾಹಿತಿ ಸಂಗ್ರಹಿಸಿ
ವಿಸಿಟಿಂಗ್ ಕಾರ್ಡ್ ವಿನಿಮಯ ನಡೆಸಿ,ಪರಸ್ಪರರ ಹೆಸರು,ಪದವಿ,ವಿಳಾಸ ಸಂಪರ್ಕ ಸಂಖ್ಯೆ ಇತ್ಯಾದಿಗಳನ್ನು ಬೇಕಾದಾಗ ಬಳಸಿಕೊಳ್ಳುವುದು ಹಳೆಯ ವಿಧಾನ.ಇ-ವಿಸಿಟಿಂಗ್ ಕಾರ್ಡ್ಗಳ ವಿನಿಮಯವನ್ನು ಮೊಬೈಲ್ ಇಂದ ಮೊಬೈಲಿಗೆ ಮಾಡಿಕೊಳ್ಳಲೂ ಬಹುದು.ಹಳೆಯ ವಿಧಾನದಲ್ಲಿ ನಂಬಿಕೆಯಿಟ್ಟವರು,ಈಗಲೂ ನಿಮಗೆ ವಿಸಿಟಿಂಗ್ ಕಾರ್ಡ್ ನೀಡಬಹುದು.ಅದನ್ನು ಜೋಪಾನ ಪಡಿಸಿ,ಇರಿಸಿಕೊಂಡು ಬೇಕಾದಾಗ ಹುಡುಕುವುದು ತಾಪತ್ರಯವೆನಿಸಿದರೀಗ ಇದನ್ನು ನಿವಾರಿಸಲು ಸುಲಭ ಉಪಾಯವಿದೆ.ಕಾರ್ಡನ್ನು ಕೈಯಲ್ಲಿ ಹಿಡಿದು,ಮೊಬೈಲಿನಲ್ಲಿ ಅದರ ಚಿತ್ರ ಸೆರೆಹಿಡಿಯಿರಿ.ಕಾರ್ಡಿನಲ್ಲಿರುವ ವಿವರಗಳನ್ನು ಮೊಬೈಲಿನ ಅಡ್ರೆಸ್ಬುಕ್ನಲ್ಲಿ ದಾಖಲಾಗಿಸಿ.ಇದನ್ನು ಸಾಧ್ಯವಾಗಿಸುವ ಆಂಡ್ರಾಯಿಡ್ ಫೋನ್ ತಂತ್ರಾಂಶವೀಗ ಅಬ್ಬೀ abbyy ಎನ್ನುವ ಹೆಸರಿನಲ್ಲಿ ಲಭ್ಯವಿದೆ.ಇದನ್ನು ಗೂಗಲ್ ಆಂಡ್ರಾಯಿಡ್ ಫೋನುಗಳಲ್ಲಿ ಅನುಸ್ಥಾಪಿಸಿಕೊಂಡರೆ,ಕಾರ್ಡ್ ಅನ್ನು ಸೆರೆಹಿಡಿದು,ಅದರ ವಿವರಗಳನ್ನು ಸಂಗ್ರಹಿಸಿ,ಕಾರ್ಡನ್ನು ಮರಳಿಸಬಹುದು.ಪೂರ್ತಿ ತಂತ್ರಾಂಶ ಬೇಕಿದ್ದರೆ,ಐನೂರು ರೂಪಾಯಿ ಬಿಚ್ಚಬೆಕು-ಉಚಿತವಾಗಿ ಸರಳ ಆವೃತ್ತಿ ಲಭ್ಯವಿದೆ.
