ಬಾ ಇಲ್ಲಿ ಸಂಭವಿಸು…
‘ಬಾ ಇಲ್ಲಿ ಸಂಭವಿಸು..' ಎನ್ನುವುದು ರಾಷ್ಟ್ರಕವಿ ಕುವೆಂಪು ಅವರ ಜನಪ್ರಿಯ ಕವಿತೆಯ ಸಾಲು. ಲೇಖಕರಾದ ಕೆ. ನಟರಾಜ್ ಅವರು ತಮ್ಮ ದ್ವಿತೀಯ ಕವನ ಸಂಕಲನಕ್ಕೆ ಇದೇ ಹೆಸರನ್ನು ಇರಿಸಿದ್ದಾರೆ. ಈ ಕವನ ಸಂಕಲನದಲ್ಲಿ ೧೦೪ ಪುಟ್ಟ ಕವನಗಳಿವೆ. ಕೆ ನಟರಾಜ್ ಅವರು ತಮ್ಮ ಮಾತಿನಲ್ಲಿ ಅಭಿಪ್ರಾಯ ವ್ಯಕ್ತ ಪಡಿಸುವುದು ಹೀಗೆ-
“ ‘ಬಾ ಇಲ್ಲಿ ಸಂಭವಿಸು...' ಎಂದರೆ ನಮ್ಮ ಸತ್ಯಾತ್ಮವನ್ನು ನಾವು ಕರೆಯುವ ಪರಿ. ಜೀವನದ ಈ ತೊಳಲಾಟದಲ್ಲಿ, ಹೋರಾಟದಲ್ಲಿ ಕೊನೆಗೂ ಸತ್ಯಕ್ಕೆ ಶರಣಾಗುವ ಸಾಲುಗಳು. ಬಹುಷಃ ಈ ಮನದಾಳದ ಸಂಘರ್ಷದಲ್ಲಿ ಈ ಸತ್ಯಾವತಾರ ಹುಟ್ಟಿಬಂದಾಗಲೇ ನಮ್ಮ ಮನಸ್ಸಿಗೆ ಮುಕ್ತಿಯೇನೋ? ಈ ಜೀವನದಲ್ಲಿ ಎಲ್ಲ ತರಹದ ಪಾತ್ರಗಳನ್ನೂ ನಾವು ವಹಿಸಿಬಿಡುತ್ತೇವೆ. ತಾಮಸ ಗುಣಗಳಲ್ಲೇ ಬೇಯುವ ನಾವು ಸತ್ಯದ ಸಾಕ್ಷಾತ್ಕಾರವಾದಾಗಲೇ ಮನುಷ್ಯರೆನ್ನಿಸಿಕೊಳ್ಳಬಹುದೇನೋ...?
ಮಾನವನ ಈ ಹುಡುಕಾಟಗಳು ಆರಂಭವಾದದ್ದು ಬಹುಷಃ ಈ ಜೀವನ ಸಂಗ್ರಾಮದಲ್ಲಿ. ಗೆಲುವಿಗಾಗಿ ಏನೆಲ್ಲ ತಂತ್ರಗಳನ್ನು ಬಳಸಿದಾಗಲೂ ಸೋಲನ್ನುಂಡಾಗ ಕೊನೆಗೆ ನಾವು ಶರಣಾಗುವುದು ಸತ್ಯಕ್ಕೆ. ಈ ಜೀವನವೆಂಬ ಘನಘೋರ ಹೋರಾಟದಲ್ಲಿ ಬಹುಷಃ ಸತ್ಯದ ಯಜಮಾನಿಕೆಯಲ್ಲಿ ನಮ್ಮ ಜೀವನ ಮೌಲ್ಯಗಳು ಅರ್ಥವಾದಾಗ! ಈ ಕುರುಕ್ಷೇತ್ರ ಯುದ್ಧದಲ್ಲಿ ಬಹಳಷ್ಟು ಪ್ರಲೋಭನೆಗಳು ನಮ್ಮನ್ನು ದಾರಿ ತಪ್ಪಿಸಬಹುದು. ಆಗ ಸತ್ಯವೆಂಬ ಪರಮ ಪ್ರಾಮಾಣಿಕ ನೆಲೆಯೊಂದೇ ನಮಗೆ ಶಾಂತಿಯನ್ನು ನೀಡಬಹುದೇನೋ?