------------------------------------------------------
ಬಾಹ್ಯಾಕಾಶ ಯಾನ,ಖಾಸಗಿ ಕೈಗೆ
ನಿಧಾನವಾಗಿಯಾದರೂ ಖಾಸಗೀಕರಣವು ಬಾಹ್ಯಾಕಾಶಯಾನ ಕ್ಷೇತ್ರವನ್ನು ಪ್ರವೇಶಿಸುತ್ತಿರುತ್ತಿದೆ.ನಾಸಾ,ಇಸ್ರೋ ಹೀಗೆ ಸರಕಾರಿ ನಿಯಂತ್ರಣದಲ್ಲಿರುವ ಸಂಸ್ಥೆಗಳೇ ಬಾಹ್ಯಾಕಾಶ ಯಾನ ಸಾಹಸಗಳನ್ನು ಕೈಗೊಳ್ಳುವುದು ಸಂಪ್ರದಾಯ.ಅದೀಗ ಬದಲಾಗುತ್ತಿದೆ.ಸ್ಪೇಸ್ಕ್ಸ್,ವರ್ಜಿನ್ ಗಲಾಕ್ಟಿಕ್,ಎಕ್ಸ್ಕೋರ್ ಮುಂತಾದ ಕಂಪೆನಿಗಳು ಬಾಹ್ಯಾಕಾಶ ಯಾನವನ್ನು ಸತತವಾಗಿ ಒದಗಿಸಲು ಆಸಕ್ತಿ ಹೊಂದಿವೆ.ಶ್ರೀಮಂತರಿಗೆ ಬಾಹ್ಯಾಕಾಶಯಾನದ ಹುಚ್ಚು ಹಿಡಿಸಿ,ಅಗ್ಗದ ದರದಲ್ಲಿ ಯಾನಗಳನ್ನು ಏರ್ಪಡಿಸಿ,ಬಾಹ್ಯಾಕಾಶ ಕೇಂದ್ರಗಳಲ್ಲಿ ಅವರನ್ನು ಕೆಲದಿನ ಉಳಿಸಿ,ನಂತರ ವಾಪಸ್ಸು ಕರೆತರವ ಯಾನಗಳನ್ನು ನಡೆಸುವುದೀ ಕಂಪೆನಿಗಳ ಕಾರ್ಯವೈಖರಿಯಾಗಲಿದೆ.ರಶ್ಯನ್ನರು ಅಂತಾರಾಷ್ತ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಓರ್ವನನ್ನು ಸಾಗಿಸಲೀಗ ಅರುವತ್ತು ದಶಲಕ್ಷ ಡಾಲರು ವಿಧಿಸುತ್ತಾರೆ.ಐದು ದಶಲಕ್ಷ ಡಾಲರುಗಳಿಗೆ ಈ ಮೊತ್ತವನ್ನು ಇಳಿಸಲು ಹೆಚ್ಚೆಚ್ಚು ಜನರನ್ನು ಅಲ್ಲಿಗೆ ಸಾಗಿಸಬೇಕು.ವೈಜ್ಞಾನಿಕ ಸಂಶೋಧನೆಗಳ ಬದಲಿಗೆ,ಜಾಲಿ ರೈಡುಗಳನ್ನು ಏರ್ಪಡಿಸುವುದೇ ಇದಕ್ಕಿರುವ ಸುಲಭೋಪಾಯ.ಜತೆಗೆ ಬಳಸಿ ಮೂಲೆಗೆಸೆಯುವ ವಾಹನಗಳ ಬದಲಿಗೆ ಸ್ಪೇಸ್ಶಟಲ್ ಅಂತಹ ವಾಹನಗಳನ್ನು ಬಳಸುವುದು ಅನಿವಾರ್ಯವಾಗಿದೆ.