ಎಲ್ಲರ ಜೀವನದಲ್ಲೂ ಈ ಹುಡುಕಾಟ ತೊಳಲಾಟಗಳು ಸರ್ವೇ ಸಾಮಾನ್ಯ. ನಮ್ಮ ಎಲ್ಲಾ ವಿರೋಧಾಭಾಸಗಳೂ ಬಹುಷಃ ಕಡಿಮೆಯಾಗಬಹುದಾದ ಸಾಧ್ಯತೆಗಳು ಸತ್ಯದ ಪರಮದರ್ಶನವಾದಾಗಲೇ. ಎಲ್ಲರಂತೆ ನನ್ನದೂ ಒಂದು ಹುಡುಕಾಟ. ಇದರಿಂದ ನಾನು ಯಶಸ್ಸನ್ನು ಗಳಿಸಿದ್ದೇನೆಯೇ ಗೊತ್ತಿಲ್ಲ. ಆದರೆ ನಿರಂತರ ಹುಡುಕಾಟವಂತೂ ನಡೆದೇ ಇದೆ. ಇದೊಂದು ನಿರಂತರ ಪ್ರಯತ್ನವಷ್ಟೇ. ಈ ಮಂಥನದಲ್ಲಿ ಕಂಡ ಮನದ ಹೊಳಹುಗಳನ್ನು ಸೆರೆ ಹಿಡಿದ ಪ್ರಯತ್ನವೇ ಈ ಕವನಗಳ ಉಗಮ ! ಈ ಕವನಗಳನ್ನು ಓದುವುದು ನಿಮಗೆ ಬಿಟ್ಟದ್ದು, ಒಂದಂತೂ ನಿಜ; ಈ ಹುಡುಕಾಟಗಳು ನಿಮ್ಮವೂ ಆಗಿರಬಹುದು.” ಎಂದಿದ್ದಾರೆ.
ನಟರಾಜ್ ಅವರು ಬರೆದ ಒಂದೆರಡು ಕವನಗಳನ್ನು ಗಮನಿಸುವುದಾದರೆ…
ಜೈ ಬೋಳೇ ಶಂಕರ! ಕವನದಲ್ಲಿ
ಹೆಂಡತಿಯ ಮಾತಿಗೆ…
ಸುಮ್ಮನಿರುವವನೇ
ಬುದ್ಧನಂತೆ ಯೋಗಿ!
ಹಿಗ್ಗಿ ಸಂತಸಪಟ್ಟು
ನಲಿಯುವವ ಭೋಗಿ!
ಕಣ್ಣೀರ ಧಾರೆಯಲಿ
ಕೊರಗುವವ ರೋಗಿ!
ಜಗಳವಾಡುವವನು
ಗಡ್ಡ ಬಿಟ್ಟ ಜೋಗಿ!
ನರಳಾಡುವವನನು
ಹೊತ್ತುಕೊಂಡು ಹೋಗಿ!
***
ಕರೆ ಗಂಟೆ
ಹುಟ್ಟುಹಬ್ಬವೆಂದು
ಪ್ರತೀ ವರ್ಷ
ಅದೆಷ್ಟು
ಸಂಭ್ರಮದಲಿ
ಬೀಗಿ
ತೂಗುತಿರುವೆಯಾ
ಗೆಳೆಯಾ…
ಅದು ಸಾವಿನೆಡೆಗೆ
ನೀ ಸಮೀಪಿಸುವ
ಒಂದೊಂದು
ಹೆಜ್ಜೆಯ
ಎಚ್ಚರಿಕೆಯ
ಕರೆ ಗಂಟೆ
ತಿಳಿಯಾ!
೧೧೩ ಪುಟಗಳ ಈ ಪುಸ್ತಕದಲ್ಲಿರುವ ಕವನಗಳು ಓದಲು ಸೊಗಸಾಗಿವೆ. ಕೆಲವು ಹಾಸ್ಯಭರಿತವಾಗಿದ್ದು ನಗೆಯನ್ನೂ ಉಕ್ಕಿಸುತ್ತವೆ. ಕವನ ಪ್ರಿಯರಿಗೆ ಓದಲು ಉತ್ತಮ ಹೊತ್ತಗೆ ಇದು.