-----------------------------------------------------
ವಿಂಡೋಸ್ 8:ಸುಭದ್ರ
ವಿಂಡೋಸ್ 8 ಮೈಕ್ರೊಸಾಫ್ಟ್ ಕಂಪೆನಿಯ ಹೊಸ ಆಪರೇಟಿಂಗ್ ವ್ಯವಸ್ಥೆಯೆನ್ನುವುದು ತಮಗೆ ಗೊತ್ತಿರಬಹುದು.ಇದರಲ್ಲಿ ಹೊಸತೇನಾದರೂ ಇದೆಯೇ ಎನ್ನುವುದು ಬಳಕೆದಾರರ ಮಾಮೂಲಿ ಪ್ರಶ್ನೆಯಾಗಿರುತ್ತದೆ.ವಿಂಡೋಸ್ 8ರಲ್ಲಿ ಆಂಟಿವೈರಸ್ ತಂತ್ರಾಂಶವನ್ನು ಒದಗಿಸಲಾಗಿದೆ.ಇದು ಆಪರೇಟಿಂಗ್ ವ್ಯವಸ್ಥೆಯ ಜತೆಯೇ ಬರುವುದರಿಂದ ಬೇರೆ ಆಂಟಿವೈರಸ್ ತಂತ್ರಾಂಶಗಳನ್ನು ಖರೀದಿಸುವ ಪ್ರಮೇಯವಿಲ್ಲ.ಕಂಪ್ಯೂಟರನ್ನು ಇಂಟರ್ನೆಟ್ಗೆ ಸಂಪರ್ಕಿಸಿದೊಡನೆಯೇ,ಆಂಟಿವೈರಸ್ಸನ್ನು ಸನ್ನದ್ಧ ಸ್ಥಿತಿಯಲ್ಲಿರಿಸುವ ಪ್ರಕ್ರಿಯೆ ನಡೆಯುವುದರಿಂದ ಹೊಸ ವೈರಸ್ಗಳು-ದಾಳಿಗಳನ್ನು ಎದುರಿಸಲು ಕಂಪ್ಯೂಟರ್ ಸಿದ್ಧಗೊಳ್ಳುತ್ತದೆ.ಇನ್ನು ಹೊಸ ಕಂಪ್ಯೂಟರ್ ಕೊಂಡಾಗ,ಅದರಲ್ಲಿ ವಿಂಡೋಸ್ 8ನ್ನು ಅಳವಡಿಸಿದ್ದರೆ,ಬಯೋಸ್ ಎನ್ನುವ ಬೂಟಿಂಗ್ ವ್ಯವಸ್ಥೆಯ ಬದಲಿಗೆ ಯುನಿಫೈಡ್ ಎಕ್ಸ್ಟೆನ್ಸಿಬಲ್ ಫರ್ಮ್ವೇರ್ ಇಂಟರ್ಫೇಸ್(ಯು ಇ ಎಫ್ ಐ)ಎನ್ನುವ ಬೂಟಪ್ ವಿಧಾನವನ್ನು ಬಳಸುವ ಮೂಲಕ ಸುಮಾರು ಎಂಟು ಸೆಕೆಂಡಿನೊಳಗೆ ಕಂಪ್ಯೂಟರ್ ಚಾಲೂ ಆಗಿ,ಬಳಕೆಗೆ ಸಿಗುತ್ತದೆ.ಇನ್ನು ಎರಡು ವಿಧದ ಪಾಸ್ವರ್ಡ್ಗಗಳನ್ನಿದರಲ್ಲಿ ಬಳಸಲು ಸಾಧ್ಯ.ಒಂದು ಮಾಮೂಲಿ ಪಿನ್ ಸ್ಂಖ್ಯೆ ಆಧಾರದ್ದು.ಇನ್ನೊಂದು ಚಿತ್ರವನ್ನಾಧರಿಸಿದ್ದು.ಎರಡನೆಯದ್ದರಲ್ಲಿ,ಚಿತ್ರದ ಮೇಲೆ ವೃತ್ತವನ್ನು ಎಳೆಯುವುದು,ಕ್ಲಿಕ್ಕಿಸುವುದು,ಗೆರೆಯೆಯುವುದರ ಮೂಲಕ ತನ್ನನ್ನು ಕಂಪ್ಯೂಟರ್ ಗುರುತಿಸುವಂತೆ ಮಾಡಲು ಬಳಕೆದಾರನಿಗೆ ಸಾಧ್ಯವಾಗುತ್ತದೆ.
UDAYAVANI
*ಅಶೋಕ್ಕುಮಾರ್ ಎ